Advertisement

ಸಮಾನ ಶಿಕ್ಷಣ ಇರಲಿ; ಶಿಕ್ಷಾ ಪರ್ವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

08:12 PM Sep 07, 2021 | Team Udayavani |

ನವದೆಹಲಿ:“ಶಿಕ್ಷಣ ಎನ್ನುವುದು ಕೇವಲ ಒಳಗೊಳ್ಳುವಿಕೆಗೆ ಸೀಮಿತವಾಗಬಾರದು. ಅದು ಸಮಾನವಾಗಿ ಇರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಮಂಗಳವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಐದು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಶಿಕ್ಷಣ ಸುಧಾರಣೆ ಕ್ರಮಗಳು ಜಾಗತಿಕ ಮಾನದಂಡಕ್ಕೆ ಅಗತ್ಯವಾಗಿರುವಂತೆ ಮೌಲ್ಯವರ್ಧಿಸಲಿದೆ. ಸ್ಪರ್ಧಾತ್ಮಕ ಪರಿಸ್ಥಿತಿಗೆ ಅನುಗುಣವಾಗಿ, ವಿದ್ಯಾರ್ಥಿಗಳಿಗೆ ಮುಂದಿನ ದಿನಗಳ ಸವಾಲುಗಳನ್ನು ಎದುರಿಸಲು ಅನುಕೂಲವಾಗುವಂಥ ಸಾಮರ್ಥ್ಯ ನೀಡಲಿದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣೆ ಕೇವಲ ನೀತಿ ಆಧಾರಿತವಲ್ಲ, ಬದಲಾಗಿ ಭಾಗವಹಿಸುವಿಕೆಯ ಆಧಾರವಾಗಿ ಇರಬೇಕು ಎಂದು “ಶಿಕ್ಷಾಪರ್ವ’ ಎಂಬ ಶಿಕ್ಷಣ ಕ್ಷೇತ್ರದ ಸಮ್ಮೇಳನ ಉದ್ಘಾಟಿಸಿ ಮೋದಿ ಹೇಳಿದ್ದಾರೆ.

“ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶ ಹೊರಳು ಹಾದಿಯಲ್ಲಿದೆ. ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದೆ. ಶಿಕ್ಷಣ ಕ್ಷೇತ್ರವನ್ನು ಕಾಲಕಾಲಕ್ಕೆ ಸುಧಾರಣೆ ಮಾಡುವಲ್ಲಿ ಶಿಕ್ಷಣ ಕ್ಷೇತ್ರದ ತಜ್ಞರು, ಅಧ್ಯಾಪಕರು, ವಿಷಯ ಪರಿಣತರು ಹಲವು ವಿನೂತನ ಸಲಹೆಗಳನ್ನು ನೀಡಿದ್ದು, ವಿಶೇಷವಾದ ಬೋಧನಾ ಕ್ರಮದ ಮೂಲಕ ಮೆಚ್ಚುವಂಥ ಕೊಡುಗೆ ನೀಡಿದ್ದಾರೆ. ಹೊಸ ಶಿಕ್ಷಣ ನೀತಿ ರೂಪಿಸುವಲ್ಲಿಯೂ ಅವರ ಕೊಡುಗೆ ಅಮೂಲ್ಯವಾದದ್ದು’ ಎಂದರು ಪ್ರಧಾನಿ ಮೋದಿ.

ಇದನ್ನೂ ಓದಿ:ಮೈಸೂರು ಪ್ರಕರಣ : ತಮಿಳುನಾಡಿನಲ್ಲಿ ಅಡಗಿದ್ದ 7ನೇ ಆರೋಪಿ ಸೆರೆ

Advertisement

ಹೊಣೆಗಾರಿಕೆ ಇದೆ:
ಪ್ರಸಕ್ತ ವರ್ಷ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರ್ಣಗೊಂಡಿವೆ. ಅದಕ್ಕೆ ಪೂರಕವಾಗಿ ಹೊಸ ಶಿಕ್ಷಣ ನೀತಿಯೂ ಜಾರಿಯಾಗಿದೆ. ಮುಂದಿನ 25 ವರ್ಷಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 100 ವರ್ಷ ಆಗುವ ವೇಳೆಗೆ ಹೊಸ ಭಾರತ ರೂಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಜನರ ಭಾಗೀದಾರಿಕೆ ಮುಖ್ಯ:
ಸದ್ಯ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಏಳು ವರ್ಷಗಳಿಂದ ಆಡಳಿತದಲ್ಲಿ ಜನರ ಭಾಗೀದಾರಿಕೆ ಬಯಸುತ್ತಿದೆ. ಸ್ವಚ್ಛ ಭಾರತ, ಡಿಜಿಟಲ್‌ ವ್ಯವಸ್ಥೆ ಮೂಲಕ ಹಣ ವರ್ಗಾವಣೆಗೆ ಸಂಬಂಧಿಸಿ ಜಾರಿ ಮಾಡಲಾಗಿರುವ ಕ್ರಮಗಳು ಜನರ ಸಲಹೆಯಿಂದಲೇ ಅನುಷ್ಠಾನಗೊಂಡಿವೆ ಎಂದರು.

