Advertisement

ಮೇ 28 ಜನ್ಮ ಜಯಂತಿ:ದೇಶಕ್ಕಾಗಿ ಬದುಕಿದ ಮಹಾನ್‌ ಚೇತನ…ವಿನಾಯಕ ದಾಮೋದರ ಸಾವರ್ಕರ್‌

11:39 AM May 28, 2022 | Team Udayavani |

ಒಬ್ಬ ತೆಳ್ಳನೆಯ, ಬೆಳ್ಳನೆಯ, ಗಂಭೀರ ಮುಖದ ಹುಡುಗ (12-13 ವರ್ಷಗಳಿರಬಹುದು) ದೇಶದ ಪರಂಪರೆಯ ಬಗ್ಗೆ, ಸ್ವಾಭಿಮಾನದ ಬಗ್ಗೆ, ಹಿಂದೂ ವೀರರ ಬಗ್ಗೆ ಪರಿಣಾಮಕಾರಿಯಾಗಿ ಮಾತನಾಡುತ್ತಿದ್ದ. ಆ ಸಣ್ಣ ವಯಸ್ಸಿನಲ್ಲೇ ಅದೇನು ತಿಳಿವಳಿಕೆ, ಅದೇನು ದೇಶಭಕ್ತಿ, ಅದೇನು ವಿಚಾರವಂತಿಕೆ! ಅಲ್ಲಿದ್ದವರೆಲ್ಲಾ ಆ ಬಾಲಕನ ಅಪ್ರತಿಮ ದೇಶಭಕ್ತಿ ಕಂಡು ಬೆರಗಾಗಿದ್ದಾರೆ. ಯಾರು ಈ ತೇಜಸ್ವಿ, ಮೈಮನವೆಲ್ಲಾ ದೇಶಭಕ್ತಿ ತುಂಬಿಕೊಂಡಿರುವ ಹುಡುಗ?

Advertisement

ಈ ಬಾಲಕನೇ ವಿನಾಯಕ ದಾಮೋದರ ಸಾವರ್ಕರ್‌. ಇವರ ಜೊತೆ ಇವರ ಅಣ್ಣ ವಿನಾಯಕ ಸಾವರ್ಕರ್‌ ಕೂಡ ಇದ್ದರು. ಈತನ ನೇತೃತ್ವದಲ್ಲಿ ರಚನೆಯಾದ ದೇಶಭಕ್ತ ಸಂಘಟನೆಗೆ ಅಂದೇ “ಅಭಿನವ ಭಾರತ” ಎಂದು ಹೆಸರಿಡಲಾಯಿತು. ಇದು ನಡೆದದ್ದು ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ.

ವೀರ ಸಾವರ್ಕರ್‌ ತಮ್ಮಲ್ಲಿ ರಕ್ತಗತವಾಗಿ ಇದ್ದ ವಿವಿಧ ವಿದ್ಯೆಗಳನ್ನು ಸೃಜನಾತ್ಮಕ ಕಲೆಯನ್ನು ಬಳಸಿ ವಿವಿಧ ಪ್ರಕಾರಗಳಲ್ಲಿ ಜನರಲ್ಲಿ-ಸ್ವಾತಂತ್ರ್ಯದ ಬಗ್ಗೆ ಜಾಗೃತಿ ತುಂಬುವ, ಸ್ವಾಭಿಮಾನ ಮೂಡಿಸುವ, ಜನರನ್ನು ಬಡಿದೆಬ್ಬಿಸುವ ಮಹಾನ್‌ ಕಾರ್ಯವನ್ನು ಹಗಲಿರುಳು ಬಿಡುವಿಲ್ಲದಂತೆ ಮಾಡುತ್ತಿದ್ದರು. ಅವರೊಬ್ಬ ಶ್ರೇಷ್ಠ ಕವಿ, ವಿಚಾರವಂತ, ಅತ್ಯುತ್ತಮ ಲೇಖಕ, ಉತ್ತಮ ವಕೀಲ, ಪ್ರಭಾವಶಾಲಿ ಸಂಘಟಕ, ಪರಿಣಾಮಕಾರಿ ವಾಕ್ಪಾಟುವಾಗಿದ್ದರು. ತಮ್ಮ ಇಡೀ ಬದುಕನ್ನೇ ದೇಶ ಸೇವೆಗಾಗಿ, ಸ್ವಾತಂತ್ರ್ಯಕ್ಕಾಗಿ ಮೀಸಲಾಗಿಟ್ಟ ಮಹಾಯೋಗಿ.

