ಹೊಸದಿಲ್ಲಿ: ಮಾಜಿ ಪ್ರಧಾನಿ ರಾಜೀವ್ ರೀತಿ ಪ್ರಧಾನಿ ಮೋದಿ ಹತ್ಯೆಗೆ ನಕ್ಸಲರು ಸಂಚು ರೂಪಿಸಿದ್ದಾರೆ ಎಂಬುದು ಬಹಿರಂಗ ಆಗುತ್ತಿದ್ದಂತೆ ಹಠಾತ್ತಾಗಿ ರೋಡ್‌ಶೋಗಳನ್ನು ನಡೆಸದಂತೆ ಮೋದಿಗೆ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಸಲಹೆ ನೀಡಿದೆ. ಅಲ್ಲದೆ ಮೋದಿಗೆ ಭದ್ರತೆ ನೀಡುವ ಮತ್ತು ಮೋದಿ ಜತೆಗೆ ಸಾಗುವ ಎಸ್‌ಪಿಜಿ ಸಿಬಂದಿಯನ್ನೂ ಈ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸ ಲಾಗಿದೆ. ಕೆಲವೇ ಸೆಕೆಂಡು ಗಳಲ್ಲಿ ಉಗ್ರರನ್ನು ಸದೆ ಬಡಿಯುವ ಸಾಮರ್ಥ್ಯ ಈ ಶೂಟರ್‌ಗಳು ಹೊಂದಿರುತ್ತಾರೆ. ಎಸ್‌ಪಿಜಿ ಅಡಿಯಲ್ಲಿ ಕೌಂಟರ್ ಅಸಾಲ್ಟ್ ಟೀಮ್ ಕೂಡ ಇರುತ್ತದೆ. ಇದು ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿರುತ್ತದೆ. ಈ ತಂಡಕ್ಕೂ ಸಂಚಿನ ಬಗ್ಗೆ ವಿವರಿಸಲಾಗಿದೆ.
ಆರಂಭಿಕ ಹಂತದ ತನಿಖೆ
ಸದ್ಯ ನಕ್ಸಲರ ಪತ್ರದ ಕುರಿತ ತನಿಖೆ ಆರಂಭಿಕ ಹಂತದಲ್ಲಿದೆ. ಸಮಗ್ರ ವರದಿ ಯನ್ನು ಪೊಲೀಸರಿಂದ ಪಡೆಯುತ್ತಿದ್ದೇವೆ ಎಂದು ಗೃಹ ಸಚಿವಾಲಯದ ನಕ್ಸಲ್ ಕಾರ್ಯಾಚರಣೆ ವಿಭಾಗ ಹೇಳಿದೆ. ಈಗಾಗಲೇ ಪುಣೆ ಪೊಲೀಸರನ್ನು ಈ ವಿಭಾಗ ಸಂಪರ್ಕಿಸಿದೆ.
7 ರಾಜ್ಯಗಳ ಪೊಲೀಸರ ಸಭೆ: ನಕ್ಸಲ್ ಪೀಡಿತ 7 ಪ್ರಮುಖ ರಾಜ್ಯಗಳ ಪೊಲೀಸ್ ಮುಖಂಡರು ಸಭೆ ನಡೆಸಿದ್ದು, ನಕ್ಸಲ್ ಸಮಸ್ಯೆಯನ್ನು ನಿವಾರಿಸಲು ರಾಜ್ಯಗಳ ಪೊಲೀಸ್ ಪಡೆಯ ಮಧ್ಯೆ ಇನ್ನಷ್ಟು ಉತ್ತಮ ಸಂವಹನ ನಡೆಸುವ ವಿಧಾನಗಳ ಕುರಿತು ಚರ್ಚೆ ನಡೆಸಲಾಗಿದೆ. ಆಂಧ್ರ, ತೆಲಂಗಾಣ, ಛತ್ತೀಸ್‌ಗಡ, ಪ. ಬಂಗಾಲ, ಬಿಹಾರ, ಝಾರ್ಖಂಡ್ ಮತ್ತು ಒಡಿಶಾದ ಪೊಲೀಸ್ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
ಬ್ರಿಫ್ಕೇಸ್ ಸುರಕ್ಷೆ: ಸಾಮಾನ್ಯವಾಗಿ ಮೋದಿ ಸಾರ್ವಜನಿಕ ಸ್ಥಳಗಳಲ್ಲಿ ನಡೆದು ಹೋಗುವ ಸನ್ನಿವೇಶ ಎದುರಾದಾಗ ಅವರ ನಾಲ್ಕೂ ದಿಕ್ಕಿಗೆ ಸಾಗುವ ಎಸ್‌ಪಿಜಿ ಸಿಬಂದಿ, ತೆಳ್ಳನೆಯ ಬ್ರಿಫ್ಕೇಸ್ ಹಿಡಿದಿರುವುದನ್ನು ಗಮನಿಸಿರುತ್ತೇವೆ. ಮೂಲಗಳ ಪ್ರಕಾರ ಈ ಬ್ರಿಫ್ ಕೇಸ್ ಗುಂಡುನಿರೋಧಕ ಶೀಲ್ಡ್ ಆಗಿದ್ದು, ಇದನ್ನು ಬ್ರಿಫ್ಕೇಸ್ ರೀತಿ ಮಡಚಲಾಗಿರುತ್ತದೆ. ಯಾವುದೇ ರೀತಿಯ ಶಂಕೆ ಅಥವಾ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ, ಈ ಬ್ರಿಫ್ಕೇಸ್ ತೆರೆದು ಮೋದಿಯನ್ನು ಕವರ್ ಮಾಡಿದರೆ ಸಾಕು.
