ವಿಧಾನಸಭೆ: ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವಿಚಾರದ ಬಗ್ಗೆ ಕಾಂಗ್ರೆಸ್‌ನ ಯು.ಟಿ.ಖಾದರ್ ಆಡಿದ ಮಾತು ಬುಧವಾರ ಸದನದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು.
ಪ್ರಧಾನಿ ಬಗ್ಗೆ ಮಾತನಾಡಿದ ಯು.ಟಿ.ಖಾದರ್ ಕ್ಷಮೆ ಕೇಳಬೇಕು, ಆ ಪದ ಕಡತದಿಂದ ತೆಗೆದು ಹಾಕಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರೆ, ಕ್ಷಮೆ ಕೇಳುವಂತ ಪದ ಖಾದರ್ ಅವರು ಬಳಸಿಲ್ಲ, ನರೇಂದ್ರಮೋದಿ ಅವರು ಪಾಕಿಸ್ತಾನಕ್ಕೆ ಹೋಗಿದ್ದ ವಿಷಯ ಸತ್ಯವಲ್ಲವೇ ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಗರಂ ಆಗಿ, ಪ್ರಧಾನಿ ಬಗ್ಗೆ ಮಾತನಾಡಿದ್ದು ಅಕ್ಷಮ್ಯ. ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ತಾಕೀತು ಮಾಡಿದರು. ಈ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆಯಿತು. ಒಂದು ಹಂತದಲ್ಲಿ ರೇಣುಕಾಚಾರ್ಯ ಸಹ ಖಾದರ್‌ರನ್ನು ಕುರಿತು ಆಕ್ಷೇಪಾರ್ಹ ಪದ ಆಡಿದರು. ಸಚಿವ ಈಶ್ವರಪ್ಪ, ಅಯೋಗ್ಯನ ಬಾಯಲ್ಲಿ ಅಯೋಗ್ಯ ಪದಗಳು ಬರುತ್ತವೆ ಎಂದು ಹೇಳಿದರು.
ಮತ್ತೂಬ್ಬ ಸಚಿವ ಸಿ.ಟಿ.ರವಿ, ದೇಶದ್ರೋಹಿಗಳಿಗೆ ಬೆಂಬಲ ವ್ಯಕ್ತಪಡಿಸುವವರ ಬಾಲ ಕಟ್ ಮಾಡುತ್ತೇವೆ. ನಾಯಿ ಬಾಲ ಎಷ್ಟಾದರೂ ಡೊಂಕೇ. ಹೀಗಾಗಿ, ಕಟ್ ಮಾಡುವುದೇ ಸೂಕ್ತ ಎಂದು ಹೇಳಿದರು. ಇದಕ್ಕೆ ರಮೇಶ್‌ಕುಮಾರ್, ಎಚ್.ಕೆ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು.
ಕೊನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸೂಚನೆ ಮೇರೆಗೆ ಯು.ಟಿ.ಖಾದರ್ ತಾವು ಆಡಿದ ಮಾತಿಗೆ ವಿಷಾದಿಸಿದರು. ರೇಣುಕಾಚಾರ್ಯ ಅವರು ಆಡಿದ ಮಾತುಗಳನ್ನು ಕಡತದಿಂದ ತೆಗೆಸಿದರು. ಈಶ್ವರಪ್ಪ ಆಡಿರುವ ಮಾತುಗಳ ಬಗ್ಗೆ ಪರಿಶೀಲಿಸುತ್ತೇನೆ ಎಂದು ಹೇಳಿದರು. ಸಿ.ಟಿ.ರವಿ ಅವರಿಗೆ ಸದನದಲ್ಲಿ ಭಾಷೆ ಉಪಯೋಗಿಸುವಾಗ ಎಚ್ಚರ ಇರಲಿ, ಸದನದ ಗೌರವ-ಘನತೆಗೆ ಧಕ್ಕೆ ಉಂಟಾಗುವ ಮಾತು ಬೇಡ ಎಂದು ಕಿವಿಮಾತು ಹೇಳಿದರು.