ಹೊಸದಿಲ್ಲಿ: ದೇಶದಲ್ಲಿ ಅತ್ಯುತ್ಕೃಷ್ಟವಾಗಿರುವ ಆ್ಯಪ್ ಗಳನ್ನು ತಯಾರಿಸುವ ಬಗ್ಗೆ ದೇಶದ ವಿಜ್ಞಾನಿಗಳಿಗೆ, ಸ್ಟಾರ್ಟಪ್ ಕ್ಷೇತ್ರದ ತಂತ್ರಜ್ಞರಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ದಾರೆ. ಶನಿವಾರ “ಆತ್ಮ ನಿರ್ಭರ ಭಾರತ ಆ್ಯಪ್ ಇನೊವೇಷನ್ ಚಾಲೆಂಜ್’ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಈ ಮಾತುಗಳನ್ನಾಡಿದ್ದಾರೆ.
ಚೀನದ 59 ಆ್ಯಪ್ ಗಳನ್ನು ನಿಷೇಧಿಸಿದ ಬಳಿಕ ಈ ಸವಾಲು ಹಾಕಿರುವುದು ಮಹತ್ವ ಪಡೆದಿದೆ. ಪ್ರಧಾನಿಯವರು ಟ್ವೀಟ್ ಮಾಡಿ “ಭಾರತದಲ್ಲಿಯೇ ಸಿದ್ಧಗೊಳಿಸಿದ ಆ್ಯಪ್ ಗಳನ್ನು ತಯಾರಿಸಲು ವಿಜ್ಞಾನಿಗಳ ಸಮೂಹ ಉತ್ಸುಕವಾಗಿದೆ. ಅದಕ್ಕಾಗಿ ಕೇಂದ್ರ ಸರಕಾರ ಅವಕಾಶ ಮಾಡಿಕೊಡುತ್ತದೆ.
ಆತ್ಮನಿರ್ಭರ ಭಾರತ ವ್ಯಾಪ್ತಿಯಲ್ಲಿ ಅದನ್ನು ಸಿದ್ಧಪಡಿಸಬಹುದು’ ಎಂದು ಬರೆದುಕೊಂಡಿದ್ದಾರೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಎರಡು ಹಂತದಲ್ಲಿ ಈ ಸವಾಲು ಒಡ್ಡಲಾಗಿದೆ. ಮೊದಲನೇ ಹಂತ ಗುಣಮಟ್ಟದ ಆ್ಯಪ್ ಗಳನ್ನು ಗುರ್ತಿಸುವುದು, ಇದು ತಿಂಗಳೊಳಗೆ ಮುಗಿಯಲಿದೆ. ಇನ್ನೊಂದು ಹಂತ ಹೊಸ ಚಾಂಪಿಯನ್‌ಗಳನ್ನು ಸೃಷ್ಟಿಸಿ, ಬೆಳೆಸಿ, ಮಾರುಕಟ್ಟೆ ಸೃಷ್ಟಿಸಲು ನೆರವಾಗುವುದು ಎಂದು ಮೋದಿ ಹೇಳಿದ್ದಾರೆ.
ಏನೇನು ಆ್ಯಪ್ ಗಳು?: ಆ್ಯಪ್ ಗಳು ಯಾವ್ಯಾವ ದಿಶೆಯಲ್ಲಿರಬಹುದು ಎಂಬುದಕ್ಕೆ ಸಲಹೆಗಳನ್ನೂ ಮೋದಿ ನೀಡಿದ್ದಾರೆ. ದೇಶೀಯ ಕ್ರೀಡೆಗಳನ್ನು ಜನಪ್ರಿಯಗೊಳಿಸುವ ಆ್ಯಪ್ ಗಳು, ನಿರ್ದಿಷ್ಟ ವಯೋಮಾನವನ್ನು ಗುರಿಯಾಗಿಸಿ ಕಲಿಕೆಗೆ ನೆರವಾಗುವ ಆ್ಯಪ್ ಗಳು, ಮನೋನಿಯಂತ್ರಣಕ್ಕೆ ಸಾಂತ್ವನ ಪಡೆಯುವವರಿಗೆ ಸಹಾಯವಾಗುವ ಕ್ರೀಡಾ ಆ್ಯಪ್ ಗಳು…ಇವನ್ನೆಲ್ಲ ನೀವು ಸೃಷ್ಟಿಸಬಹುದಾ ಎಂದು ಮೋದಿ ಪ್ರಶ್ನಿಸಿದ್ದಾರೆ.