Advertisement

Farmers ಉತ್ಪಾದಕತೆಯನ್ನು ಹೆಚ್ಚಿಸುವ 109 ಬೀಜ ತಳಿಗಳ ಬಿಡುಗಡೆ ಮಾಡಿದ ಪ್ರಧಾನಿ

05:37 PM Aug 11, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ(ಆಗಸ್ಟ್ 11) ರಂದು ಕೃಷಿ ಉತ್ಪಾದಕತೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಅಧಿಕ ಇಳುವರಿ, ಹವಾಮಾನ-ನಿರೋಧಕ ಮತ್ತು ಜೈವಿಕ ಬಲವರ್ಧಿತ 109 ಬೀಜ ಪ್ರಭೇದಗಳನ್ನು ಬಿಡುಗಡೆ ಮಾಡಿದ್ದಾರೆ.

Advertisement

ದೆಹಲಿಯ ಪುಸಾ ಕ್ಯಾಂಪಸ್‌ನಲ್ಲಿ ಮೂರು ಪ್ರಾಯೋಗಿಕ ಕೃಷಿ ಪ್ಲಾಟ್‌ಗಳಲ್ಲಿ ಬೀಜಗಳನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ ಅವರು ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಅಭಿವೃದ್ಧಿಪಡಿಸಿದ ಈ ಪ್ರಭೇದಗಳು 34 ಕ್ಷೇತ್ರ ಬೆಳೆಗಳು ಮತ್ತು 27 ತೋಟಗಾರಿಕಾ ಬೆಳೆಗಳನ್ನು ಒಳಗೊಂಡಂತೆ 61 ಬೆಳೆಗಳನ್ನು ಒಳಗೊಂಡಿವೆ.

”ನಮ್ಮ ರೈತ ಸಹೋದರ ಸಹೋದರಿಯರನ್ನು ಸಬಲೀಕರಣಗೊಳಿಸಲು ನಾವು ಬದ್ಧರಾಗಿದ್ದೇವೆ. ಈ ದಿಸೆಯಲ್ಲಿ 109 ಹೊಸ ತಳಿಗಳನ್ನು ಬಿಡುಗಡೆ ಮಾಡುವ ಅವಕಾಶ ಸಿಕ್ಕಿದೆ. ಹವಾಮಾನ ಸ್ನೇಹಿ ಮತ್ತು ಹೆಚ್ಚು ಇಳುವರಿ ನೀಡುವ ಈ ತಳಿಗಳಿಂದ ಉತ್ಪಾದನೆ ಹೆಚ್ಚಾದಂತೆ ನಮ್ಮ ರೈತರ ಆದಾಯವೂ ಹೆಚ್ಚುತ್ತದೆ” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್ ಮಾಡಿದ್ದಾರೆ.

Advertisement

ಕ್ಷೇತ್ರ ಬೆಳೆಗಳು ಯಾವವು?: ಸಿರಿಧಾನ್ಯ ಸೇರಿ ವಿವಿಧ ನಮೂನೆಯ ಧಾನ್ಯಗಳು, ಮೇವು ಬೆಳೆ, ಎಣ್ಣೆ ಬೀಜ ಗಳು, ದ್ವಿದಳ ಧಾನ್ಯ, ಗೋಧಿ, ಭತ್ತ, ಕಬ್ಬು, ಹತ್ತಿ ಮತ್ತು ಇತರ ಬೆಳೆಗಳ ತಳಿಗಳು ಸೇರಿವೆ. ಈ ಬೆಳೆಗಳು ಆಹಾರ ಪೂರೈಕೆ, ಪಶು ಆಹಾರ ಹಾಗೂ ಕಚ್ಚಾ ವಸ್ತುಗಳ ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಬೆಳೆಗಳನ್ನು ಭಾರೀ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.

ತೋಟಗಾರಿಕಾ ಬೆಳೆಗಳು ಯಾವುವು?: ವಿವಿಧ ನಮೂನೆಯ ಹಣ್ಣುಗಳು, ತರಕಾರಿ, ಗೆಡ್ಡೆ, ಮಸಾಲೆ ಬೆಳೆಗಳು, ಹೂ ಮತ್ತು ಗಿಡಮೂಲಿಕೆಗಳು ತಳಿಗಳು ಇದರಲ್ಲಿ ಸೇರಿವೆ. ತೋಟಗಾರಿಕಾ ಬೆಳೆಗಳು ವಿಶೇಷ ವಾಗಿ ಪೌಷ್ಟಿಕಾಂಶ, ಸೌಂದರ್ಯ ವರ್ಧಕ, ಔಷಧ ಕಂಪೆನಿಗಳಿಗೆ ಹೆಚ್ಚು ಮಹತ್ವದ್ದಾಗಿರುತ್ತವೆ.

ಜೈವಿಕ ಬಲವರ್ಧಿತ ತಳಿಗಳು: ಜೈವಿಕ ಬಲವರ್ಧಿತ ಬೆಳೆಗಳಲ್ಲಿನ ಪೋಷಂಕಾಶಗಳನ್ನು ಹೆಚ್ಚಿಸಲಾಗಿರುತ್ತದೆ. ಅಪೌಷ್ಟಿಕಾಂಶ ಕೊರತೆ ನೀಗಿಸುವ ನಿಟ್ಟಿನಲ್ಲಿ ಈ ಬೆಳೆಗಳು ಹೆಚ್ಚು ಪ್ರಾಮುಖ್ಯ ವಹಿಸಲಿವೆ. ಸರಕಾರಿ ಪ್ರಾಯೋಜಿತ ಬಿಸಿಯೂಟ, ಅಂಗನವಾಡಿ ಯೋಜನೆಗಳಿಗೆ ನೆರವು ನೀಡಲಿವೆ ಎಂಬುದು ಪ್ರಧಾನಿ ಅವರ ಆಶಯ.

ಏನಿದು ಯೋಜನೆ?
ಪ್ರಧಾನಿ ಸದಾ ಸುಸ್ಥಿರ ಕೃಷಿ ಹೆಚ್ಚು ಒತ್ತು ನೀಡು ತ್ತಾರೆ. ಈ ತಳಿಗಳು ರೈತರಿಗೆ ಹೆಚ್ಚು ಆದಾಯದ ಜತೆಗೆ ಔದ್ಯೋಗಿಕ ಅವಕಾಶಗಳಿಗೆ ಬಾಗಿಲು ತೆರೆಯಲಿದೆ. ಅದರ ಭಾಗವಾಗಿಯೇ ಅಧಿಕ ಇಳುವರಿ ತಳಿ ಬಿಡುಗಡೆ ಮಾಡಲಾಗಿದೆ.

ಕರ್ನಾಟಕದ 2 ಗೇರು ತಳಿಗಳು
ಪುತ್ತೂರಿನಲ್ಲಿರುವ ಗೇರು ಸಂಶೋಧನ ಕೇಂದ್ರ ಅಭಿವೃದ್ಧಿಪಡಿಸಿದ 2 ಗೇರು ತಳಿಗಳು, ಕಾಸರಗೋಡು ಸಿಪಿಸಿಆರ್‌ಐ ಅಭಿವೃದ್ಧಿಪಡಿಸಿದ ತಲಾ ಎರಡು ತೆಂಗು ಮತ್ತು ಕೊಕೊ ತಳಿಗಳು ರವಿವಾರ ಬಿಡುಗಡೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next