ಹೊಸದಿಲ್ಲಿ: ದೇಶದ ಅತೀ ದೊಡ್ಡ ವಿಮಾ ಕಂಪೆನಿ ಎಲ್‌ಐಸಿ (ಭಾರತೀಯ ಜೀವ ವಿಮಾ ನಿಗಮ)ಯಲ್ಲಿ ಆಟೋಮ್ಯಾಟಿಕ್ ರೂಟ್‌ನಡಿ ಶೇ. 20ರಷ್ಟು ವಿದೇಶಿ ನೇರ ಬಂಡವಾಳ (ಎಫ್ ಡಿಐ)ಕ್ಕೆ ಶನಿವಾರ ಕೇಂದ್ರ ಸಂಪುಟ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯದಲ್ಲೇ ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರುಗಳ (ಶೇ. 5) ಮಾರಾಟ ಪ್ರಕ್ರಿಯೆ ನಡೆಯಲಿದ್ದು, ಈ ಮೆಗಾ ಐಪಿಒದಲ್ಲಿ ಭಾಗವಹಿಸಲು ವಿದೇಶಿ ಹೂಡಿಕೆದಾರರೂ ತುದಿಗಾಲಲ್ಲಿ ನಿಂತಿದ್ದಾರೆ.
ಆದರೆ ಪ್ರಸ್ತುತ ಜಾರಿಯಲ್ಲಿರುವ ಎಫ್ ಡಿಐ ನೀತಿಯಡಿ ಎಲ್‌ಐಸಿಯಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ನಿರ್ದಿಷ್ಟ ನಿಬಂಧನೆಗಳು ಇಲ್ಲ. ಹೀಗಾಗಿ ಶೇ. 20ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಮಾತೃಭಾಷೆ ಸಂಸ್ಕೃತಿಯ ಭಾಗ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಅಷ್ಟೇ ಅಲ್ಲ, ಬಂಡವಾಳ ಕ್ರೋಡೀಕರಣ ಪ್ರಕ್ರಿಯೆಗೆ ವೇಗ ನೀಡುವ ಸಲುವಾಗಿ ಇಂತಹ ಎಫ್ ಡಿಐಗೆ ಆಟೋ ಮ್ಯಾಟಿಕ್ ರೂಟ್‌ನಡಿ ಅವಕಾಶ ಕಲ್ಪಿಸಲಾಗುತ್ತಿದೆ.
ಅಂದರೆ ಭಾರತದಲ್ಲಿ ಹೂಡಿಕೆ ಮಾಡಲು ವಿದೇಶಿ ಕಂಪೆನಿಯು ಭಾರತ ಸರಕಾರದ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್‌ನ ಅನುಮತಿ ಪಡೆಯಬೇಕಾದ ಅಗತ್ಯವಿರುವುದಿಲ್ಲ.