Advertisement

ರಾಜ ತಾಂತ್ರಿಕ ನೈಪುಣ್ಯತೆಯ ಒಂದು ಝಲಕ್‌

10:36 PM Sep 23, 2019 | mahesh |

ಅಮೆರಿಕದ ಹ್ಯೂಸ್ಟನ್‌ನಲ್ಲಿ ರವಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಯಾಗಿ ಭಾಗವಹಿಸಿದ ಹೌಡಿ ಮೋದಿ ಕಾರ್ಯಕ್ರಮ ಹಲವು ಕಾರಣಗಳಿಗಾಗಿ ಮಹತ್ವಪೂರ್ಣ ಎನಿಸಿಕೊಂಡಿದೆ. ಹೌಡಿ ಮೋದಿಯ ಮೂಲಕ ಮೋದಿ ಭಾರತ ಸಾಮರ್ಥ್ಯ ಮತ್ತು ಜನಪ್ರಿಯತೆಯನ್ನು ಜಗತ್ತಿನೆದುರು ಅನಾವರಣಗೊಳಿಸಿದ್ದಾರೆ. ಅಂತೆಯೇ ಭಾರತದ ವಾಣಿಜ್ಯ, ಭದ್ರತೆ, ವಿದೇಶಾಂಗ ನೀತಿ ಮುಂತಾದವುಗಳು ಒಂದು ಝಲಕ್‌ನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

Advertisement

ಹ್ಯೂಸ್ಟನ್‌ ಕಾರ್ಯಕ್ರಮ ನಡೆದ ಸಮಯವೂ ಭಾರತದ ಪಾಲಿಗೆ ಬಹಳ ಮುಖ್ಯವಾಗುತ್ತದೆ. ಜಮ್ಮು-ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ಬೆನ್ನಿಗೆ ಈ ಕಾರ್ಯಕ್ರಮ ನಡೆದಿದೆ. ಈ ವಿಚಾರವನ್ನು ಅಂತಾ ರಾಷ್ಟ್ರೀಯ ವೇದಿಕೆಗೆ ಒಯ್ಯುವ ಪಾಕಿಸ್ತಾನದ ಯಾವುದೇ ಪ್ರಯತ್ನ ವನ್ನು ವಿಫ‌ಲಗೊಳಿಸಲು ಈ ಮಾದರಿಯ ಒಂದು ಬೃಹತ್‌ ವೇದಿಕೆ ಭಾರತಕ್ಕೆ ಅಗತ್ಯವಿತ್ತು. ಅಂತೆಯೇ ವಾಣಿಜ್ಯ ವಿಚಾರಕ್ಕೆ ಸಂಬಂಧಿಸಿ ದಂತೆ ಅಮೆರಿಕ ಮತ್ತು ಭಾರತದ ಮಧ್ಯೆ ಸಂಘರ್ಷದ ವಾತಾವರಣ ಏರ್ಪಟ್ಟಿರುವ ಹಿನ್ನೆಲೆಯಲ್ಲೂ ಹೌಡಿ ಮೋದಿ ಕಾರ್ಯಕ್ರಮಕ್ಕೆ ಮಹತ್ವವಿದೆ. ಅಂತೆಯೇ ದೇಶದ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲೂ ಮೋದಿ ಅಮೆರಿಕದಲ್ಲಿ ಮಾಡಿರುವ ಮೋಡಿ ಸಕಾರಾತ್ಮಕವಾದ ಸಂದೇಶವನ್ನು ನೀಡುವ ನಿರೀಕ್ಷೆಯಿದೆ.

370 ವಿಧಿ ರದ್ದುಪಡಿಸಿದ ತೀರ್ಮಾನವನ್ನು ಮೋದಿ ಈ ವೇದಿಕೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಸಮರ್ಥಿಸಿಕೊಂಡಿದ್ದಾರೆ. ಕಾಶ್ಮೀರ ಅಭಿವೃದ್ಧಿಯಲ್ಲಿ ಹಿಂದುಳಿಯಲು, ಅಲ್ಲಿ ಭಯೋತ್ಪಾದನೆ ಸೃಷ್ಟಿಯಾಗಲು ಈ ವಿಧಿಯೇ ಕಾರಣವಾಗಿತ್ತು ಎನ್ನುವುದನ್ನು ಜಗತ್ತಿಗೆ ತಿಳಿಸಿದ್ದಾರೆ. ನ್ಯೂಯಾರ್ಕ್‌ ನಗರದ ಮೇಲೆ ನಡೆದ 9/11 ಭಯೋತ್ಪಾದಕ ದಾಳಿ ಮತ್ತು ಮುಂಬಯಿ ಮೇಲೆ ನಡೆದ 26/11 ಭಯೋತ್ಪಾದಕ ದಾಳಿಯ ಮೂಲ ನೆಲೆ ಒಂದೇ ಎನ್ನುವ ಮೂಲಕ ಪಾಕಿಸ್ಥಾನಕ್ಕೆ ಎಲ್ಲಿ ಮತ್ತು ಹೇಗೆ ಹೊಡೆಯಬೇಕಿತ್ತೋ ಅದೇ ರೀತಿ ಹೊಡೆದಿದ್ದಾರೆ. ಭಯೋತ್ಪಾದನೆಯ ವಿರುದ್ಧ ನಿರ್ಣಾಯಕ ಸಮರ ಸಾರಲು ಈಗ ಸಮಯ ಕೂಡಿ ಬಂದಿದೆ ಎನ್ನುವ ಮೂಲಕ ನಮ್ಮ ತಂಟೆಗೆ ಬಂದರೆ ತಕ್ಕ ಶಾಸ್ತಿ ಮಾಡಿಯೇ ತೀರುತ್ತೇವೆ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ. ಉಭಯ ದೇಶಗಳು ಭಯೋತ್ಪಾದನೆ ಜಾಗತಿಕ ಶಾಂತಿಗೆ ಎದುರಾಗಿರುವ ಬಲುದೊಡ್ಡ ಅಪಾಯ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದು, ಇದರಿಂದ ಪಾಕಿಸ್ತಾನಿ ಪ್ರಾಯೋಜಿತ ಭಾರತ ನಡೆಸುತ್ತಿರುವ ಹೋರಾಟಕ್ಕೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದಂತಾಗಿದೆ.

