ಸಿಂಗಾಪುರ: ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಿಂಗಾಪುರದಲ್ಲಿರುವ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಮೊದಲಿಗೆ ಶ್ರೀ ಮಾರಿಯಮ್ಮ ದೇಗುಲಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿನ ಪ್ರಧಾನ ಅರ್ಚಕರು ಮೋದಿಯವರಿಗೆ ಚಿನ್ನದ ಬಣ್ಣದ ಶಾಲು ಹೊದಿಸಿ ಗೌರವಿಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ಈ ದೇಗುಲ ಭಾರತ ಮತ್ತು ಸಿಂಗಾಪುರ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಸೂಚಿಸುತ್ತದೆ ಎಂದು ಬರೆದುಕೊಂಡಿದ್ದಾರೆ. 1827ರಲ್ಲಿ ನಿರ್ಮಿಸಲಾಗಿರುವ ಈ ದೇಗುಲ ಸಿಂಗಾಪುರದಲ್ಲಿರುವ ಹಳೆಯ ದೇವಸ್ಥಾನ. ನಾಗಪಟ್ಟಣಂ ಮತ್ತು ಕಡಲೂರುಗಳಿಂದ ಬಂದಿದ್ದವರು ಅದನ್ನು ನಿರ್ಮಿಸಿದ್ದರು.
ಬಳಿಕ ಮೋದಿ ಅವರು 1826ರಲ್ಲಿ ಭಾರತದ ಮುಸ್ಲಿಂ ವ್ಯಾಪಾರಿ ಅನ್ಸೆರ್ ಸಾಹೇಬ್ ನಿರ್ಮಿಸಿದ್ದ ಮಸೀದಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಹಸಿರು ಶಾಲನ್ನು ಧಾರ್ಮಿಕ ಕೇಂದ್ರಕ್ಕೆ ಉಡುಗೊರೆಯಾಗಿ ನೀಡಿದರು. ಪುರಾತನವಾಗಿರುವ 2 ಕ್ಷೇತ್ರಗಳಿಗೆ ಭೇಟಿ ನೀಡಿದ ಬಳಿಕ 2007ರಲ್ಲಿ ನಿರ್ಮಾಣಗೊಂಡ ಬೌದ್ಧ ದೇಗುಲಕ್ಕೂ ತೆರಳಿದರು.
ಅಮೆರಿಕ ರಕ್ಷಣಾ ಸಚಿವರ ಜತೆ ಮಾತುಕತೆ: ಪೆಸಿಫಿಕ್ ಕಮಾಂಡ್ ಅನ್ನು ಇಂಡೋ-ಪೆಸಿಫಿಕ್ ಕಮಾಂಡ್ ಎಂದು ಪುನರ್ ನಾಮಕರಣ ಮಾಡಿದ ಕೆಲವೇ ದಿನಗಳ ಬಳಿಕ ಸಿಂಗಾಪುರದಲ್ಲಿ ಪ್ರಧಾನಿ ಮೋದಿ ಅಮೆರಿಕದ ರಕ್ಷಣಾ ಸಚಿವ ಜಿಮ್ ಮ್ಯಾಟಿಸ್ ಜತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾತುಕತೆ ವೇಳೆ ಇದ್ದರು. ಒಟ್ಟು ಒಂದು ಗಂಟೆ ಕಾಲ ನಡೆದ ಮಾತುಕತೆಯಲ್ಲಿ ದ್ವಿಪಕ್ಷೀಯವಾಗಿ ಅಗತ್ಯವಾಗಿರುವ ರಕ್ಷಣಾ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.