ಸಾವರ್ಕರರ ನೇತೃತ್ವದಲ್ಲಿ “ಅಭಿನವ ಭಾರತ” ಸಂಘಟನೆಯ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳು ವಿವಿಧ ರೀತಿಯಲ್ಲಿ ನಡೆಯುತ್ತಾ ಹೋದವು.
“ಅಭಿನವ ಭಾರತ’ದಿಂದ ಒಂದು ರೀತಿಯ ಸ್ವದೇಶಿ ಆಂದೋಲನವೇ ಪ್ರಾರಂಭವಾಯಿತು. ಕೇವಲ ಪ್ರತಿಭಟನಾ ಸಭೆ, ಮೆರವಣಿಗೆ, ಭಾಷಣ ಅಲ್ಲದೆ ವಿಶೇಷ ರೀತಿಯ ಆಕ್ರೋಶ ವ್ಯಕ್ತಿಪಡಿಸುವ ಪ್ರತಿಭಟನೆಗೆ ಸಾವರ್ಕರ್‌ ನಾಂದಿ ಹಾಡಿದ್ದರು. ಸಾರ್ವಜನಿಕ ಸ್ಥಳದಲ್ಲಿ ವಿದೇಶೀ ಬಟ್ಟೆಗಳನ್ನು ಒಂದು ಕಡೆ ಗುಡ್ಡೆ ಹಾಕಿ ದಹನ ಮಾಡಲಾಯಿತು. ಇದು ಅತ್ಯಂತ ಪರಿಣಾಮಕಾರಿ ಯಾಯಿತು. ಇದನ್ನು ನೋಡಿದ ಲೋಕಮಾನ್ಯ ತಿಲಕರು ಹೇಳಿದ್ದರು-“ಹಿಂದೂಸ್ಥಾನದಲ್ಲಿ ಹೊತ್ತಿದ ಈ ಕಿಡಿ ಇದೇ ಪ್ರಪ್ರಥಮವಾದುದು. ಇದರ ಕಿಡಿ ಎಲ್ಲ ಕಡೆ ವ್ಯಾಪಿ ಸುತ್ತದೆ, ಇಂಗ್ಲೆಂಡನ್ನು ತಲುಪತ್ತದೆ.” ಈ ಎಲ್ಲಾ ಕಾರಣ ಗಳಿಂದಾಗಿ ಸಾವರ್ಕರ್‌ರನ್ನು ಮಹಾವಿದ್ಯಾಲಯದ ವಸತಿ ಗೃಹದಿಂದ ಹೊರದೂಡಲಾಯಿತು. ಮಿತ್ರನ ಮನೆಯಲ್ಲೆ ಇದ್ದು ವ್ಯಾಸಂಗ ಮುಂದುವರೆಸಿ ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕಿ ಪಡೆದು ಉತ್ತೀರ್ಣ ರಾದರು. ಅವರು ತಮ್ಮ ಮಿತ್ರರಿಗೆ ಹೇಳುತ್ತಿದ್ದುದು ಇದೇ “ನೀವು ಯಾವುದೇ ಕಾರಣಕ್ಕೂ ವ್ಯಾಸಂಗದಲ್ಲಿ ಹಿಂದೆ ಸರಿಯಬೇಡಿ ವಿದ್ಯೆಯೂ ನಮ್ಮ ಹೋರಾಟಕ್ಕೆ ಸಹಕಾರಿಯಾಗುತ್ತದೆ.”

