ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಲ್ಲಿ ನಡೆಯುತ್ತಿರುವ ಸಂಘರ್ಷದ ಸಂದರ್ಭದಲ್ಲಿ ಭಾರತದ ಭದ್ರತಾ ಸನ್ನದ್ಧತೆ ಮತ್ತು ಜಾಗತಿಕ ಸನ್ನಿವೇಶ ಕುರಿತು ಪರಿಶೀಲನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ (ಮಾ.13) ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಭದ್ರತಾ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸಲು ಒತ್ತು ನೀಡಿದ ಮೋದಿ,ರಕ್ಷಣಾ ವಲಯದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಪ್ರಯತ್ನಗಳನ್ನು ಮಾಡಬೇಕೆಂದು ಪುನರುಚ್ಚರಿಸಿದರು ಇದರಿಂದ ಅದು ನಮ್ಮ ಭದ್ರತೆಯನ್ನು ಬಲಪಡಿಸುವುದಲ್ಲದೆ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದರು.
ಇತ್ತೀಚಿನ ಬೆಳವಣಿಗೆಗಳು ಮತ್ತು ಗಡಿ ಪ್ರದೇಶಗಳಲ್ಲಿ ಭಾರತದ ಭದ್ರತಾ ಸನ್ನದ್ಧತೆಯ ಹಾಗೂ ಇನ್ನಿತರ ವಿವಿಧ ಭದ್ರತೆಗಳ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿವರಿಸಲಾಯಿತು.
ರಷ್ಯಾ-ಉಕ್ರೇನ್ ಮೇಲೆ ಯುದ§ ಪ್ರಾರಂಭದಿಂದಲೂ ಉಕ್ರೇನ್‌ನಲ್ಲಿದ್ದ ಭಾರತದ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ಸರಕಾರ ಸಂಪೂರ್ಣ ಶ್ರಮಿಸಿದೆ. ಅಪರೇಷನ್ ಗಂಗಾ ಮೂಲಕ ಉಕ್ರೇನ್ ನೆರೆ ರಾಷ್ಟ್ರಗಳಿಂದ ವಿಮಾನ ವ್ಯವಸ್ಥೆ ಮಾಡಿ ಅವರನ್ನೆಲ್ಲ ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರಲು ಸರ್ವ ಪ್ರಯತ್ನಗಳನ್ನು ಕೇಂದ್ರ ಸರಕಾರ ಮಾಡುತ್ತಿವೆ.
ಖಾರ್ಕಿವ್ ನಲ್ಲಿ ಶೆಲ್ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ವಿದ್ಯಾರ್ಥಿ ನವೀನ್ ಶೇಖರಪ್ಪ ಅವರ ಪಾರ್ಥಿವ ಶರೀರವನ್ನು ಮರಳಿ ತರಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಮೋದಿ ಅವರು ನಿರ್ದೇಶನ ನೀಡಿದ್ದಾರೆ.
ಯುದ್ಧ ಪೀಡಿತ ದೇಶದಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಭಾರತ ಸಮರ್ಥವಾಗಿದೆ ಎಂದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್,ವಿದೇಶಾಂಗ ಸಚಿವ ಎಸ್.ಜೈಶಂಕರ್,ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ,ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಉನ್ನತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.