ನವದೆಹಲಿ:ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಮೇ 3ರ ನಂತರ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಮಾತ್ರ ಮುಂದುವರಿಯುವ ಸಾಧ್ಯತೆ ಇದ್ದಿರುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ವಿವಿಧ ರಾಜ್ಯದ ಮುಖ್ಯಮಂತ್ರಿಗಳ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸುಳಿವು ನೀಡಿರುವುದಾಗಿ ವರದಿ ತಿಳಿಸಿದೆ.
ಮಾರಣಾಂತಿಕ ಕೋವಿಡ್ 19 ವೈರಸ್ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸಬೇಕಾಗಿದ್ದು, ಲಾಕ್ ಡೌನ್ ತೆರವುಗೊಳಿಸುವ ನೀತಿಯನ್ನು ಸಿದ್ದಪಡಿಸುವಂತೆ ಕೇಳಿರುವುದಾಗಿ ವರದಿ ವಿವರಿಸಿದೆ.
ದೇಶಾದ್ಯಂತ ಎರಡನೇ ಹಂತದಲ್ಲಿ ಮುಂದುವರಿಸಿರುವ ಲಾಕ್ ಡೌನ್ ಕುರಿತ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆ ನಡೆಸಿದರು. ಪ್ರಸ್ತುತ ಕೋವಿಡ್ 19 ವೈರಸ್ ಬಿಕ್ಕಟ್ಟನ್ನು ನಿರ್ವಹಿಸಲು ರಾಜ್ಯಗಳ ಇಚ್ಛಾಶಕ್ತಿಯ ಶ್ರಮ ದೊಡ್ಡ ಬೆಂಬಲ ನೀಡಿದಂತಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮದಿಂದ ಸಾವಿರಾರು ಮಂದಿಯ ಜೀವ ಉಳಿದಂತಾಗಿದೆ ಎಂದು ಮೋದಿ ಹೇಳಿದರು.
ನಾವು ಈಗಾಗಲೇ ಎರಡು ಹಂತದ ಲಾಕ್ ಡೌನ್ ಕಂಡಿದ್ದೇವೆ. ಮೊದಲ ಹಂತದಲ್ಲಿ ಕಠಿಣ ನಿಯಮ ಜಾರಿಯಲ್ಲಿದ್ದು, ನಂತರ 2ನೇ ಹಂತದಲ್ಲಿ ಸ್ವಲ್ಪ ಸಡಿಲಿಕೆ ಮಾಡಲಾಗಿತ್ತು. ರಾಜ್ಯಗಳು ತುಂಬಾ ಉತ್ತಮವಾಗಿ ಕಾರ್ಯನಿರ್ವಹಿಸಿರುವುದಾಗಿ ಪ್ರಧಾನಿ ಮುಖ್ಯಮಂತ್ರಿಗಳನ್ನು ಶ್ಲಾಘಿಸಿರುವುದಾಗಿ ವರದಿ ವಿವರಿಸಿದೆ.
ಇನ್ನು ಮುಂದೆ ರಾಜ್ಯ ಸರ್ಕಾರಗಳು ಕೋವಿಡ್ 19 ವೈರಸ್ ನ ರೆಡ್ ಜೋನ್ ಗಳನ್ನು ಆರೆಂಜ್ ಮತ್ತು ಅದರ ನಂತರ ಗ್ರೀನ್ ಜೋನ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕಾಗಿದೆ. ನಾವು ಧೈರ್ಯಶಾಲಿಗಳಾಗಬೇಕು, ಜತೆಗೆ ಬದಲಾವಣೆಯೊಂದಿಗೆ ಸಾಮಾನ್ಯ ಜನರಂತೆ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.