ಹೊಸದಿಲ್ಲಿ : ‘ಚೀನದ ಮತ್ತು ಅದರ ಬೆಲ್ಟ್ ಆ್ಯಂಡ್ ರೋಡ್ ಮಹತ್ವಾಕಾಂಕ್ಷೀ, ವಿವಾದಾತ್ಮಕ ಯೋಜನೆಯ ವಿರುದ್ಧ ಎದೆ ಸೆಟೆದು ನಿಂತ ವಿಶ್ವದ ಏಕೈಕ ರಾಜಕೀಯ ಮುತ್ಸದ್ದಿ ಎಂದರೆ ಪ್ರಧಾನಿ ನರೇಂದ್ರ ಮೋದಿ’ ಎಂದು ಚೀನ ಕುರಿತಾದ ಉನ್ನತ ಅಮೆರಿಕನ್ ತಜ್ಞರೊಬ್ಬರು ಹೇಳಿದ್ದಾರೆ.
ಚೀನ ಮತ್ತು ಅದರ ಬೆಲ್ಟ್ ಆ್ಯಂಡ್ ರೋಡ್ ಎಂಬ ಗೊಂದಲಕಾರಿ ಯೋಜನೆಯ ವಿರುದ್ಧ ಅಮೆರಿಕ ಕೂಡ ಮೊದ ಮೊದಲು ಮೌನ ವಹಿಸಿತ್ತು; ಈಚೆಗಷ್ಟೇ ಅದು ಚೀನದ ಈ ಮಹತ್ವಾಕಾಂಕ್ಷೆಯ ಯೋಜನೆಯ ವಿರುದ್ಧ ತನ್ನ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದೆ ಎಂದು ಚೀನ ವಿರುದ್ಧದ ತಂತ್ರಗಾರಿಕೆ ಕುರಿತಾದ ಕೇಂದ್ರವೊಂದರ ನಿರ್ದೇಶಕರಾಗಿರುವ ಮೈಕೆಲ್ ಪಿಲ್ಸ್‌ಬರಿ ಅವರು ಅಮೆರಿಕದ ಸಂಸದೀಯ ಸಮಾವೇಶದಲ್ಲಿ ಹೇಳಿದರು.
ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷೆಯ ಹಾಗೂ ಪ್ರಾದೇಶಿಕ ಪ್ರಾಬಲ್ಯ ಸ್ಥಾಪನೆಯ ಬೆಲ್ಟ್ ಆ್ಯಂಡ್ ರೋಡ್ ಎಂಬ ವಿವಾದಾತ್ಮಕ ಯೋಜನೆಯ ವಿರುದ್ಧ ಮೋದಿ ಮತ್ತು ಅವರ ತಂಡದ ಸದಸ್ಯರು ಎಂಟೆದೆಯ ಬಿಚ್ಚು ಮಾತಿನ ಅಭಿಪ್ರಾಯಗಳನ್ನು ಆಗೀಗ ಎಂಬಂತೆ ವ್ಯಕ್ತಪಡಿಸುತ್ತಿದ್ದರು ಎಂದು ಹಡ್ಸನ್ ಇನ್‌ಸ್ಟಿಟ್ಯೂಟ್‌ನ ಚಿಂತನ ಚಾವಡಿಯಾಗಿರುವ ಈ ಕೇಂದ್ರದ ನಿರ್ದೇಶಕ ಮೈಕೆಲ್ ಪಿಲ್ಸ್‌ಬರಿ ನಿನ್ನೆ ಶುಕ್ರವಾರ ನೇರ ಮಾತುಗಳಲ್ಲಿ ಹೇಳಿದರು.
“ಚೀನದ ವಿರುದ್ಧ ಈ ತನಕ ಮತ್ತು ಈಗಲೂ ಎದೆ ಸೆಟೆದು ನಿಂತಿರುವ ವಿಶ್ವದ ಏಕೈಕ ಅಗ್ರ ರಾಜಕೀಯ ಮುತ್ಸದ್ದಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೂಡಿ ಬಂದಿದ್ದಾರೆ. ಚೀನ ಅಧ್ಯಕ್ಷ ಕ್ಸಿ ವಿರುದ್ಧ ಮತ್ತವರ ವಿವಾದಾತ್ಮಾಕ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯ ವಿರುದ್ಧ ಮೋದಿ ಮತ್ತು ಅವರ ತಂಡದ ಸದಸ್ಯರು ನಿರ್ಭಯ ಚುಚ್ಚು ಮಾತುಗಳನ್ನು ಆಡುತ್ತಾ ಬಂದಿದ್ದಾರೆ. ಚೀನದ ಈ ಬೆಲ್ಟ್ ಆ್ಯಂಡ್ ರೋಡ್ ಯೋಜನೆ ಭಾರತೀಯ ಭೌಗೋಲಿಕ ಸಾರ್ವಭೌಮತೆಯ ಉಲ್ಲಂಘನೆಯಾಗಿದ್ದು ಪ್ರಾದೇಶಿಕ ಏಕಸ್ವಾಮ್ಯ ಪ್ರಾಬಲ್ಯವನ್ನು ಸ್ಥಾಪಿಸುವ ದುರುದ್ದೇಶ ಹೊಂದಿರುವುದೇ ಇದಕ್ಕೆ ಮೂಲ ಕಾರಣವಾಗಿದೆ’ ಎಂದು ಪಿಲ್ಸ್‌ಬರಿ ಹೇಳಿದರು.
ಟ್ರಂಪ್ ಆಡಳಿತೆಯ ಹೊಸ ಇಂಡೋ ಪೆಸಿಫಿಕ್ ತಂತ್ರಗಾರಿಕೆಗೆ ಶ್ಲಾಘನೆ ವ್ಯಕ್ತಪಡಿಸಿದ ಮಾಜಿ ಪೆಂಟಗನ್ ಅಧಿಕಾರಿ ಪಿಲ್ಸ್‌ಬರಿ ಅವರು “ಉಚಿತ ಹಾಗೂ ಮುಕ್ತ ಇಂಡೋ ಫೆಸಿಫಿಕ್ ಪ್ರದೇಶವನ್ನು ಕನಿಷ್ಠ 50 ಬಾರಿಯಾದರೂ ಟ್ರಂಪ್ ಮತ್ತು ಅವರ ಆಡಳಿತಾಧಿಕಾರಿಗಳು ಉಚ್ಚರಿಸಿರುವುದನ್ನು ಜನರು ಆಲಿಸಿದ್ದಾರೆ ಎಂದು ಪಿಲ್ಸ್‌ಬರಿ ಹೇಳಿದರು.
“ಚೀನ ಈಗಾಗಲೇ ಅಮೆರಿಕದ ಹೊಸ ಇಂಡೋ ಪೆಸಿಫಿಕ್ ತಂತ್ರಗಾರಿಕೆಯನ್ನು ವಿರೋಧಿಸಿದೆ; ಏಕೆಂದರೆ ಇದು ಚೀನಕ್ಕೆ ಇಷ್ಟವಿಲ್ಲ’ ಎಂದು ಪಿಲ್ಸ್‌ಬರಿ ಹೇಳಿದರು.