ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಆಗಸ್ಟ್ 15) ಐತಿಹಾಸಿಕ ಕೆಂಪು ಕೋಟೆಯಲ್ಲಿ ಆಜಾದಿ ಕಾ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಷ್ಟ್ರಧ್ವಜದ ಚಿತ್ರ ಹೊಂದಿರುವ ಬಿಳಿ ಟರ್ಬನ್ ಪೇಟಾ ಧರಿಸಿದ್ದು, ಬಿಳಿ ಜುಬ್ಬಾ ಫೈಜಾಮದ ಮೇಲೆ ನೀಲಿ ಬಣ್ಣದ ಜಾಕೆಟ್ ತೊಟ್ಟಿರುವುದು ಎಲ್ಲರ ಗಮನಸೆಳೆಯಿತು.
ಇದನ್ನೂ ಓದಿ:“ಇನ್‌ಸ್ಪೆಕ್ಟರ್ ಕರೆಯುತ್ತಿದ್ದಾರೆ’ ಎಂದು ಕರೆದು ಜೈಲಿಗೆ ಅಟ್ಟಿದರು: ಶ್ರೀನಿವಾಸ ಕಾಮತ್
ಈ ಬಾರಿಯ ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಟೆಲಿಪ್ರಾಂಪ್ಟರ್ ಕೈಬಿಟ್ಟು ಪೇಪರ್ ನೋಟ್ಸ್ ಬಳಕೆ ಮಾಡುವ ಮೂಲಕ ಭಾಷಣ ಮಾಡಿರುವುದು ವಿಶೇಷವಾಗಿತ್ತು. ಆಜಾದಿ ಕಾ ಅಮೃತ್ ಮಹೋತ್ಸವ ಅಭಿಯಾನದಡಿ ಭಾರತ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಪೂರ್ಣಗೊಳಿಸಿ 76ನೇ ವರ್ಷದ ಸಂಭ್ರಮದಲ್ಲಿ ಭಾಗಿಯಾಗಿರುವುದಕ್ಕೆ ದೇಶದ ನಿವಾಸಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಹೋರಾಟಗಾರರ ತ್ಯಾಗ, ಬಲಿದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾವಿಂದು ದೇಶದ ಕುರಿತ ಸ್ವಾತಂತ್ರ್ಯ ವೀರರ ಕನಸು ಮತ್ತು ದೃಷ್ಟಿಕೋನವನ್ನು ನೆನಪಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಬ್ರಿಟಿಷ್ ಸಾಮ್ರಾಜ್ಯದ ಕಪಿ ಮುಷ್ಠಿ ವಿರುದ್ಧ ಮಹಾತ್ಮಾ ಗಾಂಧಿ, ಭಗತ್ ಸಿಂಗ್, ರಾಜ್ ಗುರು, ರಾಮ್ ಪ್ರಸಾದ್ ಬಿಸ್ಮಿಲ್, ರಾಣಿ ಲಕ್ಷ್ಮೀಭಾಯಿ, ಸುಭಾಶ್ಚಂದ್ರ ಬೋಸ್ ಸೇರಿದಂತೆ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಪ್ರತಿಫಲ ನಾವು ಇಂದು ಕಾಣುತ್ತಿದ್ದೇವೆ ಎಂದರು.
ನಾವು ಕೇವಲ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಕ್ಕೆ ಮಾತ್ರ ಕೃತಜ್ಞತೆ ಸಲ್ಲಿಸುವುದಲ್ಲ, ಜೊತೆಗೆ ಸ್ವತಂತ್ರ ಭಾರತದ ನಿರ್ಮಾತೃರಾದ ಜವಾಹರಲಾಲ್ ನೆಹರು, ರಾಮ್ ಮನೋಹರ್ ಲೋಹಿಯಾ, ಸರ್ದಾರ್ ವಲ್ಲಭಭಾಯ್ ಪಟೇಲ್ ಸೇರಿದಂತೆ ಹಲವಾರು ಗಣ್ಯರ ಕೊಡುಗೆಯನ್ನೂ ನೆನಪಿಸಿಕೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.