ಚಾಂಗಿ ನೌಕಾ ನೆಲೆಗೆ ಭೇಟಿ: ಪ್ರವಾಸದ ಕೊನೆಯ ಹಂತದಲ್ಲಿ ಮೋದಿಯವರು ಚಾಂಗಿ ನೌಕಾ ನೆಲೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಭಾರತೀಯ ನೌಕಾಪಡೆ ಮತ್ತು ಸಿಂಗಾಪುರದ ರಾಯಲ್ ನೌಕಾಪಡೆಯ ಅಧಿಕಾರಿಗಳು, ಸಿಬ್ಬಂದಿ ಜತೆಗೆ ಮಾತನಾಡಿದ್ದಾರೆ. ಇದೇ ವೇಳೆ ಭಾರತೀಯ ನೌಕಾಪಡೆ ಅಧಿಕಾರಿಗಳು, ಸಿಬ್ಬಂದಿ ” ವಂದೇಮಾತರಂ’ ಎಂದು ಜಯಘೋಷ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಂಗಾಪುರ ರಕ್ಷಣಾ ಸಚಿವ ಮೊಹಮ್ಮದ್ ಮಲಿಕಿ ಒಸ್ಮಾನ್ ಜತೆಗಿದ್ದರು. 25 ವರ್ಷಗಳ ಕಾಲ ಭಾರತ-ಸಿಂಗಾಪುರ ನಡುವೆ ಜಂಟಿ ಸಮರಾಭ್ಯಾಸ ನಡೆಯುತ್ತಿದೆ.
ರುಪೇ ಕಾರ್ಡ್‌ನಲ್ಲಿ ವರ್ಣಚಿತ್ರ ಖರೀದಿ
ವಿಶೇಷವೆಂದರೆ, ಪ್ರಧಾನಿ ನರೇಂದ್ರ ಮೋದಿ ರುಪೇ ಕಾರ್ಡ್ ಬಳಸಿ ಮಧುಬನಿ ತೈಲ ಚಿತ್ರಗಳನ್ನು ಖರೀದಿ ಮಾಡಿದ್ದಾರೆ. ಸಿಂಗಾಪುರದಲ್ಲಿರುವ ಇಂಡಿಯಾ ಹೆರಿಟೇಜ್ ಸೆಂಟರ್‌ನಿಂದ ಅವರು ಚಿತ್ರಗಳನ್ನು ಖರೀದಿ ಮಾಡಿದ್ದಾರೆ. 2 ದಿನಗಳ ಹಿಂದಷ್ಟೇ ಅವರು ಸಿಂಗಾಪುರದಲ್ಲಿ ರುಪೇ, ಎಸ್‌ಬಿಐ, ಭೀಮ್ ಆ್ಯಪ್‌ಗ್ಳನ್ನು ಲೋಕಾರ್ಪಣೆ ಮಾಡಿದ್ದರು.
ಕ್ಲಿಫೋರ್ಡ್ ಪೀರ್‌ನಲ್ಲಿ ಮಹಾತ್ಮ ಫಲಕ ಅನಾವರಣ
ಸಿಂಗಾಪುರದ ಮಾಜಿ ಪ್ರಧಾನಿ ಗೋ ಚಾಕ್ ಟಾಂಗ್ ಜತೆಗೂಡಿ, ಪ್ರಧಾನಿ ಮೋದಿ ಅವರು ನಗರದ ಕ್ಲಿಫೋರ್ಡ್ ಪೀರ್ ಎಂಬಲ್ಲಿ ಮಹಾತ್ಮಾ ಗಾಂಧಿ ಅವರ ಫಲಕವನ್ನು ಉದ್ಘಾಟಿಸಿದ್ದಾರೆ. ಇದೇ ಸ್ಥಳದಲ್ಲಿ ಗಾಂಧಿ ಚಿತಾಭಸ್ಮ ವಿಸರ್ಜಿಸಲಾಗಿತ್ತು. ಕಾರ್ಯಕ್ರಮದಲ್ಲಿ 250ಕ್ಕೂ ಅಧಿಕ ಮಂದಿ ಭಾರತೀ ಯರು ಭಾಗವಹಿಸಿದ್ದರು. 1948ರಲ್ಲಿ ಇದೇ ಪ್ರದೇಶದಲ್ಲಿ ರಾಷ್ಟ್ರಪಿತನ ಚಿತಾಭಸ್ಮ ವಿಸರ್ಜಿಸಿದ್ದರ ಸ್ಮರಣಾರ್ಥ 70 ವರ್ಷ ಬಳಿಕ ಈ ಫಲಕ ನಿರ್ಮಿಸಲಾಗಿದೆ. ಅನಾವರಣ ವೇಳೆ “ರಘುಪತಿ ರಾಘವ ರಾಜಾರಾಮ್’ ಮತ್ತು “ವೈಷ್ಣವ ಜನತೋ’ ಹಾಡುಗಳನ್ನು ಹಾಡಲಾಯಿತು.