ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ನೂತನ ಸಂಸತ್ ಭವನದ ಲೋಕಸಭೆಯ ಸ್ಪೀಕರ್ ಚೇಂಬರ್ ನಲ್ಲಿ ರಾಜದಂಡ ‘ಸೆಂಗೋಲ್’ ಪ್ರತಿಷ್ಠಾಪನೆ ಮಾಡಿದರು. ಲೋಕಸಭೆ ಸ್ಪೀಕರ್ ಅವರ ಆಸನದ ಬಳಿ ಇದನ್ನು ಇರಿಸಲಾಗಿದೆ.
ಹೊಸ ಸಂಸತ್ ಕಟ್ಟಡದಲ್ಲಿ ಪ್ರತಿಷ್ಠಾಪಿಸುವ ಮೊದಲು ಪ್ರಧಾನಿ ಮೋದಿಯವರಿಗೆ ಐತಿಹಾಸಿಕ ‘ಸೆಂಗೊಲ್’ ಅನ್ನು ಅಧೀನರು ಹಸ್ತಾಂತರಿಸಿದರು. ಇದೇ ಸೆಂಗೋಲ್ ಅನ್ನು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಆಗಸ್ಟ್ 14 ರ ರಾತ್ರಿ ತಮ್ಮ ನಿವಾಸದಲ್ಲಿ ಹಲವಾರು ನಾಯಕರ ಸಮ್ಮುಖದಲ್ಲಿ ಸ್ವೀಕರಿಸಿದ್ದರು.
ಇಂದು ಬೆಳಗ್ಗೆ ವೈದಿಕ ವಿಧಿವಿಧಾನಗಳೊಂದಿಗೆ ಸಾಂಪ್ರದಾಯಿಕ ಪೂಜೆಯೊಂದಿಗೆ ಸಮಾರಂಭವು ಪ್ರಾರಂಭವಾಯಿತು, ಒಂದು ಗಂಟೆಗಳ ಕಾಲ ಮುಂದುವರಿಯಿತು. ಪೂಜೆಯ ವೇಳೆ ಪ್ರಧಾನಿ ಮೋದಿ ಜೊತೆಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಉಪಸ್ಥಿತರಿದ್ದರು.
ನೂತನ ಸಂಸತ್ ಭವನದಲ್ಲಿ ಐತಿಹಾಸಿಕ ‘ಸೆಂಗೊಲ್’ ಸ್ಥಾಪಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಮಠಾಧೀಶರಿಂದ ಆಶೀರ್ವಾದ ಪಡೆದರು. ನಂತರ ಸಂತರು- ಮಠಾಧೀಶರೊಂದಿಗೆ ರಾಜದಂಡವನ್ನು ಹಿಡಿದುಕೊಂಡು ಲೋಕಸಭೆಯೊಳಗೆ ಬಂದ ಪ್ರಧಾನಿ ಮೋದಿ ಅದನ್ನು ಪ್ರತಿಷ್ಠಾಪಿಸಿದರು.