ಹೊಸದಿಲ್ಲಿ: ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೈಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಆ್ಯತ್ಲೀಟ್‌ಗಳ ಹೋರಾಟ, ದೃಢತೆ ಮತ್ತು ದೃಢಸಂಕಲ್ಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಯ ಮಾತುಗಳ ನ್ನಾಡಿದ್ದಾರೆ. ಮಾತ್ರವಲ್ಲದೇ ಈ ಮಹಾನ್ ಕೂಟದಲ್ಲಿ ನಿರೀಕ್ಷೆಗಳನ್ನು ಮರೆತು ತಮ್ಮ ಅತ್ಯುತ್ತಮ ಪ್ರದರ್ಶನದತ್ತ ಮಾತ್ರ ಗಮನ ಹರಿಸುವಂತೆ ಕೇಳಿಕೊಂಡಿದ್ದಾರೆ.
ಬುಧವಾರ ನಡೆದ ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಅವರು 3,000ಮೀ. ಸ್ಟೀಪಲ್‌ಚೇಸರ್ ಅವಿನಾಶ್ ಸಬ್ಲೆ, ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ, ವನಿತಾ ಹಾಕಿ ಆಟಗಾರ್ತಿ ಸಲಿಮಾ ತೆಟೆ, ಸೈಕ್ಲಿಸ್ಟ್ ಡೇವಿಡ್ ಬೆಕಮ್ ಮತ್ತು ಪ್ಯಾರಾ ಶಾಟ್‌ಪುಟ್ ಆಟಗಾರ್ತಿ ಶರ್ಮಿಳಾ ಅವರ ಜತೆ ಮಾತನಾಡಿದರು.
ಆ್ಯತ್ಲೀಟ್‌ಗಳ ಹಿಂದಿನ ಕಥೆಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಮೋದಿ, ನೀವು ಹೇಗೆ ನಿಮ್ಮ ಜೀವನದ ಅಡೆತಡೆಗಳನ್ನು ನಿವಾರಿಸಿದ್ದೀರಿ ಎಂದು ಸಂವಾದದ ವೇಳೆ ಪ್ರಶ್ನಿಸಿದರು. “ನಾನು 2012ರಲ್ಲಿ ಭಾರತೀಯ ಸೇನೆಗೆ ಸೇರಿಕೊಂಡೆ ಮತ್ತು ನಾಲ್ಕು ವರ್ಷಗಳ ಕಾಲ ಸಾಮಾನ್ಯ ಕರ್ತವ್ಯ ವನ್ನು ನಿರ್ವಹಿಸಿದೆ. ಅನಂತರ ನಾನು ಆ್ಯತ್ಲೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಕಠಿನ ಸೇನಾ ತರಬೇತಿ ಮತ್ತು ಕಠಿನ ಸ್ಥಳವಾದ ಸಿಯಾ ಚಿನ್ ಗ್ಲೆಸಿಯರ್‌ನಲ್ಲಿ ಕರ್ತವ್ಯ ನಿರ್ವಹಣೆ ನನಗೆ ಸ್ಪರ್ಧೆ ಗಳಲ್ಲಿ ಸಾಕಷ್ಟು ಸಹಾಯ ಮಾಡಿತು” ಎಂದು ಸಬ್ಲೆ ಹೇಳಿದರು.
ನನ್ನ ಸ್ಪರ್ಧೆಯಲ್ಲಿ ಬಹಳಷ್ಟು ಅಡೆತಡೆಗಳಿವೆ. ಸೇನೆಯಲ್ಲಿ ಮಾಡುವ ತರಬೇತಿ ಯಂತೆ ನಾವು ಅಡೆತಡೆಗಳ ಮೂಲಕ ಜಿಗಿದು ಅಭ್ಯಾಸ ಮಾಡ ಬೇಕಾಗಿದೆ ಎಂದು ಸಬ್ಲೆ ತಿಳಿಸಿದರು.
ಸಂವಾದದಲ್ಲಿ ಒಲಿಂಪಿಕ್ ಡಬಲ್ ಪದಕ ವಿಜೇತೆ ಪಿವಿ ಸಿಂಧು, ಮಹಿಳಾ ಹಾಕಿ ಗೋಲ್‌ಕೀಪರ್ ಸವಿತಾ ಪೂನಿಯಾ, ರಿಯೋ ಗೇಮ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬಾಕ್ಸರ್‌ಗಳಾದ ಶಿವ ಥಾಪಾ ಮತ್ತು ಸುಮಿತ್, ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಭಾಗವಹಿಸಿದ್ದರು.
ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28ರಿಂದ ಆ.8ರ ವರೆಗೆ ಕಾಮನ್‌ವೆಲ್ತ್ ಗೇಮ್ಸ್ ನಡೆಯಲಿದೆ. 19 ಕ್ರೀಡಾ ಸ್ಪರ್ಧೆಗಳಲ್ಲಿ 141 ವಿಭಾಗಗಳಲ್ಲಿ ಭಾರತದ 215 ಆ್ಯತ್ಲೀಟ್‌ಗಳು ಭಾಗವಹಿಸಲಿದ್ದಾರೆ.