ಹೊಸದಿಲ್ಲಿ: ಇನ್ನು ಮುಂದೆ ದೇಶದ ಮಧ್ಯಮ ವರ್ಗ, ಉದ್ಯೋಗಿಗಳು, ಸಣ್ಣ ವ್ಯಾಪಾರಿಗಳು ಹಾಗೂ ಹಿರಿಯ ನಾಗರಿಕರು ಕೂಡ ತಮ್ಮ ಸಣ್ಣ ಉಳಿತಾಯದ ಮೊತ್ತವನ್ನು ಸರಕಾರಿ ಬಾಂಡ್‌ಗಳಲ್ಲಿ ನೇರವಾಗಿ ಮತ್ತು ಸುರಕ್ಷಿತವಾಗಿ ಹೂಡಿಕೆ ಮಾಡಬಹುದು.
ಇದಕ್ಕೆ ಸಂಬಂಧಿಸಿದ ಭಾರತೀಯ ರಿಸರ್ವ್ ಬ್ಯಾಂಕ್‌ನ ರಿಟೇಲ್ ಡೈರೆಕ್ಟ್ ಯೋಜನೆಗೆ ಶುಕ್ರವಾರ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಇದು ದೇಶದಲ್ಲಿ ಹೂಡಿಕೆ ಅವಕಾಶವನ್ನು ಹೆಚ್ಚಿಸುವಲ್ಲಿ ಮತ್ತು ಬಂಡವಾಳ ಮಾರುಕಟ್ಟೆ ಜನ ಸಾಮಾನ್ಯರಿಗೂ ಮುಕ್ತವಾಗುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಇದರ ಜತೆಗೆ ಏಕೀಕೃತ ಒಂಬುಡ್ಸ್‌ಮನ್ ಯೋಜನೆಗೆ ಕೂಡ ಮೋದಿ ಚಾಲನೆ ನೀಡಿದ್ದು, ಗ್ರಾಹಕ-ಕೇಂದ್ರಿತ ಎರಡು ಯೋಜನೆಗಳು ಜಾರಿಯಾದಂತಾಗಿವೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ರಿಟೇಲ್ ಡೈರೆಕ್ಟ್ ಯೋಜನೆಯ ಮೂಲಕ ಸಣ್ಣ ಹೂಡಿಕೆದಾರರೂ ಸರಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಅವರಿಗೂ ಲಾಭ ಮಾತ್ರವಲ್ಲದೆ ದೇಶದ ಅಭಿವೃದ್ಧಿ ಯೋಜನೆ ಗಳಿಗೆ ನಿಧಿ ಸಂಗ್ರಹಕ್ಕೂ ಅನುಕೂಲವಾಗಲಿದೆ ಎಂದಿದ್ದಾರೆ. ಇದೇ ವೇಳೆ, 7 ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ವಹಿವಾಟು 19 ಪಟ್ಟು ಹೆಚ್ಚಾಗಿದೆ. ಈಗ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಗಳು ದಿನದ 24 ಗಂಟೆಯೂ, ವಾರದ 7 ದಿನಗಳೂ, ವರ್ಷದ 12 ತಿಂಗಳುಗಳೂ ಕೆಲಸ ಮಾಡುತ್ತಿವೆ ಎಂದಿದ್ದಾರೆ.
ಏನಿದು ರಿಟೇಲ್ ಡೈರೆಕ್ಟ್ ಸ್ಕೀಂ?:
ಸಣ್ಣ ಹೂಡಿಕೆದಾರರು ಕೂಡ ಸರಕಾರಿ ಬಾಂಡ್ ಮಾರುಕಟ್ಟೆಗೆ ಪ್ರವೇಶ ಪಡೆಯುವ ಯೋಜನೆಯಿದು. ಅದರಂತೆ, ಜನಸಾಮಾನ್ಯರು ಉಚಿತವಾಗಿ ಆರ್‌ಬಿಐ ನೊಂದಿಗೆ ತಮ್ಮದೇ ಆದ ಸರಕಾರಿ ಷೇರುಗಳ ಖಾತೆಗಳನ್ನು ಆನ್‌ಲೈನ್‌ನಲ್ಲೇ ಓಪನ್ ಮಾಡಿ, ವಹಿವಾಟು ನಡೆಸಬಹುದು.