ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (ಯುಎಇ) ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರದಂದು ಅಬುಧಾಬಿಯ ರಾಜ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹ್ಯಾನ್‌ರವರನ್ನು ಭೇಟಿಯಾದರು.
ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿಯವರನ್ನು ಶೇಖ್ ಮೊಹಮ್ಮದ್ ಹಾಗೂ ಅವರ ರಾಜಮನೆತನದ ಹಿರಿಯ ಸದಸ್ಯರೇ ಖುದ್ದಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
ತದನಂತರ ಅಬುಧಾಬಿಯ ಅರಮನೆಯಲ್ಲಿ ನಡೆದ ಮಾತುಕತೆ ವೇಳೆ, ಮೇ 13ರಂದು ನಿಧನರಾದ ಯುಎಇ ಮಾಜಿ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೇದ್ ಅಲ್ ನಹ್ಯಾನ್ ಅವರ (73) ನಿಧನಕ್ಕೆ ಸಂತಾಪ ಸೂಚಿಸಿದರು.
ಖಲೀಫಾ ಅವರು ದೊಡ್ಡ ರಾಜನೀತಿಜ್ಞ ಎಂದು ಮೋದಿ ಬಣ್ಣಿಸಿದರು. ಖಲೀಫಾ ನಿಧನದ ವೇಳೆ ಭಾರತಲ್ಲೂ ಒಂದು ದಿನದ ಸರ್ಕಾರಿ ಶೋಕಾಚರಣೆ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೊಹಮ್ಮದ್ ಅವರ ಸ್ವಾಗತಾತಿಥ್ಯವನ್ನು ಟ್ವಿಟರ್‌ನಲ್ಲಿ ಮೋದಿ ಹಾಡಿ ಹೊಗಳಿದ್ದಾರೆ. “ನನ್ನ ಸಹೋದರ ಮೊಹಮ್ಮದ್ ಅರವರ ಆತ್ಮೀಯ ಸ್ವಾಗತಕ್ಕೆ ಮಾರು ಹೋಗಿದ್ದೇನೆ.
ಅಬುಧಾಬಿಯ ವಿಮಾನ ನಿಲ್ದಾಣಕ್ಕೇ ತಮ್ಮ ಹಿರಿಯ ಸಂಬಂಧಿಕರ ಜೊತೆಗೆ ಆಗಮಿಸಿ ನನ್ನನ್ನು ಸ್ವಾಗತಿಸಿದ್ದಕ್ಕೆ ಅವರಿಗೆ ನಾನು ಆಭಾರಿ” ಎಂದು ಅರಬ್ ಮತ್ತು ಇಂಗ್ಲೀಷ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿಗೆ ತೆರಳಿದ್ದ ಮೋದಿ, ಅಬುಧಾಬಿಗೆ ಭೇಟಿ ನೀಡಿದ್ದಾರೆ. 2019ರಲ್ಲೂ ಪ್ರಧಾನಿ ಯುಎಇಗೆ ಭೇಟಿ ನೀಡಿದ್ದರು.