ಸುರಪುರ: ಪ್ರಧಾನಮಂತ್ರಿ ಸ್ವಯಂ ಉದ್ಯೋಗ ನಿಧಿ ಯೋಜನೆಯಡಿ ನೀಡಲಾಗುವ ಸಾಲ ಸೌಲಭ್ಯ ವಿತರಣೆಗೆ ಆಯಾ ಬ್ಯಾಂಕ್‌ಗಳ ವ್ಯವಸ್ಥಾಪಕರು ತಮಗೆ ನೀಡಿರುವ ಗುರಿಯನ್ನು ಮಾರ್ಚ್ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಭೀಮರಾವ ಪಂಚಾಳ ತಾಕೀತು ಮಾಡಿದರು.
ಇಲ್ಲಿಯ ತಾಪಂ ಕಚೇರಿಯಲ್ಲಿ ಬುಧವಾರ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಅಧ್ಯಕ್ಷತೆಯಲ್ಲಿ ತಾಲೂಕಿನ ರಾಷ್ಟ್ರೀಕೃತ ಬ್ಯಾಂಕ್ ವ್ಯವಸ್ಥಾಪಕರ ಸಭೆಯಲ್ಲಿ ಮಾತನಾಡಿದ ಅವರು, ಪಿಎಂ ಯೋಜನೆ ಗುರಿ ತಲುಪುವಲ್ಲಿ ಬಹುತೇಕ ವ್ಯವಸ್ಥಾಪಕರು ನಿರ್ಲಕ್ಷ ವಹಿಸಿದ್ದೀರಿ. ಇದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ತ್ವರಿತವಾಗಿ ಕೆಲಸ ಮಾಡಿ ಸಾಲ ವಿತರಣೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸುರಪುರ ವಲಯದಲ್ಲಿ 590 ಅರ್ಜಿಗಳ ಪೈಕಿ 83 ಜನರಿಗೆ ಕಕ್ಕೇರಾ 87 ಅರ್ಜಿಗಳ ಪೈಕಿ 68 ಜನರಿಗೆ ಕೆಂಭಾವಿ 147 ಅರ್ಜಿಗಳ ಪೈಕಿ 72 ಜನರಿಗೆ ಸಾಲ ವಿತರಿಸಲಾಗಿದೆ. ಈ ಶನಿವಾರ ರಜೆ ನೀಡುವುದಿಲ್ಲ. ಎಲ್ಲಾ ವಲಯಗಳ ವ್ಯವಸ್ಥಾಪಕರು ಅಂದು ಬಾಕಿ ಉಳಿದಿರುವ ಅರ್ಜಿ ಪರಿಶೀಲಿಸಿ ಸಾಲ ವಿತರಣೆ ಕಾರ್ಯ ಮುಗಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಇದಕ್ಕೂ ಮೊದಲು ಸಭೆ ಆರಂಭವಾಗುತ್ತಿದ್ದಂತೆ ಶೋಷಿತಪರ ಸಂಘನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಭ ದೊರೆ ತನ್ನ ಕಾರ್ಯಕರ್ತರೊಂದಿಗೆ
ಸಭೆಯ ಒಳಗಡೆ ನುಗ್ಗಲು ಯತ್ನಿಸಿದರು. ಒಳಗೆ ಬರಬೇಡಿ. ಸಭೆ ಮುಗಿದ ನಂತರ ಮಾಹಿತಿ ಕೇಳಿ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸಮಜಾಯಿಸಿದರು.
ಈ ವೇಳೆ ಮಾತಿನ ಚಕಮಕಿ ನಡೆಯಿತು. ಸಭೆ ಕೆಲಕಾಲ ಗೊಂದಲದ ಗೂಡಾಗಿ ಪರಿಣಿಮಿಸಿತು.
ತಾಪಂ ಇಒ ಅಮರೇಶ ಮಧ್ಯಪ್ರವೇಶಿಸಿ ಪರಸ್ಥಿತಿ ತಿಳಿಗೊಳಿಸಿದರು. ಮಾರ್ಚ್ ಮುಗಿತ್ತಾ ಬರುತ್ತಿದೆ. ಬಡವರಿಗೆ ಬೀದಿ ಬದಿಯ ವ್ಯಾಪಾರಿಗಳಿಗೆ ಯೋಜನೆಯಡಿ ಬ್ಯಾಂಕ್‌ನವರು ಸಾಲ ನೀಡುತ್ತಿಲ್ಲ. ಸಣ್ಣಪುಟ್ಟ ವ್ಯಾಪಾರಿಗಳು ಬ್ಯಾಂಕ್‌ಗೆ ಅಲೆದಾಡುತ್ತಿದ್ದಾರೆ. ಅಧಿ ಕಾರಿಗಳ ನಿರ್ಲಕ್ಷದಿಂದ ಸರಕಾರಿ ಯೋಜನೆಗಳು ಅರ್ಹರಿಗೆ ತಲುಪದೇ ಹಳ್ಳ ಹಿಡಿಯುತ್ತಿವೆ ಎಂದು ಆರೋಪಿಸಿದರು. ಕೂಡಲೇ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಸಾಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು. ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ ತೋರಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ಕರ್ತವ್ಯ ಲೋಪದಡಿ ಅಮಾನತು ಮಾಡುವಂತೆ ಜಿಲ್ಲಾಧಿಕಾರಿಗೆ ಆಗ್ರಹಿಸಿದರು.
ಕಕ್ಕೇರಾ, ಕೆಂಬಾವಿ, ಸುರಪುರ ರಂಗಮಪೇಟ ಸೇರಿದಂತೆ ತಾಲೂಕಿನ ಕೆನರಾ, ಎಸ್‌ಬಿಐ, ಇಂಡಿಯಾ, ಪಿಕೆಜಿಬಿ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳ ವ್ಯವಸ್ಥಾಪಕರು ಮತ್ತು ನಗರಸಭೆ ಪೌರಾಯುಕ್ತ ಪುರಸಭೆಗಳ ಮುಖ್ಯಾಧಿಕಾರಿಗಳು ಇದ್ದರು.