ನವದೆಹಲಿ: ಭಾರತ ಸೇರಿದಂತೆ ವಿಶ್ವಾದ್ಯಂತ ಕೋವಿಡ್ 19 ವೈರಸ್ ಅಟ್ಟಹಾಸ ಮಿತಿ ಮೀರತೊಡಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾತ್ರಿ 8ಗಂಟೆಗೆ ಮತ್ತೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ನಾನು ಇಂದು ರಾತ್ರಿ 8ಗಂಟೆಗೆ ದೇಶದ ಜನತೆಯನ್ನು ಉದ್ದೇಶಿಸಿ ಕೋವಿಡ್ 19 ಸೋಂಕು ವಿಚಾರದ ಕುರಿತು ಮಾತನಾಡಲಿದ್ದೇನೆ ಎಂದು ಟ್ವೀಟ್ ನಲ್ಲಿ ಮೋದಿ ವಿವರಿಸಿದ್ದಾರೆ.
ಕೋವಿಡ್ 19 ಕ್ಷಿಪ್ರವಾಗಿ ಹರಡುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಕಳೆದ ಗುರುವಾರದ ಬಳಿಕ ಇದೀಗ ಎರಡನೇ ಬಾರಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾನುವಾರ ದೇಶದ ಜನತೆ ಜನತಾ ಕರ್ಫ್ಯೂ ಮೂಲಕ ಕೋವಿಡ್ 19 ಹರಡುವಿಕೆ ತಡೆಗೆ ಮುಂದಾಗಬೇಕೆಂದು ಕರೆ ನೀಡಿದ್ದರು.
ಏತನ್ಮಧ್ಯೆ ದೇಶದ ಜನರು ಸ್ವಯಂ ಆಗಿ ಹೋಮ್ ಕ್ವಾರಂಟೈನ್ ಆಗಲು ಸಹಕಾರ ನೀಡದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 2ನೇ ಬಾರಿ ಭಾಷಣದಲ್ಲಿ ಪ್ರಧಾನಿ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.