Advertisement

Bengaluru, ಸುತ್ತಲಿನ 3 ಜಿಲ್ಲೆಯಲ್ಲಿ ಅಪಘಾತ ಹೆಚ್ಚಳ

05:52 PM Sep 11, 2024 | Team Udayavani |

ರಾಮನಗರ: ರಾಜಧಾನಿ ಬೆಂಗಳೂರು ಹಾಗೂ ಇದಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳು ರಸ್ತೆ ಅಪಘಾತದ ಹಾಟ್‌ಸ್ಪಾಟ್‌ ಆಗಿದೆಯಾ..?

Advertisement

ಹೌದು ಎನ್ನುತ್ತಿದೆ ಪೊಲೀಸ್‌ ಇಲಾಖೆಯ ಅಂಕಿ ಅಂಶಗಳ ಮಾಹಿತಿ!. ಕಳೆದ 3 ವರ್ಷಗಳ ಆಗಸ್ಟ್‌ವರೆಗಿನ ಅಪಘಾತ ಪ್ರಮಾಣ ಪರಿಶೀಲಿಸಿದರೆ ಬೆಂಗಳೂರು ನಗರ ಹಾಗೂ ರಾಜಧಾನಿಗೆ ಹೊಂದಿಕೊಂಡಿರುವ ಬೆಂ. ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲೇ ಹೆಚ್ಚು ರಸ್ತೆ ಅಪಘಾತ ಸಂಭವಿಸಿವೆ. ಇಡೀ ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಈ 4 ಜಿಲ್ಲೆಗಳಲ್ಲೇ ಶೇ.25ರಷ್ಟು ಮಂದಿ ಸಾವಿಗೀಡಾಗಿದ್ದಾರೆ.

3 ವರ್ಷಗಳಲ್ಲಿ 5 ಸಾವಿರ ಮಂದಿ ಸಾವು:
ಬೆಂಗಳೂರು ನಗರ, ರಾಜಧಾನಿಗೆ ಹೊಂದಿಕೊಂಡ 3 ಜಿಲ್ಲೆಗಳಲ್ಲಿ ಕಳೆದ 3 ವರ್ಷದ ಅವಧಿಯ ಆಗಸ್ಟ್‌ ಅಂತ್ಯಕ್ಕೆ ರಸ್ತೆ ಅವಘಡದಲ್ಲಿ 5,335 ಮಂದಿ ಸಾವಿಗೀಡಾಗಿದ್ದರೆ, ಇಡೀ ರಾಜ್ಯದಲ್ಲಿ ಈ ಅವಧಿಗೆ 23,738 ಮಂದಿ ಮೃತಪಟ್ಟಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ವಾಹನ ದಟ್ಟಣೆಯೇ ಅಪಘಾತ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.

ಕಮಿಷನರೇಟ್‌ಗಳಲ್ಲಿ ಅಪಘಾತ ಹೆಚ್ಚು:
ರಾಜ್ಯದಲ್ಲಿ ಬೆಂಗಳೂರು ನಗರ ಸೇರಿ 6 ಪೊಲೀಸ್‌ ಕಮಿಷನ ರೇಟ್‌ಗಳಿವೆ. ಕಳೆದ 3 ವರ್ಷಗಳಲ್ಲಿ ಹುಬ್ಬಳ್ಳಿ ಮತ್ತು ಕಲಬುರಗಿ ಕಮಿಷನರೇಟ್‌ ಹೊರತುಪಡಿಸಿದರೆ ಬೆಂಗಳೂರು ನಗರ, ಮೈಸೂರು ನಗರ, ಹುಬ್ಬಳ್ಳಿ ಧಾರವಾಡ, ಬೆಳಗಾವಿ ವ್ಯಾಪ್ತಿಯಲ್ಲಿ ಅಪಘಾತ ಪ್ರಮಾಣ ಈ ಹಿಂದಿನ ಸಾಲಿಗಿಂತ ಈ ಬಾರಿ ಹೆಚ್ಚಾಗಿದೆ. ರಾಜ್ಯದ 32 ಪೊಲೀಸ್‌ ವಿಭಾಗಗಳ ಪೈಕಿ (ರೈಲ್ವೆ, ಕೆಜಿಎಫ್‌) ಸೇರಿ 15ರಲ್ಲಿ ಅಪಘಾತ ಪ್ರಮಾಣ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚಾಗಿದೆ. ಉಳಿದಂತೆ 17 ವಿಭಾಗಗಳಲ್ಲಿ ರಸ್ತೆ ಅಪಘಾತದಲ್ಲಿ ಮೃತರ ಪ್ರಮಾಣ ಕಡಿಮೆಯಾಗಿದೆ.

ಅತಿ ಹೆಚ್ಚು, ಕಡಿಮೆ ಅಪಘಾತದ ವಿವರ:
ಪ್ರಸಕ್ತ ವರ್ಷದ ಆಗಸ್ಟ್‌ ವರೆಗೆ ಅತಿ ಹೆಚ್ಚು ರಸ್ತೆ ಅಪಘಾತ ಸಂಭವಿಸಿದ ವಿಭಾಗಗಳ ಈ ವಿವರ ಇಂತಿದೆ. ಬೆಂಗಳೂರು ನಗರ 564, ತುಮಕೂರು 470, ಬೆಂಗಳೂರು ಗ್ರಾಮಾಂತರ . 454, ಬೆಳಗಾವಿ 450, ಮಂಡ್ಯ 340 ರಸ್ತೆ ಅಪಘಾತಗಳು ಸಂಭವಿಸಿವೆ.

Advertisement

ರಾಜ್ಯದಲ್ಲಿ ತಗ್ಗಿದ ಅಪಘಾತ ಮರಣ ಸಂಖ್ಯೆ
ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗು ವವರ ಸಂಖ್ಯೆ ಕಳೆದ 3 ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಕಡಿಮೆಯಾಗಿದೆ. 2022ರಲ್ಲಿ ಆಗಸ್ಟ್‌ವರೆಗೆ 7,996 ಮಂದಿ, 2023ರಲ್ಲಿ ಈ ಸಂಖ್ಯೆ 8,146 ಇತ್ತು. ಈ ವರ್ಷದ ಆಗಸ್ಟ್‌ ಅಂತ್ಯಕ್ಕೆ 7,596 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 550 ಸಾವಿನ ಪ್ರಮಾಣ ಕಡಿಮೆಯಾಗಿದೆ.

ರಸ್ತೆ ಅಪಘಾತ ಮತ್ತು ಸಾವು ನಿಯಂತ್ರಿಸುವುದು ಹಾಗೂ ರಸ್ತೆ ಸುರಕ್ಷತೆ ಖಚಿತಪಡಿಸುವುದು ಸವಾಲಿನ ಕೆಲಸ. ಪೊಲೀಸ್‌ ಅಧಿಕಾರಿಗಳು ಅಪಘಾತದಿಂದಾಗುವ ಸಾವಿನ ಪ್ರಮಾಣ ತಗ್ಗಿಸಲು ಸಾಕಷ್ಟು ಪರಿಶ್ರಮ ವಹಿಸಿದ್ದಾರೆ. ಅವರಿಗೆ ಅಭಿನಂದನೆ.
-ಅಲೋಕ್‌ಕುಮಾರ್‌, ಎಡಿಜಿಪಿ ರಸ್ತೆ ಸುರಕ್ಷತೆ ಮತ್ತು ಸಂಚಾರ

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next