ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ “ನಿಷ್ಪ್ರಯೋಜಕ” ವ್ಯಕ್ತಿ ಎಂದು ವಾಗ್ದಾಳಿ ನಡೆಸಿರುವ ಪಾಕಿಸ್ತಾನ್ ಮುಸ್ಲಿಮ್ ಲೀಗ್ ನವಾಜ್(ಪಿಎಂಎಲ್-ಎನ್) ಪಕ್ಷದ ಉಪಾಧ್ಯಕ್ಷೆ ಮಾರ್ಯಂ ನವಾಜ್ ಷರೀಫ್, ಖಾನ್ ಗೆ ಪಾಕಿಸ್ತಾನದಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇಮ್ರಾನ್ ಖಾನ್ ಅನಗತ್ಯವಾಗಿ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದು, ಆಡಳಿತದಲ್ಲಿ ಅವರ ಪಾತ್ರ ನಿಷ್ಪ್ರಯೋಜಕವಾಗಿದೆ. ಅವರನ್ನು ಯಾರೊಬ್ಬರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮಾರ್ಯಂ ಜನರನ್ನು ಉದ್ದೇಶಿಸಿ ಮಾತನಾಡುತ್ತ ದೂಷಿಸಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.
ಕರಾಚಿ ಘಟನೆ ಬಗ್ಗೆ ಮಾತನಾಡಿದ ಅವರು, ನಾವಿದ್ದ ಕೋಣೆಯ ಬಾಗಿಲನ್ನು ಮುರಿದು ಹಾಕಿ ಪತಿಯನ್ನು ಬಂಧಿಸಿದ್ದರು. ಸಿಂಧ್ ಪ್ರಾಂತ್ಯದ ಐಜಿಪಿ(ಇನ್ಸ್ ಪೆಕ್ಟರ್ ಜನರ್ ಆಫ್ ಪೊಲೀಸ್)ಯನ್ನು ಅಪಹರಿಸಿದ್ದರು. ಇಷ್ಟಾದರೂ ಪ್ರಧಾನಿ ಖಾನ್ ಮಾತ್ರ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿದಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ:ರಾಜಸ್ಥಾನದ ಲೋಂಗೇವಾಲಾ ಗಡಿಯಲ್ಲಿ ಯೋಧರ ಜತೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ
ಇಮ್ರಾನ್ ಖಾನ್ ಏನನ್ನಾದರು ಹೇಳಲು ಯೋಗ್ಯರು ಎಂಬುದನ್ನು ಯಾರೂ ಭಾವಿಸುವುದಿಲ್ಲ. ಪ್ರಧಾನಿ ಕಾಣ್ ಅವರು ಬನಿ ಗಾಲಾ ಹೌಸ್ ನಲ್ಲಿ ಸುಖವಾಗಿ(ಘಟನೆ ನಡೆದ ದಿನ) ನಿದ್ರೆ ಮಾಡಿದ್ದರು. ಒಂದು ವೇಳೆ ನಾನೇನಾದರೂ ಹುದ್ದೆಯಲ್ಲಿದ್ದ ದಿನ ಇಂತಹ ಘಟನೆ ನಡೆದಿದ್ದರೆ ರಾಜೀನಾಮೆಯನ್ನು ಮುಖಕ್ಕೆ ಎಸೆದು ಬಿಡುತ್ತಿದ್ದೆ ಎಂದು ಮಾರ್ಯಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.