ನವದೆಹಲಿ: ದೇಶದಲ್ಲಿ ಕೋವಿಡ್-19 ಸೊಂಕಿತರ ಸಂಖ್ಯೆ ಮತ್ತು ಮೃತರ ಪ್ರಮಾಣ ಉಲ್ಬಣವಾಗುತ್ತಿರುವ ಬೆನ್ನಲ್ಲೆ ಇಂದು ಪ್ರಧಾನಿ ನರೇದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ 66ನೇ ಮನ್ ಕೀ ಬಾತ್ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದು, ಕೋವಿಡ್ 19 ಸಾಂಕ್ರಮಿಕ ರೋಗದ ವಿರುದ್ಧ ಹೋರಾಟದಲ್ಲಿ ದೇಶದ ಪ್ರಗತಿ ಮತ್ತು ಮುಂದಿನ ಹಾದಿಯ ಕುರಿತು ಪ್ರಮುಖವಾಗಿ ಚರ್ಚಿಸಲಿದ್ದಾರೆ. ಈ ಹಿಂದಿನ 5 ಸಂಚಿಕೆಯಲ್ಲೂ ವೈರಸ್ ನಿಂದ ಚೇತರಿಸಿಕೊಂಡವರ ಅನುಭವದ ಮೇಲೆ ತಮ್ಮ ಮಾತನ್ನು ಕೇಂದ್ರಿಕರಿಸಿದ್ದರು.
ಕಳೆದ ಮೇ 24 ರಂದು ಇದೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅನ್ ಲಾಕ್ 1.0 ಮಾರ್ಗಸೂಚಿಗಳನ್ನು ಪ್ರಕಟಿಸಿದ್ದರು. ಮಾತ್ರವಲ್ಲದೆ ಕೋವಿಡ್ 19 ವಿರುದ್ಧ ಹೋರಾಟ ಸುಧೀರ್ಘವಾದದ್ದು ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರದ ಅಗತ್ಯತೆ ಕುರಿತು ಪ್ರಮುಖವಾಗಿ ಚರ್ಚಿಸಿದ್ದರು. ಇದರ ಜೊತೆಗೆ ಎರಡನೇ ಬಾರಿ ಅಧಿಕಾರಕ್ಕೇರಿ ಒಂದು ವರ್ಷವಾದ ಹಿನ್ನಲೆಯಲ್ಲಿ ಆ ಕುರಿತು ಕೂಡ ಪ್ರಸ್ತಾಪ ನಡೆಸಿದ್ದರು.
ಇದೀಗ ಭಾರತದಲ್ಲಿ ಪ್ರತಿನಿತ್ಯ 18,000 ಹೊಸ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಸೊಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಇಂದು ಮಾತನಾಡಲಿರುವ ಮನ್ ಕೀ ಬಾತ್ ಕಾರ್ಯಕ್ರಮ ಪ್ರಮುಖವೆನಿಸಿಕೊಂಡಿದೆ.