Advertisement

ಪದವಿಯ ನಂತರ ಸಾವರ್ಕರ್‌ ಪಯಣ ಇಂಗ್ಲೆಂಡಿನ ಕಡೆಗೆ. ಅಭಿನವ ಭಾರತದ ಚಟುವಟಿಕೆಯನ್ನು ನಿರಂತರ ನಡೆಸುವಂತೆ ಗೆಳೆಯರಿಗೆ ತಿಳಿಸಿ ಆಂಗ್ಲರ ಬೀಡಿನಲ್ಲಿ ಸ್ವದೇಶಿ ಕ್ರಾಂತಿ ಪ್ರಾರಂಭಿಸಿದರು. ನಿರಂತರ ಇವರ ದೇಶಭಕ್ತಿ ಮೂಡಿಸುವ ಲೇಖನವು ಪ್ರಕಟವಾಗುತ್ತಿದ್ದವು. ಭಾರತದಲ್ಲಿ ಆಂಗ್ಲರು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಆಂಗ್ಲರ ವಿರುದ್ಧ ಇಂಗ್ಲೆಂಡ್‌ನ‌ಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು. ಇಂಗ್ಲೆಂಡಿನಲ್ಲಿ ಭಾರತ ಮೂಲದ ಅನೇಕರು ಇವರ ಸಂಪರ್ಕ ಬಯಸುತ್ತಿದ್ದರು. 1906ರಲ್ಲಿ ಸಾವರ್ಕರ್‌ ಲಂಡನ್‌ಗೆ ಕಾನೂನು ಪದವಿಗೆಂದು ಬಂದ ನಂತರ ಇಂಗ್ಲೆಂಡಿನಲ್ಲಿದ್ದ ಭಾರತೀಯರಿಗೆ ಸ್ವಾತಂತ್ರ್ಯದ ಬಗ್ಗೆ ಹೊಸ ಆಶಾಕಿರಣ ಮೂಡಿತ್ತು. ಜನರಲ್ಲಿ ಒಂದು ರೀತಿಯ ನಕಾರಾತ್ಮಕ ಭಾವನೆ ಉಂಟು ಮಾಡಲು ಆಂಗ್ಲರು 1857ರಲ್ಲಿ ಆದ ಯುದ್ಧವನ್ನು ಸಿಪಾಯಿದಂಗೆ ಎಂದು ಕರೆದಿದ್ದರು. ಆದರೆ ಸಾವರ್ಕರ್‌ ಇದನ್ನು ಸ್ವಾತಂತ್ರ್ಯ ಸಂಗ್ರಾಮ ಎಂದು ನಾಮಕರಣ ಮಾಡಿದರು. ಸ್ವಾತಂತ್ರ್ಯ ಸಂಗ್ರಾಮದ ವಾಸ್ತವ ಸಂಗತಿಗಳನ್ನು ಭಾರತೀಯರ ಹೋರಾಟವನ್ನು ಬಿಡಿ, ಬಿಡಿಯಾಗಿ ತಮ್ಮ The Indian War of Independence ಪುಸ್ತಕದಲ್ಲಿ ಬರೆದರು. ಈ ಪುಸ್ತಕದಿಂದ ಅನೇಕ ಮರೆಮಾಚಿದ್ದ ವಿಷಯಗಳು ಜನರಿಗೆ ತಲುಪಿತು. ಈ ಪುಸ್ತಕಕ್ಕೆ ಅತ್ಯಂತ ಬೇಡಿಕೆ ಇತ್ತು. ಕೇವಲ ಭಾರತೀಯರಲ್ಲದೆ ವಿದೇಶಿಯರು ಈ ಪುಸ್ತಕ ಓದಿ ಪ್ರೇರೇಪಿತರಾದರು.

1908ರಲ್ಲೇ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನೆನಪಿಗಾಗಿ ಕಾರ್ಯಕ್ರಮ ರೂಪಿಸಿ ಪರಂಗಿಗಳ ನಾಡಿನಲ್ಲೇ ಕ್ರಾಂತಿ ಬೀಜ ಬಿತ್ತಿದ ಮಹಾನ್‌ ಕ್ರಾಂತಿಕಾರಿ ಸಾವರ್ಕರ್‌. ಇವರ ವಾಕ್‌ಚಾತುರ್ಯ, ವ್ಯಕ್ತಿತ್ವಕ್ಕೆ ಮಾರು ಹೋಗಿ ಇವರ ಅನುಯಾಯಿಗಳಾದವರು ಅನೇಕರು. ಅದರಲ್ಲಿ “”ಮದನ್‌ಲಾಲ್‌ ಧಿಂಗ್ರ” ಕೂಡ ಒಬ್ಬ. ಮದನ್‌ಲಾಲ್‌ ಮಹಾ ದೇಶ ಪ್ರೇಮಿಯಾದ, ಭಾರತೀಯರ ಮೇಲೆ ಅತ್ಯಂತ ಕ್ರೂರತನ ಮೆರೆದಿದ್ದ ಬ್ರಿಟಿಷ್‌ ಅಧಿಕಾರಿ “”ವಿಲಿಯಂ ಕರ್ಜನ್‌”ನನ್ನು ಗುಂಡಿಟ್ಟು ಕೊಂದಿದ್ದ. ಇದರಿಂದ ಆಂಗ್ಲರು ನಡುಗಿದ್ದರು. ಇಂತಹ ಹಲವಾರು ದೇಶಭಕ್ತರನ್ನು ನಿರ್ಮಾಣ ಮಾಡಿದರು ಅವರು.

