ನವದೆಹಲಿ: ದೇಶದಲ್ಲಿ ಕೋವಿಡ್ 19 ವೈರಸ್ ನಿಂದಾಗಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರತಿಭಾ ಪಾಟೀಲ್, ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ
ಸೇರಿದಂತೆ ವಿರೋಧ ಪಕ್ಷದ ಎಲ್ಲಾ ಹಿರಿಯ ಮುಖಂಡರಿಗೆ ದೂರವಾಣಿ ಕರೆ ಮಾಡಿರುವುದಾಗಿ ವರದಿ ತಿಳಿಸಿದೆ.
ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್, ಅಖಿಲೇಶ್ ಯಾದವ್, ತೃಣಮೂಲ ಕಾಂಗ್ರೆಸ್
ವರಿಷ್ಠೆ, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾದ ಬಿಜು ಪಟ್ನಾಯಕ್, ಕೆಸಿಆರ್, ಎಂಕೆ ಸ್ಟಾಲಿನ್, ಪ್ರಕಾಶ್
ಸಿಂಗ್ ಬಾದಲ್ ಅವರಿಗೂ ದೂರವಾಣಿ ಕರೆ ಮಾಡಿ ಮಾತನಾಡಿರುವುದಾಗಿ ವರದಿ ವಿವರಿಸಿದೆ.
ಕೋವಿಡ್ 19 ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ದೇಶಾದ್ಯಂತ ಮೂರು ವಾರಗಳ ಲಾಕ್ ಡೌನ್ ಘೋಷಿಸಿದ್ದು, ಇದೀಗ ಎರಡು ವಾರ ಕಳೆಯುತ್ತಿರುವ ನಡುವೆಯೇ ವಿರೋಧ ಪಕ್ಷದ ನಾಯಕರು, ಮಾಜಿ ಪ್ರಧಾನಿ, ರಾಷ್ಟ್ರಪತಿಗಳ ಜತೆಗೆ ಚರ್ಚೆಗೆ ಮುಂದಾಗಿರುವುದಾಗಿ ವರದಿ ತಿಳಿಸಿದೆ.
ಲಾಕ್ ಡೌನ್ ಘೋಷಿಸುವ ಮುನ್ನ ಪ್ರಧಾನ ಮಂತ್ರಿ ವಿರೋಧ ಪಕ್ಷವಾಗಲಿ, ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಅಭಿಪ್ರಾಯ ಕೇಳಲೇ ಇಲ್ಲ ಎಂಬುದಾಗಿ ಟೀಕೆ ವ್ಯಕ್ತವಾಗಿತ್ತು. ಏತನ್ಮಧ್ಯೆ ಕೋವಿಡ್ 19 ವೈರಸ್ ಅಟ್ಟಹಾಸ, ಲಾಕ್ ಡೌನ್ ಗೆ ಸಂಬಂಧಿಸಿದಂತೆ ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ಪ್ರಧಾನಿ ಮೋದಿ ಅವರು ಈ ದೂರವಾಣಿ ಕರೆ ಮಾಡಿರುವುದಾಗಿ ವರದಿ ಹೇಳಿದೆ.