Advertisement

ಮಲ್ಯ ಎಸ್ಕೇಪ್‌ ವಿವಾದ : ಪರಾರಿಗೆ ಮೋದಿ ಕಾರಣ

01:59 PM Sep 15, 2018 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರೇ ಉದ್ಯಮಿ ವಿಜಯ ಮಲ್ಯ ಪರಾರಿಯಾಗಲು ಕಾರಣ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೇರವಾಗಿಯೇ ಶುಕ್ರವಾರ ಆರೋಪಿಸಿದ್ದಾರೆ. ವಿವಾದಿತ ಉದ್ಯಮಿ ವಿರುದ್ಧ ಹೊರಡಿಸಲಾಗಿದ್ದ ಲುಕ್‌ ಔಟ್ ನೋಟಿಸ್‌ನ ತೀವ್ರತೆ ತಗ್ಗಿಸಲು ಪ್ರಧಾನಿಯವರೇ ಸಿಬಿಐಗೆ ಸೂಚಿಸಿದ್ದರು ಎಂದು ಟ್ವೀಟ್‌ನಲ್ಲಿ ದೂರಿದ್ದಾರೆ. ಏಕೆಂದರೆ ಕೇಂದ್ರ ತನಿಖಾ ಸಂಸ್ಥೆ ನೇರವಾಗಿಯೇ ಅವರ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಅದು ಸಾಧ್ಯವಿದೆ ಎಂದು ಹೇಳಿದ್ದಾರೆ.

Advertisement

ಕೇಂದ್ರ ತನಿಖಾ ಸಂಸ್ಥೆ ಮಲ್ಯ ಅವರನ್ನು ‘ವಶಕ್ಕೆ ಪಡೆಯಬೇಕು’ ಎಂಬುದರ ಬದಲಾಗಿ ‘ವರದಿ ಮಾಡಿಕೊಳ್ಳಬೇಕು’ ಎಂದು ಲುಕೌಟ್‌ ನೋಟಿಸ್‌ನಲ್ಲಿ ಬದಲು ಮಾಡಿದ್ದನ್ನು ಈಗಾಗಲೇ ಒಪ್ಪಿಕೊಂಡಿದೆ. ಆದರೆ, 2015ರ ಡಿ.9, 10 ಮತ್ತು 11ರಂದು ಮಲ್ಯರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಅಲ್ಲದೆ, ಅವರು ತನಿಖೆಯಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದರು, ಅಲ್ಲದೆ ಅವರ ವಿರುದ್ಧ ವಾರಂಟ್‌ ಕೂಡ ಇರಲಿಲ್ಲ. ಹೀಗಾಗಿ ಅವರು ಪಲಾಯನ ಮಾಡಲಾರರು ಎಂಬ ವಿಶ್ವಾಸವಿತ್ತು ಎಂದು ಸಿಬಿಐ ಗುರುವಾರ ಸ್ಪಷ್ಟನೆ ನೀಡಿದೆ.

ತರಾಟೆಗೆ ತೆಗೆದುಕೊಳ್ಳಲಾಗಿತ್ತು: 9 ಸಾವಿರ ಕೋಟಿ ರೂ. ವಂಚನೆ ಆರೋಪಕ್ಕೆ ಗುರಿಯಾಗಿರುವ ಮಲ್ಯರನ್ನು ಹೇಗೆ ದೇಶಬಿಟ್ಟು ತೆರಳಲು ಅನುವು ಮಾಡಿಕೊಟ್ಟಿರಿ ಎಂದು ಸಿಬಿಐ ಮುಖ್ಯಸ್ಥರಾಗಿದ್ದ ಅನಿಲ್‌ ಸಿನ್ಹಾರನ್ನು ಬ್ಯಾಂಕ್‌ಗಳ ಮುಖ್ಯಸ್ಥರು ತರಾಟೆಗೆ ತೆಗೆದುಕೊಂಡಿದ್ದರು. 2016ರ ಮಾ.3 ರಂದು ಮುಂಬೈನ ಹೊಟೇಲ್‌ ಒಂದರಲ್ಲಿ ಬ್ಯಾಂಕ್‌ಗಳ ಮುಖ್ಯಸ್ಥರು ಮತ್ತು ಸಿಬಿಐ ನಿರ್ದೇಶಕರ ನಡುವೆ ಸಭೆ ನಿಗದಿಯಾಗಿತ್ತು. 2015ರ ಜುಲೈನಲ್ಲಿ ಉದ್ಯಮಿ ವಿರುದ್ಧ ಎಫ್ಐಆರ್‌ ದಾಖಲಾಗಿದ್ದರೂ, ದೇಶ ಬಿಟ್ಟು ತೆರಳಲು ಹೇಗೆ ಅನುವು ಮಾಡಿಕೊಟ್ಟಿರಿ ಎಂದು ಮುಖ್ಯಸ್ಥರು ಕೇಳಿದ್ದರು.

