Advertisement

ಬನ್ನಿ,ಹವಾಮಾನ ರಕ್ಷಣೆಯಲ್ಲಿ ಕೈ ಜೋಡಿಸಿ: ಶ್ರೀಮಂತ ರಾಷ್ಟ್ರಗಳಿಗೆ ಮೋದಿ ಆಹ್ವಾನ

01:41 AM Jun 28, 2022 | Team Udayavani |

ಬರ್ಲಿನ್‌: “ಬನ್ನಿ, ಪರಿಸರ, ಹವಾಮಾನ ರಕ್ಷಿಸುವ ಭಾರತದ ಪ್ರಯತ್ನಕ್ಕೆ ಕೈ ಜೋಡಿಸಿ’- ಹೀಗೆಂದು ಜಗತ್ತಿನ ಶ್ರೀಮಂತ ರಾಷ್ಟ್ರಗಳಿಗೆ ಕರೆ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ. ಜರ್ಮನಿಯ ಶೋಲ್ಜ್ ಎಲ್ಮಾದಲ್ಲಿ ನಡೆದ ಜಿ7 ರಾಷ್ಟ್ರಗಳ ಶೃಂಗಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

“ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಪರಿಸರಕ್ಕೆ ಹೆಚ್ಚಿನ ಹಾನಿ ಮಾಡುತ್ತವೆ ಎನ್ನುವ ತಪ್ಪು ತಿಳಿವಳಿಕೆ ಜಗತ್ತಿನ ಶ್ರೀಮಂತ ರಾಷ್ಟ್ರಗಳಿಗೆ ಇದೆ. ಆದರೆ ಭಾರತದ 1 ಸಾವಿರ ವರ್ಷಗಳ ಇತಿಹಾಸ ಅದನ್ನು ಸುಳ್ಳೆಂದು ಸಾಬೀತು ಮಾಡಿದೆ. ಪ್ರಾಚೀನ ಭಾರತ ಸಮೃದ್ಧಿಯನ್ನೂ ಕಂಡಿದೆ, ಗುಲಾಮಗಿರಿಯನ್ನೂ ಸಹಿಸಿಕೊಂಡಿದ್ದೇವೆ. ವಿಶ್ವದ ಶೇ.17 ಜನಸಂಖ್ಯೆ ಭಾರತದಲ್ಲಿದ್ದರೂ, ಮಾಲಿನ್ಯಕ್ಕೆ ಭಾರತದ ಕೊಡುಗೆ ಕೇವಲ ಶೇ.5 ಮಾತ್ರ’ ಎಂದು ಮೋದಿ ಅವರು ಹೇಳಿದ್ದಾರೆ.

ಭಾರತದಲ್ಲಿ ಇಂಧನ ಕ್ಷೇತ್ರದ ಬಗ್ಗೆ ವಿವರಿಸಿದ ಪ್ರಧಾನಿ, “ಕಳೆದ 9 ವರ್ಷಗಳಲ್ಲಿ ನಾವು ಜೈವಿಕರಹಿತ ಇಂಧನದ ಶೇ.40 ಸಾಮರ್ಥ್ಯದ ಗುರಿ ತಲುಪಿದ್ದೇವೆ. ಪ್ರಪಂಚದಲ್ಲಿ ಸಂಪೂರ್ಣ ವಾಗಿ ಸೌರಶಕ್ತಿ ಬಳಕೆ ಮಾಡುತ್ತಿರುವ ಮೊದಲ ವಿಮಾನ ನಿಲ್ದಾಣ(ಕೊಚ್ಚಿ ವಿಮಾನ ನಿಲ್ದಾಣ) ಭಾರತದಲ್ಲಿದೆ. ರೈಲ್ವೇಯೂ ಅದರತ್ತ ಕೆಲಸ ಮಾಡುತ್ತಿದೆ ಎಂದರು ಪ್ರಧಾನಿ. ಭಾರತವು ಶುದ್ಧ ಇಂಧನ ತಂತ್ರಜ್ಞಾನಗಳಿಗೆ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿದೆ’ ಎಂದಿದ್ದಾರೆ. ಭಾರತವು ವಿಶ್ವ ದಲ್ಲೇ ಅತೀ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ಹೂಡಿಕೆಗೆ ವಿಫ‌ುಲ ಅವಕಾಶಗಳಿವೆ ಎಂದಿದ್ದಾರೆ.

ಉಕ್ರೇನ್‌ ಬೆಂಬಲಕ್ಕೆ ಜಿ7: ರಷ್ಯಾದಿಂದ ದಾಳಿ ಎದುರಿಸುತ್ತಿರುವ ಉಕ್ರೇನ್‌ನ ಅಧ್ಯಕ್ಷ ಝೆಲೆನ್‌ಸ್ಕಿ ಜಿ7 ನಾಯಕರೊಂದಿಗೆ ವೀಡಿ ಯೋ ಕಾಲ್‌ ಮುಖಾಂತರ ಮಾತನಾಡಿದ್ದಾರೆ.

ಯುದ್ಧೋಪಕರಣಗಳ ಮತ್ತು ವಿಮಾನಗಳ ಸಹಾಯಹಸ್ತ ಬೇಕೆಂದು ಕೇಳಿದ್ದಾರೆ. ಯುದ್ಧ ಸಂಪೂರ್ಣವಾಗಿ ಮುಗಿಯು ವವರೆಗೂ ಉಕ್ರೇನ್‌ಗೆ ಆರ್ಥಿಕ, ಮಾನ ವೀಯ, ಸೇನಾ ಮತ್ತು ರಾಜತಾಂತ್ರಿಕ ಬೆಂಬಲ ನೀಡುವುದಾಗಿ ಜಿ7 ನಾಯಕರು ತಿಳಿಸಿದ್ದಾರೆ. ಹಾಗೆಯೇ ರಷ್ಯಾದ ಮೇಲೆ ಇನ್ನಷ್ಟು ನಿರ್ಬಂಧ ಹೇರಲಾಗುವುದು. ಉಕ್ರೇನ್‌ಗೆ 29.5 ಬಿಲಿ ಯನ್‌ ಡಾಲರ್‌ (231 ಕೋಟಿ ರೂ.) ಪರಿಹಾರ ನೀಡಲು ಸಿದ್ಧವಿರುವುದಾಗಿ ಜಿ7 ತಿಳಿಸಿದೆ.

Advertisement

ನಾಯಕರೊಂದಿಗೆ ಮಾತುಕತೆ: ಶೃಂಗಸಭೆಗೂ ಮೊದಲು ಪ್ರಧಾನಿಯವರು ಜರ್ಮನಿಯ ಚಾನ್ಸಲರ್‌ ಒಲಾಫ್ ಶೋಲ್ಜ್ ಜತೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಹಾಗೆಯೇ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೋಸಾ, ಇಂಡೋನೇಶಿಯಾ ಅಧ್ಯಕ್ಷ ಜೋಕೋ ವಿಡೋದೊ ಅವರೊಂದಿಗೂ ಸಭೆ ನಡೆಸಿದ್ದಾರೆ. ಫ್ರೆಂಚ್‌ ಅಧ್ಯಕ್ಷ ಇಮ್ಯಾನ್ಯುವಲ್‌ ಮ್ಯಾಕ್ರಾನ್‌ ಜತೆ ಚಹಾ ಸವಿಯುತ್ತಾ “ಚಾಯ್‌ ಪೇ ಚರ್ಚಾ’ ಕೂಡ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next