ಹ್ಯೂಸ್ಟನ್‌ ಕಾರ್ಯಕ್ರಮದಲ್ಲಿ 50,000ಕ್ಕೂ ಅಧಿಕ ಅನಿವಾಸಿ ಭಾರತೀಯರು ಭಾಗವಹಿಸಿದರೆ ಇನ್ನೂ ಹಲವು ಲಕ್ಷ ಮಂದಿ ಟಿವಿ ಹಾಗೂ ಇತರ ಮಾಧ್ಯಮಗಳ ಮೂಲಕ ವೀಕ್ಷಿಸಿದ್ದಾರೆ. ಅನಿವಾಸಿ ಭಾರತೀಯರ ಸಾಮರ್ಥ್ಯ, ಅವರ ಉಪಸ್ಥಿತಿ, ಕೊಡುಗೆಯನ್ನು ಶ್ಲಾ ಸುವ ಮೂಲಕ ಮೋದಿ ಅವರಲ್ಲಿ ಹೆಮ್ಮೆಯ ಭಾವವನ್ನು ಮೂಡಿಸಿದ್ದಾರೆ. ಈ ಮೂಲಕ ಅನಿವಾಸಿ ಭಾರತೀಯರಲ್ಲಿ ತಮ್ಮ ತವರು ದೇಶದ ಬಗ್ಗೆ ಸಕಾರಾತ್ಮಕವಾದ ಅಭಿಪ್ರಾಯವನ್ನು ಮೂಡಿಸುವಲ್ಲಿ ಸಫ‌ಲರಾಗಿದ್ದಾರೆ.

ಇದೇ ವೇಳೆ ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆ ಎದುರಿಸಲಿರುವ ಟ್ರಂಪ್‌ಗೆ ಕೂಡಾ ಈ ಸಮಾವೇಶ ಮುಖ್ಯವಾಗಿತ್ತು. ಇಲ್ಲಿಂದಲೇ ಅವರು ತಮ್ಮ ಚುನಾವಣಾ ಪ್ರಚಾರವನ್ನು ಶುರು ಮಾಡಿದರು. ಅಬ್‌ ಕಿ ಬಾರ್‌ ಮೋದಿ ಸರ್ಕಾರ್‌ ಎಂಬ 2014ರಲ್ಲಿ ಅಧಿಕಾರಕ್ಕೇರಲು ಬಳಸಿದ್ದ ಘೋಷಣೆಯನ್ನು ಟ್ರಂಪ್‌ಗೆ ಮೋದಿ ಈ ಸಲದ ಚುನಾವಣೆ ಎದುರಿಸಲು ಕೊಡುಗೆಯಾಗಿ ನೀಡಿದ್ದಾರೆ. ಈ ಮೂಲಕ ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ಬೆಂಬಲ ನಿಮಗಿದೆ ಎಂಬ ಅಭಯವನ್ನು ನೀಡಿದ್ದಾರೆ. ಹೀಗೆ ಭಾರತದ ರಾಜತಾಂತ್ರಿಕ ನೈಪುಣ್ಯತೆಯನ್ನು ಅನಾವರಣಗೊಳಿಸಿದ ಮತ್ತು ಉಭಯ ದೇಶಗಳ ಸ್ನೇಹವನ್ನು ಇನ್ನೊಂದು ಮಜಲಿಗೆ ಒಯ್ದಿರುವ ಹೌಡಿ ಮೋದಿ ಖಂಡಿತವಾಗಿಯೂ ಒಂದು ಐತಿಹಾಸಿಕ ಕಾರ್ಯಕ್ರಮವೇ ಸರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next