ಲೋಪವಾಗಿಲ್ಲ: ಸಾಲ ಬಾಕಿ ಇರಿಸಿಕೊಂಡಿರುವ ಮಲ್ಯ ದೇಶಬಿಟ್ಟು ತೆರಳದಂತೆ ಮಾಡಲು 2016ರ ಫೆಬ್ರವರಿಯಲ್ಲಿ ಎಸ್‌ಬಿಐಗೆ ಸೂಚಿಸಲಾಗಿತ್ತಾದರೂ, ಅದರಂತೆ ನಡೆದುಕೊಳ್ಳಲಿಲ್ಲ ಎಂಬ ಆರೋಪವನ್ನು ಬ್ಯಾಂಕ್‌ ತಿರಸ್ಕರಿಸಿದೆ. ಬ್ಯಾಂಕ್‌ಗೆ ಬರಬೇಕಾಗಿರುವ ಸಾಲದ ಮೊತ್ತ ವಸೂಲು ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಶುಕ್ರವಾರ ನೀಡಲಾಗಿರುವ ಹೇಳಿಕೆಯಲ್ಲಿ ಬ್ಯಾಂಕ್‌ ತಿಳಿಸಿದೆ. ಮಲ್ಯ 2016ರ ಮಾ.2ರಂದು ದೇಶ ಬಿಟ್ಟು ಪರಾರಿಯಾದ ನಾಲ್ಕು ದಿನಗಳ ಬಳಿಕ ಎಸ್‌ಬಿಐ ಮತ್ತು ಇತರ 13 ಬ್ಯಾಂಕ್‌ಗಳು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದವು. 

ಯುಪಿಎ ಅವಧಿಯ ಸಾಲದ ಬಗ್ಗೆ ತನಿಖೆ
ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ನೀಡಲಾಗಿದ್ದ ಸಾಲದ ವಿವರಗಳ ಬಗ್ಗೆ ತನಿಖೆ ನಡೆಸಲು ಸಿಬಿಐ ಮುಂದಾಗಿದೆ. ಅದಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆಗೆ ಅಧಿಕೃತವಾಗಿ ಮನವಿ ಸಲ್ಲಿಸಿ, ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡಿದೆ ಎಂದು ‘ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ. ಜತೆಗೆ ಕೆಲ ಅಧಿಕಾರಿಗಳ ವಿಚಾರಣೆಯನ್ನೂ ನಡೆಸಲಾಗಿದೆ. ವಿತ್ತ ಸಚಿವಾಲಯದಲ್ಲಿ ಬ್ಯಾಂಕಿಂಗ್‌ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದ ಅಮಿತಾಭ್‌ ವರ್ಮಾ ಅವರು ವಹಿಸಿದ್ದಾರೆ ಎಂದು ಹೇಳಲಾಗಿರುವ ಪಾತ್ರದ ಬಗ್ಗೆಯೂ ಸಿಬಿಐ ತನಿಖೆ ನಡೆಸಲಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.

Advertisement

ಹಠಾತ್‌ ಸಭೆ ನಡೆಸಿದ ಪ್ರಧಾನಿ ಮೋದಿ
ತೈಲೋತ್ಪನ್ನಗಳ ದರ ಏರಿಕೆ, ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುವಿಕೆ ಸೇರಿದಂತೆ ಅರ್ಥವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲು ಪ್ರಧಾನಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅದಕ್ಕೆ ಮುನ್ನಾ ದಿನವೇ ಶುಕ್ರವಾರ ಪ್ರಧಾನಿ ಮೋದಿ, ವಿತ್ತ ಸಚಿವ ಅರುಣ್‌ ಜೇಟ್ಲಿ ಸಭೆ ನಡೆಸಿದ್ದಾರೆ. ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಸೇರಿದಂತೆ ಪ್ರಮುಖರು ಅದರಲ್ಲಿ ಭಾಗವಹಿಸಿದ್ದರು.ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರಕಾರದ ಹಿರಿಯ ಅಧಿಕಾರಿ ‘ಶನಿವಾರ ನಡೆಯಲಿರುವ ಸಭೆಗೆ ಪೂರ್ವ ಭಾವಿ ಸಭೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next