ಹೊಸದಿಲ್ಲಿ: ಹಿರಿಯ ಗಾಯಕಿ, ಭಾರತ ರತ್ನ ಪುರಸ್ಕೃತೆ ಲತಾ ಮಂಗೇಶ್ಕರ್ ಅವರು ಫೆ.6ರಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು. ಕೋವಿಡ್ ಕಾರಣದಿಂದ ಕೆಲವು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಲತಾ ಮಂಗೇಶ್ಕರ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 92 ವರ್ಷದ ಲತಾ ಮಂಗೇಶ್ಕರ್ ಇಂದು ಇಹಲೋಕ ತ್ಯಜಿಸಿದರು.
ಲೆಜೆಂಡಿ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಗಣ್ಯರು ದುಃಖ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರಣಿ ಟ್ವೀಟ್ ಮಾಡಿದ್ದು, ಲತಾ ದೀದಿಯನ್ನು ಕಳೆದುಕೊಂಡ ದುಃಖವನ್ನು ವಿವರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
“ದಯೆ ಮತ್ತು ಕಾಳಜಿಯ ಪ್ರತಿರೂಪದಂತಿದ್ದ ಲತಾ ದೀದಿಯನ್ನು ಕಳೆದುಕೊಂಡ ದುಃಖವನ್ನು ನನಗೆ ಶಬ್ದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆಯಿಂದ ಉಂಟಾದ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ. ಅವರ ಮಧುರ ಧ್ವನಿಗೆ ಜನರನ್ನು ಮಂತ್ರಮುಗ್ಧರನ್ನಾಗಿಸುವ ಅಪ್ರತಿಮ ಶಕ್ತಿಯಿತ್ತು. ಲತಾ ಮಂಗೇಶ್ಕರ್ ಅವರು ಭಾರತೀಯ ಸಂಸ್ಕೃತಿಯ ಬಲಾಢ್ಯ ಪ್ರತಿನಿಧಿಯಾಗಿದ್ದರು. ಮುಂದಿನ ಪೀಳಿಗೆಯ ನೆನಪಲ್ಲಿ ಸದಾ ಇರುತ್ತಾರೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ:ಲತಾ ಮಂಗೇಶ್ಕರ್: ಮಂದ ಸ್ವರ ಎಂದು ತಿರಸ್ಕರಿಸಿದವರೇ ಒಂದು ಹಾಡಿಗಾಗಿ ದುಂಬಾಲು ಬಿದ್ದಿದ್ದರು
“ಲತಾ ದೀದಿಯವರ ಹಾಡುಗಳು ವಿವಿಧ ಭಾವನೆಗಳನ್ನು ಹುಟ್ಟು ಹಾಕಿದವರು. ಅವರ ಧ್ವನಿಯಲ್ಲಿ ಅಂಥಾ ಶಕ್ತಿಯಿತ್ತು. ಭಾರತೀಯ ಚಿತ್ರರಂಗದಲ್ಲಿ ದಶಕಗಳಿಂದ ಆದ ಪರಿವರ್ತನೆಯನ್ನು ಲತಾ ಮಂಗೇಶ್ಕರ್ ತುಂಬ ಹತ್ತಿರದಿಂದ ನೋಡಿದವರು. ಸಿನಿಮಾ ಕ್ಷೇತ್ರದಿಂದ ಆಚೆ, ಭಾರತದ ಅಭಿವೃದ್ಧಿಯೆಡೆಗೆ ತುಡಿತವನ್ನು ಹೊಂದಿದ್ದರು. ಒಂದು ಬಲಿಷ್ಠ, ಅಭಿವೃದ್ಧಿ ಹೊಂದಿದ ಭಾರತವನ್ನು ನೋಡುವುದು ಅವರ ಅತಿದೊಡ್ಡ ಬಯಕೆಯಾಗಿತ್ತು” ಎಂದು ಹೇಳಿದ್ದಾರೆ.
ಲತಾ ಮಂಗೇಶ್ಕರ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿರು ಪಿಎಂ ಮೋದಿ, “ಲತಾ ದೀದಿಯವರಿಂದ ನಾನು ಅಪಾರ ಪ್ರೀತಿ ಪಡೆದಿದ್ದೇನೆ. ಅವರ ಪ್ರೀತಿಪಾತ್ರರಲ್ಲಿ ನಾನೂ ಒಬ್ಬನಾಗಿದ್ದು ಬಹುದೊಡ್ಡ ಗೌರವ ಎಂದು ಭಾವಿಸುತ್ತೇನೆ. ನಾನು ಅವರೊಂದಿಗೆ ಕಳೆದ ಕ್ಷಣಗಳು, ಮಾತುಕತೆಗಳನ್ನೆಂದಿಗೂ ಮರೆಯಲು ಸಾಧ್ಯವಿಲ್ಲ. ಲತಾ ದೀದಿ ನಿಧನಕ್ಕೆ ನನ್ನ ಸಂತಾಪಗಳು. ಅವರ ಕುಟುಂದೊಟ್ಟಿಗೆ ಮಾತನಾಡಿ ಸಾಂತ್ವನ ಹೇಳಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹಾಡು ನಿಲ್ಲಿಸಿದ ಗಾನಕೋಗಿಲೆ…! ದಿಗ್ಗಜ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ಇನ್ನಿಲ್ಲ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡಾ ಸಂತಾಪ ವ್ಯಕ್ತಪಡಿಸಿದ್ದು, “ಲತಾ ಜೀ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ಅವಳ ಸುಮಧುರ ಹಾಡುಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಮುಟ್ಟಿದ್ದವು. ನಿಮ್ಮ ಸಂಗೀತ ಮತ್ತು ನೆನಪುಗಳಿಗೆ ಧನ್ಯವಾದಗಳು. ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪಗಳು” ಎಂದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದುಃಖ ವ್ಯಕ್ತಪಡಿಸಿದ್ದು, ಲತಾ ದೀದಿ ಅವರ ನಿಧನದೊಂದಿಗೆ ಸಂಗೀತದ ಸದ್ದುಗಳು ಮೌನವಾಗಿವೆ. ಹಲವಾರು ತಲೆಮಾರುಗಳ ಭಾರತೀಯರು ನಿಮ್ಮ ಅಪ್ರತಿಮ ಮಧುರ ಧ್ವನಿಯಲ್ಲಿ ಲೆಕ್ಕವಿಲ್ಲದಷ್ಟು ಹಾಡುಗಳನ್ನು ಕೇಳುತ್ತಾ ಬೆಳೆದಿದ್ದಾರೆ. ಓಂ ಶಾಂತಿ” ಎಂದಿದ್ದಾರೆ.
ಗಾನ ಕೋಗಿಲೆ, ಭಾರತರತ್ನ ಲತಾ ಮಂಗೇಶ್ಕರ್ ಅವರ ನಿಧನದ ವಾರ್ತೆ ತೀವ್ರ ದುಃಖ ತಂದಿದೆ. ಏಳು ದಶಕಗಳ ಕಾಲ ತಮ್ಮ ಗಾನಸುಧೆಯಿಂದ ಸಂಗೀತ ಜಗತ್ತನ್ನು ಶ್ರೀಮಂತಗೊಳಿಸಿದ ಅವರ ನಿಧನ, ಕಲಾ ಲೋಕಕ್ಕೆ ತುಂಬಲಾರದ ನಷ್ಟ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕೂ ಮಾಡಿದ್ದಾರೆ.