ಹೊಸದಿಲ್ಲಿ: ನಷ್ಟದಲ್ಲಿರುವ ಸಾರ್ವಜನಿಕ ರಂಗದ ಉದ್ದಿಮೆ (ಪಿಎಸ್‌ಯು)ಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ನಾಲ್ಕು ವ್ಯೂಹಾತ್ಮಕ ವಲಯಗಳಲ್ಲಿರುವ ಪಿಎಸ್‌ಯುಗಳಲ್ಲಿ ಅಲ್ಪ ಪ್ರಮಾಣದ ಸರಕಾರಿ ಷೇರುಗಳನ್ನು ಉಳಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ.
ನಷ್ಟದಲ್ಲಿರುವ ಉದ್ಯಮಗಳನ್ನು ಜತೆಗಿರಿಸಿಕೊಂಡು, ಜನರ ತೆರಿಗೆ ಹಣ ಪೋಲು ಮಾಡುವ ಉದ್ದೇಶ ನಮಗಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಇದಕ್ಕೆ ಬದಲಾಗಿ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಲ್ಲಿ ಹಣ ವಿನಿಯೋಗಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಜೆಟ್‌ನಲ್ಲಿ ಖಾಸಗೀಕರಣದ ಅವಕಾಶ ಕುರಿತಾದ ವೆಬಿನಾರ್‌ನಲ್ಲಿ ಮಾತನಾಡಿದ ಮೋದಿ, ತೈಲ, ಅನಿಲ ಮತ್ತು ವಿದ್ಯುತ್ ಕ್ಷೇತ್ರಗಳ ಸುಮಾರು 100 ಸಾರ್ವಜನಿಕ ರಂಗದ ಉದ್ದಿಮೆಗಳ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ 2.5 ಲಕ್ಷ ಕೋಟಿ ರೂ. ಹೂಡಿಕೆ ಪಡೆವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಸರಕಾರದ ಪ್ರಮುಖ ಕೆಲಸವೇ ಉದ್ದಿಮೆಗಳು ಮತ್ತು ವ್ಯಾಪಾರಕ್ಕೆ ಬೆಂಬಲ ನೀಡುವುದು. ಹೀಗಾಗಿ ಸರಕಾರವು ಸ್ವತಃ ಮಾಲಕತ್ವ ಹೊಂದಿರುವುದು ಮತ್ತು ಸಂಸ್ಥೆಗಳನ್ನು ನಡೆಸುವುದು ಉತ್ತಮವಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಖಾಸಗಿ ರಂಗ ಉತ್ತಮ ಬಂಡವಾಳ ತರುತ್ತದೆ. ಜತೆಗೆ ಜಾಗತಿಕ ಮಟ್ಟದ ನಡೆ, ಉತ್ತಮ ನಿರ್ವಾಹಕರು, ನಿರ್ವಹಣೆಯಲ್ಲಿ ಬದಲಾವಣೆ ಮತ್ತು ಆಧುನೀಕರಣ ಸಾಧ್ಯವಾಗುತ್ತದೆ. ಹೀಗಾಗಿ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಖಾಸಗಿ ವಲಯಕ್ಕೆ ನೀಡಿ, ಬರುವ ಹಣವನ್ನು ಜನಕಲ್ಯಾಣ ಯೋಜನೆಗಳಿಗೆ ವೆಚ್ಚ ಮಾಡಬಹುದು ಎಂದಿದ್ದಾರೆ.
1.75 ಲಕ್ಷ ಕೋ.ರೂ. ಗುರಿ
ಬಿಪಿಸಿಎಲ್, ಏರ್ ಇಂಡಿಯಾ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಹೆಲಿಕಾಪ್ಟರ್ ಸೇವಾ ಸಂಸ್ಥೆ ಪವನ್ ಹನ್ಸ್, ಐಡಿ ಬಿಐ ಮತ್ತು ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾದ ಸರಕಾರಿ ಷೇರುಗಳನ್ನು ಎ. 1ರಿಂದ ಮಾರಾಟ ಮಾಡಿ 1.75 ಲಕ್ಷ ಕೋಟಿ ರೂ. ಗಳಿಸುವ ಗುರಿ ಇದೆ. ಜತೆಗೆ ಎಲ್‌ಐಸಿ, 2 ಸರಕಾರಿ ಬ್ಯಾಂಕ್‌ಗಳು ಮತ್ತು 1 ವಿಮಾ ಕಂಪೆನಿಗಳ ಷೇರುಗಳನ್ನೂ ಖಾಸಗಿಯವರಿಗೆ ನೀಡಲು ನಿರ್ಧರಿಸಲಾಗಿದೆ.