ಗುಜರಾತ್(ಕೇವಾಡಿಯಾ):ಗುಜರಾತ್ ನ ನರ್ಮದಾ ಜಿಲ್ಲೆಯ ಕೇವಾಡಿಯಾ ಗ್ರಾಮದಲ್ಲಿರುವ “ಏಕತಾ ಪ್ರತಿಮೆ” ಸಮೀಪದಲ್ಲಿ ನಿರ್ಮಿಸಿರುವ ಔಷಧೀಯ ಸಸ್ಯ, ಗಿಡಮೂಲಿಕೆಗಳ ಆರೋಗ್ಯ ವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ಅಕ್ಟೋಬರ್ 30, 2020) ಉದ್ಘಾಟಿಸಿದರು.
ಆರೋಗ್ಯ ವನ ಸುಮಾರು 17 ಎಕರೆ ವಿಸ್ತೀರ್ಣ ಹೊಂದಿದೆ. ಈ ಬೃಹತ್ ವನದಲ್ಲಿ ವಿವಿಧ ಜಾತಿಯ ಔಷಧೀಯ ಸಸ್ಯ, ಗಿಡಮೂಲಿಕೆಗಳನ್ನು ಬೆಳೆಸಲಾಗಿದೆ. ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಪ್ರಾಮುಖ್ಯತೆ ವಹಿಸುವ ಗಿಡಮೂಲಿಕೆಗಳು ಇಲ್ಲಿದೆ ಎಂದು ಅಧಿಕಾರಿಗಳು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದ 17 ಯೋಜನೆಗಳಲ್ಲಿ ಆರೋಗ್ಯ ವನ ಕೂಡಾ ಒಂದಾಗಿದೆ. ಏಕತಾ ಪ್ರತಿಮೆ ಸಮೀಪ ಈ ವನ ನಿರ್ಮಾಣಗೊಂಡಿದೆ. ಏಕತಾ ಪ್ರತಿಮೆ ಸರ್ದಾರ್ ವಲ್ಲಭ ಭಾಯಿ ಪಟೇಲರಿಗೆ ಸಮರ್ಪಿತವಾದ ಸ್ಮಾರಕವಾಗಿದ್ದು, ಇದು ಗುಜರಾತಿನ ಜನಪ್ರಿಯ ಆಕರ್ಷಕ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ:ಭಾರತೀಯ ಹಾಕಿಗೆ ಇವಳೇ ರಾಣಿ: ಬಡತನದಲ್ಲಿ ಅರಳಿದ ಹಾಕಿ ಪ್ರತಿಭೆ
ಈ ಆರೋಗ್ಯ ವನದಲ್ಲಿ ಜನರ ಬದುಕಿನ ಅಂಗವಾಗಿರುವ ಯೋಗ, ಆಯುರ್ವೇದ ಮತ್ತು ಧ್ಯಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತದೆ.17 ಎಕರೆ ವಿಸ್ತಾರವಾದ ಆರೋಗ್ಯ ವನದಲ್ಲಿ 380 ಆಯ್ದ ಜಾತಿಗಳ ಐದು ಲಕ್ಷ ಔಷಧೀಯ ಗಿಡಗಳನ್ನು ಬೆಳೆಸಲಾಗಿದೆ ಎಂದು ಪ್ರಕಟಣೆ ವಿವರಿಸಿದೆ.
ಅಷ್ಟೇ ಅಲ್ಲ ಆರೋಗ್ಯ ವನದಲ್ಲಿ ಕಮಲದ ಕೊಳ, ಆಲ್ಬಾ ಗಾರ್ಡನ್, ಯೋಗ ಮತ್ತು ಧ್ಯಾನ ಉದ್ಯಾನ, ಒಳಾಂಗಣ ಸಸ್ಯ ವಿಭಾಗ, ಡಿಜಿಟಲ್ ಮಾಹಿತಿ ಕೇಂದ್ರ, ನೆನಪಿನ ಕಾಣಿಕೆ ಮತ್ತು ಆಯುರ್ವೇದ ಆಹಾರ ಪೂರೈಸುವ ಕೆಫೆಟೇರಿಯಾ ಕೂಡಾ ಇಲ್ಲಿರಲಿದೆ ಎಂದು ತಿಳಿಸಿದೆ.