ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ನವೆಂಬರ್ 25) ಎಚ್ ಎಎಲ್ ಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ, ಇದೊಂದು ಅವಿಸ್ಮರಣೀಯ ಅನುಭವವಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿವಿಧ ಭಂಗಿಯ ಫೋಟೋಗಳನ್ನು ಶೇರ್ ಮಾಡಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Kambala:ಅರಸು ಕಂಬಳ ಡಿಸೆಂಬರ್‌ನಲ್ಲಿ ನಡೆಯುವುದು ವಾಡಿಕೆ ಕಂಬಳಕ್ಕೆ ದೈವಾರಾಧನೆಯ ಶಕ್ತಿಯಿದೆ
ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡಾ ಸುಖೋಯ್ 30 ಎಂಕೆ ಯುದ್ಧ ವಿಮಾನದ ಹಾರಾಟ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
“ತೇಜಸ್ ಯುದ್ಧ ವಿಮಾನದ ಹಾರಾಟ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೊಂದು ಮರೆಯಲಾಗದ ಅನುಭವವಾಗಿದೆ. ಅಷ್ಟೇ ಅಲ್ಲ ನಮ್ಮ ದೇಶದ ದೇಶೀಯ ಸಾಮರ್ಥ್ಯದ ಕುರಿತ ವಿಶ್ವಾಸ ಇಮ್ಮಡಿಗೊಂಡಂತಾಗಿದೆ” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ತೇಜಸ್ ನಲ್ಲಿನ ಹಾರಾಟ ನನ್ನಲ್ಲಿ ಅಪಾರವಾದ ಹೆಮ್ಮೆಯನ್ನು ತಂದಿದೆ. ಜೊತೆಗೆ ಸ್ವ ಸಾಮರ್ಥ್ಯದಲ್ಲಿ ಭಾರತ ಜಗತ್ತಿನ ಯಾವ ದೇಶಕ್ಕಿಂತಲೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ಭಾರತದ ವಾಯುಪಡೆ, ಡಿಆರ್ ಡಿಒ ಮತ್ತು ಎಚ್ ಎಎಲ್ ಹಾಗೂ ಎಲ್ಲಾ ಭಾರತೀಯರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು.
ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾರತದ ದೇಶೀಯ ಐಎಎಫ್ ನ ವಿವಿಧ ವಿಮಾನಗಳ ಪ್ರದರ್ಶನ ಏರ್ಪಡಿಸುವ ಮೂಲಕ ವೈಮಾನಿಕ ಕ್ಷೇತ್ರದಲ್ಲಿನ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತಿದ್ದೇವೆ. 2019ರಲ್ಲಿ ಮಲೇಶ್ಯಾ, 2021ರಲ್ಲಿ ದುಬೈ ಏರ್ ಶೋ, 2021ರ ಶ್ರೀಲಂಕಾ ವಾಯುಪಡೆಯ ವಾರ್ಷಿಕೋತ್ಸವ, 2022ರ ಸಿಂಗಾಪೂರ್ ಏರ್ ಶೋ ಮತ್ತು 2017ರಿಂದ 2023ರವರೆಗಿನ Aero India ಶೋ ನಲ್ಲಿ ಐಎಎಫ್ ನ ವಿಮಾನಗಳ ಪ್ರದರ್ಶನ ಮಾಡಲಾಗಿತ್ತು.