Advertisement

ಸ್ವಾತಂತ್ರ್ಯ ನಂತರ ಖಾದಿಯನ್ನು ಕೀಳು ಭಾವನೆಯಿಂದ ನೋಡಲಾಯಿತು : ಪ್ರಧಾನಿ

08:18 PM Aug 27, 2022 | Team Udayavani |

ಅಹಮದಾಬಾದ್‌: ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿಯವರು ಖಾದಿಯನ್ನು ದೇಶದ ಸ್ವಾಭಿಮಾನದ ಸಂಕೇತವನ್ನಾಗಿ ಮಾಡಿದರು. ಆದರೆ, ಅದೇ ಖಾದಿಯನ್ನು ಸ್ವಾತಂತ್ರ್ಯ ನಂತರ ಕೀಳು ಭಾವನೆಯಿಂದ ನೋಡಲಾಯಿತು.ಇಂತಹ ಚಿಂತನೆಯಿಂದಾಗಿ ಖಾದಿಗೆ ಸಂಬಂಧಿಸಿದ ಗ್ರಾಮೀಣ ಕೈಗಾರಿಕೆಗಳು ನಾಶವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

Advertisement

ಪ್ರಧಾನಿ ಮೋದಿ ಅವರು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರೊಂದಿಗೆ ಅಹಮದಾಬಾದ್‌ನಲ್ಲಿ ನಡೆದ ‘ಖಾದಿ ಉತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಖಾದಿ ಸ್ವಾತಂತ್ರ್ಯ ಚಳವಳಿಯ ಶಕ್ತಿಯಾಯಿತು ಮತ್ತು ಗುಲಾಮಗಿರಿಯ ಸರಪಳಿಗಳನ್ನು ಮುರಿದುಬಿಟ್ಟಿತು ಎಂಬುದನ್ನು ನಾವು ನೋಡಿದ್ದೇವೆ. ಅದೇ ಖಾದಿ ಭಾರತವನ್ನು ಅಭಿವೃದ್ಧಿ ಮತ್ತು ಸ್ವಾವಲಂಬಿಯನ್ನಾಗಿ ಮಾಡಲು ಸ್ಫೂರ್ತಿಯಾಗಬಹುದು ಎಂದರು.

ಖಾದಿ ಈ ಹಿಂದೆ ಫ್ಯಾಷನ್‌ನಿಂದ ಹೊರಗುಳಿದಿತ್ತು, ಖಾದಿ ಉತ್ಸವದ ಕಾರ್ಯಕ್ರಮವು ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಜನರಿಗೆ ಅನುಕೂಲವಾಗುವುದರ ಜೊತೆಗೆ ಜನರಲ್ಲಿ ಖಾದಿ ಬಳಸಲು ಉತ್ತೇಜನ ನೀಡುತ್ತದೆ ಎಂದು ಫಲಾನುಭವಿಯೊಬ್ಬರು ಹೇಳಿದರು.

94 ವರ್ಷ ಹಳೆಯ ಚರಕ ತಿರುಗಿಸಿದ ಪ್ರಧಾನಿ
ಖಾದಿ ಉತ್ಸವದಲ್ಲಿ ಪ್ರಧಾನಿ ಮೋದಿ ಅವರು 7,500 ಕುಶಲಕರ್ಮಿ ಮಹಿಳೆಯರ ಜೊತೆಗೆ ಕುಳಿತು, ಚರಕದಿಂದ ನೂಲು ತೆಗೆದಿದ್ದಾರೆ. ವಿಶೇಷವೆಂದರೆ ಪ್ರಧಾನಿ ಅವರು ತಿರುಗಿಸಿದ ಚರಕವು ಬರೋಬ್ಬರಿ 94 ವರ್ಷಗಳಷ್ಟು ಹಳೆಯದು. ಆ ಚರಕವು ಮೊದಲ ಬಾರಿಗೆ 1928ರಲ್ಲಿ ದಕ್ಷಿಣ ಗುಜರಾತ್‌ನಲ್ಲಿ ಬರ್ದೋಲಿ ಸತ್ಯಾಗ್ರಹದಲ್ಲಿ ಬಳಕೆಯಾಗಿತ್ತು. ಕಾರ್ಯಕ್ರಮಕ್ಕೂ ಮೊದಲು ಮೋದಿ ಅವರು 1920ರ ಕಾಲದ 20 ಚರಕಗಳನ್ನೂ ವೀಕ್ಷಿಸಿದ್ದಾರೆ.

Advertisement

ದಾಖಲೆ ನಿರ್ಮಾಣ
ಖಾದಿ ಉತ್ಸವದಲ್ಲಿ 7,500 ಮಹಿಳೆಯರು ಒಂದೇ ಸೂರಿನಡಿಯಲ್ಲಿ, ಏಕಕಾಲಕ್ಕೆ ನೂಲು ತೆಗೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಹದಿ ಹರೆಯದವರಿಂದ ಹಿಡಿದು, 60 ದಾಟಿದ ಮಹಿಳೆಯರೂ ಕೂಡ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದರು. ಬಿಳಿ ಸೀರೆ ಉಟ್ಟು, ತ್ರಿವರ್ಣದ ಶಾಲನ್ನು ತೊಟ್ಟಿದ್ದ ಮಹಿಳೆಯರು ಚರಕ ತಿರುಗಿಸುತ್ತಾ ಬಿಳಿ ನೂಲು ತೆಗೆದಿದ್ದು ನೋಡುಗರ ಕಣ್ಣಿಗೆ ಹಬ್ಬದಂತಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next