ಔರಂಗಾಬಾದ್: ಇನ್ನು ಮುಂದೆ ಅಲ್ಲಿ ಇಲ್ಲಿ ಹೋಗುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ನೇತೃತ್ವದ ಎನ್‌ಡಿಎಯಲ್ಲಿಯೇ ಇರುವುದಾಗಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದಾರೆ. ನಿತೀಶ್ ಅವರ ಭರವಸೆಯನ್ನು ಮೋದಿ ನಗುವಿನೊಂದಿಗೆ ಸ್ವೀಕರಿಸಿದರು.
ಬಿಹಾರದ ಔರಂಗಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಿತೀಶ್ ಕುಮಾರ್, “ನೀವು ಮೊದಲೇ ಬಂದಿದ್ದೀರಿ ಆದರೆ ನಾನು ಕಣ್ಮರೆಯಾಗಿದ್ದೆ, ಆದರೆ ನಾನು ಈಗ ನಿಮ್ಮೊಂದಿಗಿದ್ದೇನೆ, ನಾನು ಅಲ್ಲಿಗೆ ಹೋಗುವುದಿಲ್ಲ, ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ” ಎಂದರು.
ಮಹಾಘಟಬಂಧನ್ ಮೈತ್ರಿಯನ್ನು ತೊರೆದು ಜೆಡಿಯು ಮತ್ತೆ ಎನ್‌ಡಿಎಗೆ ಸೇರಿ, ಜನವರಿಯಲ್ಲಿ ನಿತೀಶ್ ಕುಮಾರ್ ಅವರು 2000 ರಿಂದ ಒಂಬತ್ತನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ತಿಂಗಳ ನಂತರ ಈ ಭರವಸೆ ನೀಡಿದ್ದಾರೆ.
ಜೆಡಿಯು ಮತ್ತು ಎನ್‌ಡಿಎ ಐದು ವರ್ಷಗಳ ಕಾಲ ಒಟ್ಟಿಗೆ ಇರದಿದ್ದರೂ ಪರಸ್ಪರ ಜತೆಯಾಗಿ ಸಾಕಷ್ಟು ಕೆಲಸಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ ಎಂದು ನಿತೀಶ್ ಹೇಳಿದರು.
34,800 ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲು ಪ್ರಧಾನಿ ಮೋದಿ ಬಿಹಾರ ಭೇಟಿಯ ಭಾಗವಾಗಿ ಔರಂಗಾಬಾದ್‌ನಲ್ಲಿ ಬೃಹತ್ ಸಭೆ ಆಯೋಜಿಸಲಾಗಿತ್ತು. ನಿತೀಶ್ ಕುಮಾರ್ ಎನ್‌ಡಿಎ ತೆಕ್ಕೆಗೆ ಮರಳಿದ ನಂತರ ಪ್ರಧಾನಿ ಮೋದಿಯವರು ಬಿಹಾರಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.