ಗುವಾಹಟಿ: ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತಂಡದಿಂದ “ಅತಿದೊಡ್ಡ ಬಿಹು ನೃತ್ಯ ಮತ್ತು ಅತಿದೊಡ್ಡ ಧೋಲ್ ಡ್ರಮ್ ಮೇಳ”ದ ದಾಖಲೆಯ ಸಾಧನೆಗಾಗಿ ಪ್ರಮಾಣಪತ್ರವನ್ನು ಸ್ವೀಕರಿಸಿದರು.
ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ 11304 ಜಾನಪದ ನೃತ್ಯಗಾರರು ಮತ್ತು 2548 ಡ್ರಮ್ಮರ್‌ಗಳು ಈ ಸಾಧನೆಯನ್ನು ಮಾಡಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಅಸ್ಸಾಂ ನಿಜವಾಗಿಯೂ ಎ1 ರಾಜ್ಯವಾಗುತ್ತಿದೆ. “ನಾನು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಇಲ್ಲಿಗೆ ಬಂದಾಗ ಜನರು ‘ಎ ಫಾರ್ ಅಸ್ಸಾಂ’ ಎಂದು ಹೇಳುವ ದಿನ ದೂರವಿಲ್ಲ ಎಂದು ಹೇಳಿದ್ದು ನನಗೆ ನೆನಪಿದೆ. ಇಂದು, ಅಸ್ಸಾಂ ನಿಜವಾಗಿಯೂ A1 ರಾಜ್ಯವಾಗುತ್ತಿದೆ ಎಂದರು.
ಆಚರಣೆಯನ್ನು ಶ್ಲಾಘಿಸಿ ಇದು ‘ಏಕ್ ಭಾರತ್, ಶ್ರೇಷ್ಠ್ ಭಾರತ್’ ನ ಪ್ರತಿಬಿಂಬ. ಬೋಹಾಗ್ ಬಿಹು ಅಸ್ಸಾಮಿಗಳಿಗೆ ಹೃದಯ ಮತ್ತು ಆತ್ಮದ ಹಬ್ಬವಾಗಿದೆ. ಇದು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯದ ಪರಿಪೂರ್ಣ ಸಂಕೇತವಾಗಿದೆ. ಈ ಆಚರಣೆಯು ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಸಂಕಲ್ಪವನ್ನು ‘ಸಬ್ಕಾ ಪ್ರಯಾಸ್’ ನೊಂದಿಗೆ ಪೂರೈಸಲು ಸ್ಫೂರ್ತಿಯಾಗಿದೆ. ಈ ಭಾವನೆಯೊಂದಿಗೆ, ಹಲವಾರು ಯೋಜನೆಗಳ ಅಡಿಗಲ್ಲು ಹಾಕಲಾಗಿದೆ ಮತ್ತು ಈಶಾನ್ಯ ಮತ್ತು ಅಸ್ಸಾಂನ ಅಭಿವೃದ್ಧಿಗಾಗಿ ಇಂದು ಹಲವಾರು ಯೋಜನೆಗಳನ್ನು ಉದ್ಘಾಟಿಸಲಾಗಿದೆ, ”ಎಂದು ಪ್ರಧಾನಿ ಹೇಳಿದರು.