ನವದೆಹಲಿ: ಹೊಸ ಸರ್ಕಾರದ ನಾಯಕರಾಗಿರುವ ನರೇಂದ್ರ ಮೋದಿ ಅವರು ಭಾನುವಾರ (ಜೂನ್ 09) ಸಂಜೆ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಸೋಮವಾರ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ್ದು,ಮೊದಲ ದಿನವೇ ಪಿಎಂ ಕಿಸಾನ್ ನಿಧಿಯ ಅನುದಾನ ಬಿಡುಗಡೆ ಕಡತಕ್ಕೆ ಸಹಿ ಹಾಕಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:INDvsPAK: ಪಂದ್ಯ ಸೋತ ಬಳಿಕ ಅಳುತ್ತಿದ್ದ ಪಾಕ್ ಆಟಗಾರನಿಗೆ ಸಂತೈಸಿದ ರೋಹಿತ್ ಶರ್ಮಾ
ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಜತೆಗಿನ ಕ್ಯಾಬಿನೆಟ್ ಸಭೆ ನಡೆಸುವುದು ಪ್ರಧಾನಿ ಮೋದಿ ಅವರ ತಕ್ಷಣದ ಆದ್ಯತೆಯಾಗಿದೆ ಎಂದು ವರದಿ ವಿವರಿಸಿದೆ. ಅಲ್ಲದೇ ಶೀಘ್ರವೇ ಲೋಕಸಭೆ ಕಲಾಪ ಕರೆಯುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಲ್ಲಿ ಮನವಿ ಸಲ್ಲಿಸುವುದು ಕ್ಯಾಬಿನೆಟ್ ನಿರೀಕ್ಷೆಯಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದು, ಮುಂಬರುವ ವರ್ಷಗಳಲ್ಲಿನ ಕೇಂದ್ರ ಸರ್ಕಾರದ ಅಭಿವೃದ್ಧಿ, ಆದ್ಯತೆಗಳ ಬಗ್ಗೆ ವಿವರ ನೀಡಲಿದ್ದಾರೆ.
ಭಾನುವಾರ(ಜೂನ್ 09) ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಪ್ರಧಾನಿ ಮೋದಿ ಹಾಗೂ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಮೋದಿ 3.0ಸರ್ಕಾರದಲ್ಲಿ 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ರಾಜ್ಯ ಸಚಿವರು ಹಾಗೂ 36 ಮಂದಿ ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.