ಪಂಚ ಯೋಜನೆಗಳಿಗೆ ಚಾಲನೆ
1. ಶಾಲಾ ಗುಣಮಟ್ಟ ಮತ್ತು ಮಾನ್ಯತೆ ಮಾರ್ಗಸೂಚಿ (ಎಸ್‌ಕ್ಯೂಎಎಎಫ್)
– ಶಾಲೆಗಳಲ್ಲಿನ ಶಿಕ್ಷಣಶಾಸ್ತ್ರ (pedagogy),ಪಠ್ಯಕ್ರಮ, ಮೌಲ್ಯಮಾಪನ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಉಂಟಾಗಿರುವ ಕೊರತೆ ನಿವಾರಿಸಲು ನೆರವಾಗಲಿದೆ. ಜತೆಗೆ ಶಾಲೆಗಳ ನಿರ್ವಹಣೆಗೂ ಸಹಾಯ ಮಾಡಲಿದೆ.
2. ನಿಪುಣ ಭಾರತಕ್ಕಾಗಿ ನಿಷ್ಠಾ:
– ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಲು ನಿಷ್ಠಾ 3.0 ಎಂಬ ಹೊಸ ಯೋಜನೆ ಜಾರಿ. ಸ್ಪರ್ಧಾತ್ಮಕ ರೀತಿಯಲ್ಲಿ ಪಠ್ಯಕ್ರಮ ಬೋಧಿಸಲು, ಭಿನ್ನವಾಗಿ ಚಿಂತಿಸಿ, ಕಾರ್ಯಯೋಜನೆ ಜಾರಿಗೆ ತರಬೇತಿ.
3. ಭಾರತೀಯ ಸಂಜ್ಞಾ ಭಾಷೆಯ ಶಬ್ದಕೋಶ
– ಇದು ಮೂರನೇ ಆವೃತ್ತಿ. ಅದರಲ್ಲಿ ಹತ್ತು ಸಾವಿರ ಸಂಜ್ಞಾ ಭಾಷೆಗಳ ವಿವರಗಳು ಇವೆ. ಬ್ಯಾಂಕ್‌, ಪಾನಿಪುರಿ, ಪಕ್ಷಗಳು, ವೆಬ್‌ಸೈಟ್‌ ಸೇರಿದಂತೆ ಹಲವು ಅಂಶಗಳನ್ನು ಸಂಜ್ಞೆಯಲ್ಲಿ ಹೇಗೆ ವಿವರಿಸಲಾಗಿದೆ ಎಂಬುದರ ಬಗ್ಗೆ ಉಲ್ಲೇಖ.
4. ಟಾಕಿಂಗ್‌ ಬುಕ್ಸ್‌
– ಕಣ್ಣು ಕಾಣದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಧ್ವನಿಮುದ್ರಣಗೊಂಡ ಪಠ್ಯಕ್ರಮಗಳು.
5. ವಿದ್ಯಾಂಜಲಿ 2.0 ವೆಬ್‌ಸೈಟ್‌
– ಶಾಲಾಭಿವೃದ್ಧಿಗೆ ಸಿಎಸ್‌ಆರ್‌ ವ್ಯಾಪ್ತಿಯಲ್ಲಿ ದೇಣಿಗೆ ನೀಡುವವರಿಗೆ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಹುಡುಕುವವರಿಗೆ, ಶಾಲೆಗಳಿಗೆ ದೇಣಿಗೆ ನೀಡುವವರಿಗೆ ಅನುಕೂಲವಾಗಲು ಹೇಗೆ ಸಾಧ್ಯ ಎಂಬುದರ ಬಗ್ಗೆ ಸಮಗ್ರ ಮಾಹಿತಿ.

Advertisement

Udayavani is now on Telegram. Click here to join our channel and stay updated with the latest news.

Next