1910ರ ಜುಲೈ. ಆ ಸಂದರ್ಭದಲ್ಲಿ ಸಾವರ್ಕರ್‌ರನ್ನು ರಾಜದ್ರೋಹದ ಆಪಾದನೆ ಮೇಲೆ ಬಂಧಿಸಿ ಗಡೀಪಾರು ಮಾಡಲು ಹಡಗಿನಲ್ಲಿ ಕೊಂಡೊಯ್ಯಲಾಗಿತ್ತು.
ಉಗಿ ಹಡಗು ಲಂಗರು ಹಾಕಿ ಫ್ರಾನ್ಸ್‌ನ ಮಾರ್ಸೆಲ್ಸ್‌ ಬಂದರು ಕಟ್ಟೆಯ ಸಮೀಪ ನಿಂತಿತ್ತು. ಯಾಂತ್ರಿಕ ತೊಂದರೆಯಿಂದ ನಿಂತಿದ್ದ ಹಡಗನ್ನು ಕೆಲಸಗಾರರು ಸರಿಪಡಿಸುವುದರಲ್ಲಿ ನಿರತರಾಗಿದ್ದರು. ಬಂಧಿಯಾಗಿದ್ದ ಯುವಕ ಸಾರ್ವಕರ್‌ರನ್ನು ಇಬ್ಬರು ಕಾವಲುಗಾರರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದರು. ಸೆರೆಯಾಳು (ಸಾವರ್ಕರ್‌) “”ನಾನು ಶೌಚಗೃಹಕ್ಕೆ ಹೋಗಬೇಕು” ಎಂದರು. ಕಾವಲುಗಾರರು ದರ್ಪದಿಂದ “”ನಡಿ ಶೌಚಗೃಹಕ್ಕೆ” ಎಂದು ಕರೆದೊಯ್ದರು. ಸೆರೆಯಾಳು ಬಾಗಿಲು ಹಾಕಿಕೊಂಡರು. ಶೌಚಾಲಯಕ್ಕೆ ಗಾಜಿನ ಕಿಟಕಿ ಇದ್ದುದರಿಂದ ಸೆರೆಯಾಳನ್ನು ಗಮನಿಸಲು ಅನುಕೂಲವಾಗಿತ್ತು. ಸೆರೆಯಾಳು ತನ್ನ ಮೇಲಂಗಿಯನ್ನು ಕಿಟಕಿಯ ಮೇಲೆ ನೇತು ಹಾಕಿದರು. ಕ್ಷಣಾಧ‌ìದಲ್ಲಿ ಯುವಕ ಉಗಿ ಹಡಗಿನ ಕಿಂಡಿಯಲ್ಲಿ ತೂರಿ, ತಳ ಸೇರಿ, ಸಮುದ್ರಕ್ಕೆ ಜಿಗಿದು, ಅಲೆಗಳೊಡನೆ ಹೋರಾಡುತ್ತಾ ದಡ ಸೇರಿಯೇಬಿಟ್ಟರು. ಹಾಗೆ ವೇಗವಾಗಿ ಅಲ್ಲಿಂದ ಓಡಿದರು. ಇದು ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇಡೀ ವಿಶ್ವವೇ ಬೆಕ್ಕಸ ಬೆರಗಾಗಿತ್ತು.

ಸಾವರ್ಕರ್‌ರನ್ನು ಸೆರೆ ಹಿಡಿದು ಭಾರತಕ್ಕೆ ಕರೆತಂದು ಅಂಡಮಾನ್‌ ದ್ವೀಪದಲ್ಲಿಯ ಕಾರಾಗೃಹದಲ್ಲಿ ಕರಿನೀರಿನ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇದು ಅತ್ಯಂತ ಕ್ರೂರ ಶಿಕ್ಷೆ ಎಂದು ಕುಪ್ರಸಿದ್ಧವಾಗಿತ್ತು. ಇವರ ಆಸ್ತಿಪಾಸ್ತಿಗಳನ್ನೆಲ್ಲಾ ಸರಕಾರ ಮುಟ್ಟುಗೋಲು ಹಾಕಿತು. ಸಾವರ್ಕರ್‌ರವರ ಅಣ್ಣ ಗಣೇಶ ಸಾವರ್ಕರ್‌ರನ್ನು ಕೂಡ ಅಂಡಮಾನ್‌ ಕಾರಾಗೃಹದ ಕರಿ ನೀರಿನ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಹತ್ತಾರು ವರ್ಷ ಕಠಿಣ ಶಿಕ್ಷೆ ಅನುಭವಿಸುತ್ತಿದ್ದರೂ ಸಾವರ್ಕರ್‌ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಪಡೆಯುವ ಆಶಯ ದೀಪ ನಂದಿರಲಿಲ್ಲ, ಉತ್ಸಾಹ ಕುಂದಿರಲಿಲ್ಲ. ನಗುನಗುತ್ತಲೇ ಶಿಕ್ಷೆಯನ್ನು ಅನುಭವಿಸಿದರು. ಅವರೊಬ್ಬ ಧೀಮಂತ ನಾಯಕ, ಅಪ್ರತಿಮ ದೇಶಭಕ್ತ, ಮಹಾನ್‌ ಚಿಂತಕ.

ಎಂ. ನರಸಿಂಹಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next