ನ್ಯೂಯಾರ್ಕ್: “ಪ್ರಧಾನಿ ನರೇಂದ್ರ ಮೋದಿ ಅವರು ಭಾರತವೆಂಬ ಕಾರನ್ನು ಹಿಂಬದಿ ಕನ್ನಡಿ ನೋಡಿಕೊಂಡು ಓಡಿಸುತ್ತಿದ್ದಾರೆ.
ಅಪಘಾತವಾಗಿ ಕಾರು ನಿಂತಾಗ ಅದು ಮುಂದಕ್ಕೆ ಚಲಿಸದೇ ಇದ್ದಾಗ ಆಗ ಅವರು ಯೋಚಿಸುತ್ತಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನ ಜೇವಿಟ್ಸ್ ಸೆಂಟರ್‌ನಲ್ಲಿ ಭಾರತೀಯ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದ ಅವರು “ಭವಿಷ್ಯವನ್ನು ಅವ ಲೋಕಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಾಮರ್ಥ್ಯವನ್ನು ಕಳೆದುಕೊಂಡಿವೆ. ಅವರಿಗೆ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ’ ಎಂದು ದೂರಿದರು.
“ಬಿಜೆಪಿ ಮತ್ತು ಆರ್‌ಎಸ್‌ಎಸ್ ಎಂದೂ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಅವರು ಯಾವಾಗಲೂ ಭೂತಕಾಲದ ಬಗ್ಗೆ ಮಾತನಾಡುತ್ತಾರೆ. ಅಲ್ಲದೇ ಅವರು ಯಾವಾಗಲು ಇತಿಹಾಸದ ಬಗ್ಗೆ ಬೇರೆಯವರನ್ನು ದೂರುತ್ತಾರೆ’ ಎಂದು ಕಿಡಿಕಾರಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರಿಗಾಗಿ ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸಿ, ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.