ಬೆಂಗಾವಲು ಪಡೆಗೂ ಕಟ್ಟೆಚ್ಚರದ ಸೂಚನೆ: ಮೋದಿ ಬೆಂಗಾವಲು ಪಡೆಯಲ್ಲಿ ಎರಡು ಶಸ್ತ್ರಸಜ್ಜಿತ ಬಿಎಂಡಬ್ಲೂ 7 ಸಿರೀಸ್‌ನ ಸೆಡಾನ್ ಕಾರುಗಳು, ಆರು ಬಿಎಂಡಬ್ಲೂ ಎಕ್ಸ್ 5 ಎಸ್‌ಯುವಿಗಳು ಮತ್ತು ಒಂದು ಮರ್ಸಿಡಿಸ್ ಬೆಂಜ್ ಆ್ಯಂಬುಲೆನ್ಸ್ ಇವೆ. ಇದಲ್ಲದೆ ಭದ್ರತಾ ಪಡೆಯ ವಾಹನಗಳು ಮತ್ತು ಜಾಮರ್‌ಗಳು ಇವೆ. ಜತೆಗೆ ಮೋದಿ ಇರುವ ಕಾರನ್ನೇ ಹೋಲುವ ಎರಡು ಖಾಲಿ ಕಾರುಗಳೂ ಇರುತ್ತವೆ. ಇದು ಮೋದಿ ಪ್ರಯಾಣಿಸುತ್ತಿರುವಾಗ ಮತ್ತು ವಾಹನದಿಂದ ಇಳಿಯುವಾಗ ದಾಳಿ ನಡೆಸುವವರನ್ನು ಕಣ್ತಪ್ಪಿಸುವ ತಂತ್ರ. ಜಾಮರ್ ವಾಹನಕ್ಕೆ ಹಲವು ಆಂಟೆನಾಗಳನ್ನು ಅಳವಡಿಸಲಾಗಿರುತ್ತದೆ. ಈ ಆಂಟೆನಾಗಳು ರಸ್ತೆಯಿಂದ ನೂರು ಮೀ.ಗಳ ವರೆಗಿನ ಸುತ್ತಳತೆಯಲ್ಲಿ ಬಾಂಬ್ ಕಂಡುಹಿಡಿಯುವ ಸಾಮರ್ಥ್ಯ ಹೊಂದಿರುತ್ತವೆ.
ಎಸ್‌ಪಿಜಿಗೆ ಭದ್ರತೆ ಟೆನ್ಶನ್!
ಈ ಹಿಂದೆ ಹಲವು ಸಲ ಎಸ್‌ಪಿಜಿ ಸಲಹೆಯನ್ನು ಮೋದಿ ಮೀರಿದ್ದರು. ಗಣ ರಾಜ್ಯೋ ತ್ಸವ ಪರೇಡ್ ಬಳಿಕ ಕಾರು ಏರುವ ಬದಲು ಜನರತ್ತ ನಡೆದು ಶುಭ ಕೋರಿದ್ದರು. ಒಮ್ಮೆ ಗೊಂದಲಗೊಂಡ ಎಸ್‌ಪಿಜಿ ಸಿಬಂದಿ ಸಾವರಿಸಿ, ಮೋದಿ ಜತೆಗೆ ಹೆಜ್ಜೆ ಹಾಕಿದ್ದರು. ಇಬ್ಬರು ಎಸ್‌ಪಿಜಿ ಸಿಬಂದಿ ಮೋದಿ ಜತೆಗೆ ಸಾಗಿದ್ದರು.