ನವದೆಹಲಿ: ದೇಶದ ಹೊಲಗಳಲ್ಲಿ ಇನ್ನು ಮುಂದೆ ಕೀಟನಾಶಕಗಳು, ಪೋಷಕಾಂಶಗಳ ಸಿಂಪಡಣೆಯ ಕೆಲಸವನ್ನು ಡ್ರೋನ್‌ಗಳೇ ಮಾಡಲಿವೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂಬಂತೆ, ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ದೇಶಾದ್ಯಂತ 100 “ಮೇಡ್ ಇನ್ ಇಂಡಿಯಾ ಕಿಸಾನ್ ಡ್ರೋನ್’ಗಳಿಗೆ ಚಾಲನೆ ನೀಡಿದ್ದಾರೆ. ಭಾರತೀಯ ಕೃಷಿ ಕ್ಷೇತ್ರದಲ್ಲಿ ಇದೊಂದು ಮಹತ್ವದ ಮೈಲುಗಲ್ಲು ಎಂದೂ ಅವರು ಬಣ್ಣಿಸಿದ್ದಾರೆ.
ವರ್ಚುವಲ್ ಆಗಿ ಕಿಸಾನ್ ಡ್ರೋನ್‌ಗಳಿಗೆ ಚಾಲನೆ ನೀಡಿದ ಬಳಿಕ ಹರ್ಯಾಣದ ಮನೇಸಾರ್‌ನಲ್ಲಿ ರೈತರ ಸಮೂಹದೊಂದಿಗೆ ಸಂವಾದವನ್ನೂ ನಡೆಸಿದ್ದಾರೆ. ಅಲ್ಲದೇ, “ಡ್ರೋನ್ ಕಿಸಾನ್ ಯಾತ್ರೆ’ಗೂ ಹಸಿರು ನಿಶಾನೆ ತೋರಿದ್ದಾರೆ.
ಈ ವೇಳೆ ಮಾತನಾಡಿದ ಮೋದಿ, “ಕಿಸಾನ್ ಡ್ರೋನ್‌ಗಳು ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ. ಮುಂಬರುವ ದಿನಗಳಲ್ಲಿ ರೈತರು ಅಧಿಕ-ಸಾಮರ್ಥ್ಯದ ಡ್ರೋನ್‌ಗಳನ್ನು ಬಳಸಿಕೊಂಡೇ ಅತ್ಯಂತ ಕನಿಷ್ಠ ಸಮಯದಲ್ಲಿ ಹಣ್ಣು, ತರಕಾರಿ, ಹೂವು ಮತ್ತಿತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಾಟ ಮಾಡಬಹುದು. ಇದರಿಂದ ರೈತರ ಆದಾಯವೂ ಹೆಚ್ಚಳವಾಗಲಿದೆ’ ಎಂದಿದ್ದಾರೆ.
ದೇಶದಲ್ಲೀಗ ಡ್ರೋನ್ ಮಾರುಕಟ್ಟೆಗೆ ಹಾಗೂ ಹೊಸ ಆವಿಷ್ಕಾರಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಈಗಾಗಲೇ ಗರುಡ ಏರೋಸ್ಪೇಸ್ ಸಂಸ್ಥೆಯು ಮುಂದಿನ 2 ವರ್ಷಗಳಲ್ಲಿ 1 ಲಕ್ಷ ಮೇಡ್-ಇನ್-ಇಂಡಿಯಾ ಡ್ರೋನ್‌ಗಳನ್ನು ತಯಾರಿಸುವ ಗುರಿ ಹಾಕಿಕೊಂಡಿದೆ. ಇದರಿಂದ ಯುವಜನರಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಈಗ 200ರಷ್ಟಿರುವ ಡ್ರೋನ್‌ಗಳ ಸಂಖ್ಯೆ ಸದ್ಯದಲ್ಲೇ ಸಾವಿರ ದಾಟಲಿದೆ ಎಂದೂ ಮೋದಿ ಹೇಳಿದ್ದಾರೆ.
ಕಿಸಾನ್ ಡ್ರೋನ್‌ನ ಅಂದಾಜು ಬೆಲೆ – 5-10 ಲಕ್ಷ ರೂ.
ಕಾರ್ಯನಿರ್ವಹಣೆ – ಇಂಟರ್ನೆಂಟ್ ಆಧಾರಿತ ಸ್ಮಾರ್ಟ್ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಣೆ
ಡ್ರೋನ್‌ನ ಕೆಲಸ – ಕ್ರಿಮಿನಾಶಕ ಸಿಂಪಡಣೆ, ಬೆಳೆಗಳ ಪರಿಶೀಲನೆ, ಪೋಷಕಾಂಶ ಸಿಂಪಡಣೆ ಇತ್ಯಾದಿ
ಅನುಕೂಲತೆಗಳೇನು?
– ಬೆಳೆ ಮೌಲ್ಯಮಾಪನ, ಭೂದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪಡಣೆಗೆ ಬಳಕೆ.
– ದೇಶಾದ್ಯಂತ “ರಾಸಾಯನಿಕಮುಕ್ತ ರಾಷ್ಟ್ರೀಯ ಕೃಷಿ’ಗೆ ಉತ್ತೇಜನ ನೀಡುವ ಉದ್ದೇಶ
– ಮುಂದಿನ ದಿನಗಳಲ್ಲಿ ಹೂವು, ಹಣ್ಣು, ತರಕಾರಿಗಳನ್ನು ಹೊಲಗಳಿಂದ ನೇರವಾಗಿ ಮಾರುಕಟ್ಟೆಗೆ ಒಯ್ಯಲು ಅಧಿಕ ಸಾಮರ್ಥ್ಯದ ಡ್ರೋನ್‌ಗಳ ಬಳಕೆ.
– ಇದರಿಂದ ಉತ್ಪನ್ನಗಳಿಗೆ ಹಾನಿ ಆಗುವುದನ್ನು ತಪ್ಪಿಸಬಹುದು, ಸಮಯವೂ ಉಳಿತಾಯವಾಗುತ್ತದೆ, ರೈತರು ಮತ್ತು ಮೀನುಗಾರರ ಆದಾಯವೂ ಹೆಚ್ಚುತ್ತದೆ
– ಡ್ರೋನ್ ಮಾರುಕಟ್ಟೆ ಅಭಿವೃದ್ಧಿಯಿಂದ ಯುವಜನರಿಗೆ ಉದ್ಯೋಗ ಮತ್ತು ಹೊಸ ಅವಕಾಶಗಳ ಸೃಷ್ಟಿ.