ವಯನಾಡ್: ಪ್ರಧಾನಿ ನರೇಂದ್ರ ಮೋದಿ ಅವರು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಬಗ್ಗೆ ಪಕ್ಷಪಾತ ಹೊಂದಿದ್ದಾರೆ ಮತ್ತು ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಸರಿಯಾದ ಬೆಂಬಲವನ್ನು ನೀಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಉಪಚುನಾವಣೆಯಲ್ಲಿ ಗೆದ್ದ ಬಳಿಕ ಸಹೋದರಿ ಹಾಗೂ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಭೇಟಿ ನೀಡಿ ಮುಕ್ಕಂನಲ್ಲಿ ನಡೆದ ಜಂಟಿ ಸಾರ್ವಜನಿಕ ಸಭೆಯಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದರು.
ಅದಾನಿಯನ್ನು ಅಮೆರಿಕದಲ್ಲಿ ದೋಷಾರೋಪಣೆ ಮಾಡಿದ್ದರೂ ಮತ್ತು ಅಲ್ಲಿ ಕ್ರಿಮಿನಲ್ ಎಂದು ಕರೆದರೂ ಪರವಾಗಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಸಂವಿಧಾನದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳಿದ್ದರೂ, ಅಮೆರಿಕದಲ್ಲಿ ದೋಷಾರೋಪ ಹೊರಿಸಿದ್ದರೂ ಮೋದಿ ಅವರು ಅದಾನಿಯನ್ನು ಭಾರತದ ಜನರಿಗಿಂತ ಭಿನ್ನವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ವಯನಾಡ್ ಜನತೆಗೆ ನೀಡಬೇಕಾದ ಬೆಂಬಲವನ್ನು ನೀಡಲು ಅವರು ಸಿದ್ಧರಿಲ್ಲ, ತಾರತಮ್ಯ ಮಾಡುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದರು.
ಭೂಕುಸಿತದ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಮಾತನಾಡಿದ ರಾಹುಲ್, ದುರಂತದಲ್ಲಿ ಕುಟುಂಬ ಸದಸ್ಯರು, ಆಸ್ತಿ ಕಳೆದುಕೊಂಡಿರುವ ಮತ್ತು ಸಂಕಷ್ಟಕ್ಕೆ ಸಿಲುಕಿರುವ ಜನರೊಂದಿಗೆ ತಮ್ಮ ಪಕ್ಷ ಮತ್ತು ಯುಡಿಎಫ್ ನಿಂತಿದೆ.ದುರದೃಷ್ಟವಶಾತ್, ನಾವು ಸರ್ಕಾರದಲ್ಲಿಲ್ಲ ಮತ್ತು ಆದ್ದರಿಂದ, ಸರ್ಕಾರ ಮಾಡಬಹುದಾದುದನ್ನು ನಾವು ಮಾಡಲು ಸಾಧ್ಯವಿಲ್ಲ. ಹೀಗಾಗಿ, ಭೂಕುಸಿತದಿಂದ ಸಂತ್ರಸ್ತರಿಗೆ ಸಹಾಯ ಮಾಡಲು ಕಾಂಗ್ರೆಸ್ ಮತ್ತು ಯುಡಿಎಫ್‌ನ ಪ್ರತಿಯೊಬ್ಬ ಸದಸ್ಯರು ಕೇರಳ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ನಾನು ನನ್ನ ಸಹೋದರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರಿಗೆ ಹೇಳಿದ್ದೇನೆ ಎಂದರು.
ನನ್ನ ಮನೆ, ಕಚೇರಿ ಸದಾ ತೆರೆದಿರುತ್ತದೆ: ಪ್ರಿಯಾಂಕಾ
ಸಂಸದೆಯಾದ ಬಳಿಕ ಮೊದಲ ಬಾರಿಗೆ ವಯನಾಡ್‌ಗೆ ಭೇಟಿ ನೀಡಿದ ಪ್ರಿಯಾಂಕಾ ವಾದ್ರಾ ‘ನಿಮ್ಮ ಸಮಸ್ಯೆಗಳನ್ನು ಆಲಿಸಲು ನಾನೇ ನಿಮ್ಮ ಮನೆ ಬಾಗಿಲಿಗೆ ಬರುತ್ತೇನೆ, ನೀವು ನನ್ನ ಬಳಿ ಸಮಸ್ಯೆ ಹೇಳಬೇಕೆಂದರೂ ನನ್ನ ಮನೆ ಮತ್ತು ಕಚೇರಿಯ ಬಾಗಿಲು ಸದಾ ತೆರೆದಿರುತ್ತದೆ’ ಎಂದು ಜನರಿಗೆ ಭರವಸೆ ನೀಡಿದ್ದಾರೆ. ಎನ್‌ಎಚ್-766ನಲ್ಲಿ ರಾತ್ರಿ ವೇಳೆ ಸಂಚಾರ ನಿರ್ಬಂಧ, ಸೇರಿ ಎಲ್ಲ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದಾರೆ. ಜತೆಗೆ ಬಿಜೆಪಿ ವರ್ತನೆ ಭೂ ಕುಸಿತವಿದ್ದಂತೆ ಎಂದು ಲೇವಡಿ ಮಾಡಿದ್ದಾರೆ.