ಅಹಮದಾಬಾದ್: “ನನ್ನನ್ನು ಎನ್‌ಕೌಂಟರ್ ಮೂಲಕ ಕೊಲ್ಲುವ ಯತ್ನ ಮಾಡಲಾಗುತ್ತಿದೆ. ದಶಕಗಳಷ್ಟು
ಹಳೆಯದಾಗಿರುವ ಕೇಸಿನಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ರಾಮಮಂದಿರ, ಗೋಹತ್ಯೆ, ರೈತರ ಆತ್ಮಹತ್ಯೆ ವಿಚಾರದಲ್ಲಿ ನನ್ನ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ’.
ಹೀಗೆಂದು ಕಣ್ಣೀರು ಹಾಕುತ್ತಾ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದು ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ. ಪ್ರಕರಣವೊಂದಕ್ಕೆ ಸಂಬಂಧಿಸಿ ರಾಜಸ್ಥಾನ ಪೊಲೀಸರು ಅವರ ವಿರುದ್ಧ ವಾರಂಟ್ ಹೊರಡಿಸಿ ಬಂಧಿಸಲೆಂದು ಸೋಮವಾರ ಶೋಧ ಕಾರ್ಯ ನಡೆಸುತ್ತಿದ್ದರು. ಅದೇ ಸಮಯದಲ್ಲಿ ತೊಗಾಡಿಯಾ ನಾಪತ್ತೆಯಾಗಿದ್ದರು. ರಾತ್ರಿ ವೇಳೆಗೆ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಅಹಮದಾಬಾದ್‌ನ ಶಾಹಿಭಾಗ್‌ನಲ್ಲಿ ಪತ್ತೆಯಾಗಿದ್ದರು.
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ತಮ್ಮನ್ನು ಎನ್‌ಕೌಂಟರ್ ಮೂಲಕ ಕೊಲ್ಲುವ ಪ್ರಯತ್ನ ಮಾಡಲಾ ಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಿದರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾವು ರಾಜಸ್ಥಾನದ ಕೋರ್ಟ್‌ಗೆ ಶರಣಾಗುವುದಾಗಿ ತಿಳಿಸಿದ್ದಾರೆ. “ಸೋಮವಾರ ಪೂಜೆ ಮುಗಿಸಿದ ಸಂದರ್ಭದಲ್ಲಿ ರಾಜಸ್ಥಾನ ಮತ್ತು ಗುಜರಾತ್ ಪೊಲೀಸರು ಜತೆಯಾಗಿ ನನ್ನನ್ನು ಕೊಲ್ಲಲು ಬರುತ್ತಿರುವ ಬಗ್ಗೆ ಸಂದೇಶ ಲಭಿಸಿತು. ಭದ್ರತಾ ಸಿಬ್ಬಂದಿಗೆ ತಿಳಿಸಿ ವಿಎಚ್‌ಪಿ ಕಾರ್ಯಕರ್ತನೊಬ್ಬನ ಜತೆ ಆಟೋದಲ್ಲಿ ತೆಲ್ಟೆàಜ್ ಎಂಬಲ್ಲಿಗೆ ಹೋದೆ. ರಾಜಸ್ಥಾನ ಮುಖ್ಯಮಂತ್ರಿ, ಗೃಹ ಸಚಿವರಿಗೆ ಫೋನ್ ಮಾಡಿ ವಿಚಾರ ತಿಳಿಸಿದಾಗ ಅಂಥ ಬೆಳವಣಿಗೆಯೇ ನಡೆದಿಲ್ಲ ಎಂದರು. ಹೀಗಾಗಿ ಸಂಶಯ ಬಂದು ಮೊಬೈಲ್ ಸ್ವಿಚ್ ಆಫ್ ಮಾಡಿದೆ’ ಎಂದರು.
ಜೈಪುರಕ್ಕೆ ಹೋಗಲು ಯತ್ನಿಸುತ್ತಿದ್ದಾಗ ಆಟೋದಲ್ಲಿಯೇ ನಿಶ್ಶಕ್ತಿ ಉಂಟಾಯಿತು. ಈ ಸಂದರ್ಭದಲ್ಲಿ ಚಾಲಕನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದೆ. ತಕ್ಷಣವೇ ಎಚ್ಚರ ತಪ್ಪಿತು. ಪ್ರಜ್ಞೆ ಬಂದಾಗ ತಾನು ಆಸ್ಪತ್ರೆಯಲ್ಲಿದ್ದೆ ಎಂದರು. ತಮ್ಮ ಧ್ವನಿ ಅಡಗಿಸಲು ಯತ್ನಿಸುತ್ತಿರುವವರ ವಿವರವನ್ನು ಸೂಕ್ತ ಸಮಯದಲ್ಲಿ ಬಹಿರಂಗ ಮಾಡುವುದಾಗಿಯೂ ಹೇಳಿದ್ದಾರೆ.