ಲಕ್ನೋ: “ಸ್ವಾತಂತ್ರ್ಯ ಸಿಕ್ಕಿ ಇಷ್ಟೊಂದು ದಶಕಗಳಾಗಿದ್ದರೂ ವಿಂಧ್ಯಾಚಲ ಪ್ರದೇಶ ಅಭಿವೃದ್ಧಿಯನ್ನೇ ಕಂಡಿಲ್ಲ. ಅಷ್ಟೊಂದು ಸಂಪನ್ಮೂಲಗಳಿದ್ದರೂ ಈ ಪ್ರದೇಶ ಕೊರತೆಗಳನ್ನೇ ಎದುರಿಸುತ್ತಿರುವುದು ಅಚ್ಚರಿಯ ಸಂಗತಿ. ಎಲ್ಲರೂ ವಿಂಧ್ಯಾಚಲವನ್ನು ನಿರ್ಲಕ್ಷಿಸುತ್ತಲೇ ಬಂದರು.’
ಹೀಗೆಂದು ಬೇಸರ ವ್ಯಕ್ತಪಡಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಭಾನುವಾರ ಉತ್ತರಪ್ರದೇಶದ ವಿಂಧ್ಯಾಚಲ ಪ್ರದೇಶದಲ್ಲಿನ ಮಿರ್ಜಾಪುರ ಮತ್ತು ಸೋನ್‌ಭದ್ರಾ ಜಿಲ್ಲೆಗಳಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ಗ್ರಾಮದ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರೊಂದಿಗೆ ಸಂವಾದವನ್ನೂ ನಡೆಸಿದ್ದಾರೆ.
ಇದನ್ನೂ ಓದಿ :ಡ್ರಗ್ಸ್ ಪ್ರಕರಣ: ಹಾಸ್ಯನಟಿ ಭಾರ್ತಿ ಸಿಂಗ್ ಹಾಗೂ ಆಕೆಯ ಪತಿಗೆ 14 ದಿನಗಳ ನ್ಯಾಯಾಂಗ ಬಂಧನ
ವಿಂಧ್ಯಾಚಲ ಹಾಗೂ ಬುಂದೇಲ್‌ಖಂಡ್ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಪ್ರದೇಶಗಳು. ಸಂಪನ್ಮೂಲಗಳ ತವರಾಗಿದ್ದರೂ, ಈ ಪ್ರದೇಶಗಳು ಕೊರತೆಯ ನಾಡೆಂದು ಕರೆಯಲ್ಪಡುತ್ತಿವೆ. ಅಷ್ಟೊಂದು ನದಿಗಳಿದ್ದರೂ, ಬಾಯಾರಿಕೆ ಹಾಗೂ ಬರಗಾಲದ ಪ್ರದೇಶವೆಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಇಲ್ಲಿಂದ ಎಷ್ಟೋ ಮಂದಿ ವಲಸೆ ಹೋಗಿದ್ದಾರೆ. ಈಗ ಮಾತೆ ವಿಂಧ್ಯಾವಾಸಿನಿಯ ಕೃಪೆಯಿಂದ ಈ ಯೋಜನೆ ಆರಂಭವಾಗುತ್ತಿದೆ. ಈ ಶಿಲಾನ್ಯಾಸ ಕಾರ್ಯಕ್ರಮವು ಇಲ್ಲಿನ ಅಮ್ಮಂದಿರು, ಸಹೋದರಿಯರಿಗೆ ಸಂಭ್ರಮದ ಕ್ಷಣವಾಗಿದೆ ಎಂದೂ ಮೋದಿ ಹೇಳಿದ್ದಾರೆ. ಕೊರೊನಾ ಸಂಕಷ್ಟದ ನಡುವೆಯೂ ಉತ್ತರಪ್ರದೇಶ ಸರ್ಕಾರವು ನಿಮಗಾಗಿ ಹೆಜ್ಜೆಯಿಡುತ್ತಿರುವುದಕ್ಕೆ ಈ ಯೋಜನೆಯೇ ಸಾಕ್ಷಿ ಎಂದೂ ಅವರು ತಿಳಿಸಿದ್ದಾರೆ.