ಹೊಸದಿಲ್ಲಿ : ಭಾರತ ಭೇಟಿಯಲ್ಲಿರುವ ಕೆನಡ ಪ್ರಧಾನಿ ಜಸ್ಟಿನ್ ಟ್ರೂಡಿಯೋ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಉಭಯ ದೇಶಗಳು ಪರಸ್ಪರೊಳಗಿನ ವಾಣಿಜ್ಯ, ವ್ಯಾಪಾರ, ವಹಿವಾಟು ಮತ್ತು ದ್ವಿಪಕ್ಷೀಯ ಬಾಂಧವ್ಯ ಸೇರಿದಂತೆ ಆರು ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕಿದವು.
ಉಭಯ ದೇಶಗಳು ತಮ್ಮೊಳಗಿನ ಬಾಂಧವ್ಯ ಮಾತ್ರವಲ್ಲದೆ ವ್ಯಾಪಾರ ವಾಣಿಜ್ಯ, ಇಂಧನ ಸಹಿತ ಹಲವು ಕ್ಷೇತ್ರಗಳಲ್ಲಿ ಲಾಭದಾಯಕ ವಹಿವಾಟು ನಡೆಸುವ ಕುರಿತೂ ವಿಸ್ತೃತವಾಗಿ ಚರ್ಚಿಸಿದವು.
ಆ ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, “ನಿಮ್ಮ ಈ ಭೇಟಿಯನ್ನು ದೀರ್ಘ ಕಾಲದಿಂದ ನಿರೀಕ್ಷಿಸಲಾಗುತ್ತಿತ್ತು. ಇದೀಗ ನೀವು ಮತ್ತು ನಿಮ್ಮ ಕುಟುಂಬದವರು ಭಾರತ ಭೇಟಿ ಕೈಗೊಂಡಿರುವುದು ನಮಗೆ ಸಂತಸ ಉಂಟುಮಾಡಿದೆ’ ಎಂದು ಹೇಳಿದರು.
ಭಾರತ ಮತು ಕೆನಡ ದೇಶಗಳು ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಡುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು. ರಾಜಕೀಯ ಉದ್ದೇಶಕ್ಕಾಗಿ ಮತ-ಧರ್ಮವನ್ನು ದುರುಪಯೋಗಿಸುವದಕ್ಕೆ ಅವಕಾಶ ಇರಕೂಡದು ಎಂದು ಮೋದಿ ಹೇಳಿದರು.
ಕೆನಡ ದೇಶ ಭಾರತೀಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ತಾಣವಾಗಿದ್ದು 1.20 ಲಕ್ಷಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಕೆನಡದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ; ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ನಾವು ಪರಸ್ಪರ ತಿಳಿವಳಿಕೆ ಒಪ್ಪಂದವನ್ನು ನವೀಕರಿಸಿಕೊಂಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.