Advertisement

ಹಣ-ಅಧಿಕಾರಕ್ಕಿಂತ ಉತ್ಸವ-ಹಬ್ಬಗಳಿಂದ ಸಂತಸ; ರಾಜಯೋಗೀಂದ್ರ ಮಹಾಸ್ವಾಮಿ

04:17 PM Mar 30, 2023 | Team Udayavani |

ಹುಬ್ಬಳ್ಳಿ: ಮನುಷ್ಯನಿಗೆ ಹಣ, ಅಧಿಕಾರಕ್ಕಿಂತ ನಮ್ಮ ಸಂಸ್ಕೃತಿ ಸಾರುವ ಉತ್ಸವ-ಹಬ್ಬ-ಕ್ರೀಡೆಗಳು ಬಹಳ ಖುಷಿ-ಸಂತಸ ನೀಡುತ್ತವೆ ಎಂದು ಮೂರುಸಾವಿರ ಮಠದ ಜಗದ್ಗುರು ಡಾ|ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.

Advertisement

ಇಲ್ಲಿನ ಗೋಕುಲ ರಸ್ತೆಯ ಹೊಟೇಲ್‌ವೊಂದರಲ್ಲಿ ಹುಬ್ಬಳ್ಳಿ ಜಗ್ಗಲಗಿ ಹಬ್ಬ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಜಗ್ಗಲಗಿ ಹಬ್ಬ ಆಚರಿಸುವ ವಿಚಾರ ಮಹೇಶ ಟೆಂಗಿನಕಾಯಿ ಮನದಾಳದಲ್ಲಿ ಬಂದಿದ್ದು ವಿಶೇಷ. ಕಳೆದ 9 ವರ್ಷಗಳಿಂದ ಜಗ್ಗಲಗಿ ಹಬ್ಬ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿರುವ ಅವರು ನಗರಕ್ಕೆ ಐತಿಹಾಸಿಕ ಸಂದರ್ಭ ತಂದು ಕೊಟ್ಟಿದ್ದಾರೆ. ಇದು ಈಗಾಗಲೇ ಕನ್ನಡ ನಾಡಿನ ಗಮನ ಸೆಳೆದಿದ್ದು, ಮುಂದೆ ಇಡೀ ದೇಶದ ಗಮನ ಸೆಳೆಯಲಿದೆ. ಜಗ್ಗಲಗಿ ಹಬ್ಬ ವೈವಿಧ್ಯತೆಯ ಮೆರಗು ತರಲಿ. ಮುಂದಿನ ವರ್ಷ ಮಹೇಶ ಟೆಂಗಿನಕಾಯಿ ಶಾಸಕರಾಗಿ ಹಬ್ಬ ಆಚರಿಸುವಂತಾಗಲಿ ಎಂದು ಹಾರೈಸಿದರು.

ಉದ್ಯಮಿ ಎಚ್‌.ಎನ್‌. ನಂದಕುಮಾರ ಮಾತನಾಡಿ, ಸಂಸ್ಕೃತಿ ಉಳಿದುಕೊಂಡು ಹೋಗಬೇಕಾದರೆ ಅದರ ಸತ್ವ ಇರಬೇಕು. ಇಂದಿಗೂ ಭಾರತೀಯ ಸಂಸ್ಕೃತಿ ಉಳಿದಿದ್ದೆ ಹಬ್ಬಗಳ ಆಚರಣೆಯಿಂದ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಪ್ರಧಾನಿ ಮೋದಿ ಭಾರತೀಯ ಸಂಸ್ಕೃತಿಯ ಆರಾಧಕರಾಗಿದ್ದಾರೆ. ವಿಶ್ವದಲ್ಲಿ ಭಾರತೀಯತೆ ಹಾಗೂ ಸಂಸ್ಕೃತಿಯನ್ನು ಅತ್ಯುನ್ನತ ಮಟ್ಟಕ್ಕೆ ಪ್ರಧಾನಿ ಮೋದಿ ತೆಗೆದುಕೊಂಡು ಹೋಗಿದ್ದಾರೆ.

ಜಗ್ಗಲಗಿ ಹಬ್ಬ ಭಾರತೀಯ ಪರಂಪರೆ, ಸಂಸ್ಕೃತಿಯ ಪ್ರತೀಕ. ಇದನ್ನು ಆಯೋಜಕ ಮಹೇಶ ಟೆಂಗಿನಕಾಯಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ಹಬ್ಬ ವರ್ಷದಿಂದ ವರ್ಷಕ್ಕೆ ವೈಭವದಿಂದ ನಡೆಯುತ್ತಿದೆ. ಹಬ್ಬ, ಉತ್ಸವಗಳು ಸಂಸ್ಕೃತಿಯೊಂದಿಗೆ ಜೋಡಿಸುವುದಾಗಿದೆ ಎಂದರು.

ಲೆಕ್ಕ ಪರಿಶೋಧಕ ಡಾ|ಎನ್‌.ಎ. ಚರಂತಿಮಠ ಮಾತನಾಡಿ, ಹಬ್ಬ, ಉತ್ಸವಗಳ ಸಂಯೋಜನೆ ಹೆಚ್ಚಾಗಬೇಕು. ಆಗ ನಾವೆಲ್ಲ ಸ್ನೇಹಜೀವಿಗಳಾಗಲು, ವಸುದೇವ ಕುಟುಂಬಕಂ ರೀತಿ ಬಾಳಲು ಸಾಧ್ಯ. ಎಲ್ಲರೂ ಒಂದುಗೂಡಿ ಸಾಗಿದಾಗ ಮಾತ್ರ ನಮ್ಮ ಆಲೋಚನೆಗಳು ಸಾಕಾರಗೊಳ್ಳುತ್ತವೆ ಎಂದರು.

Advertisement

ಹುಬ್ಬಳ್ಳಿ ಜಗ್ಗಲಗಿ ಹಬ್ಬ ಆಯೋಜಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಹಬ್ಬಗಳ ಆಚರಣೆ ನಶಿಸುತ್ತಲಿವೆ. ಮುಂದಿನ ಪೀಳಿಗೆಗೆ ಉಳಿಸಿ ಪರಿಚಯಿಸುವ ಸಲುವಾಗಿ ಪಕ್ಷಾತೀತವಾಗಿ ಜಗ್ಗಲಗಿ ಹಬ್ಬ ಆಚರಿಸಲಾಗುತ್ತಿದೆ. ಪ್ರತಿವರ್ಷ ಎಲ್ಲ ಸಮಾಜದವರು ತನು, ಮನ, ಧನದಿಂದ ಸಹಾಯ- ಸಹಕಾರ ಮಾಡುತ್ತ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿವರ್ಷ 40ಕ್ಕೂ ಹೆಚ್ಚು ಕಲಾ ತಂಡದವರು ಯಾವುದೇ ಅಪೇಕ್ಷೆ ಇಲ್ಲದೆ ಭಾಗವಹಿಸುತ್ತಿದ್ದಾರೆ. ಹೀಗಾಗಿ ಹಬ್ಬಕ್ಕೆ ವರ್ಷದಿಂದ ವರ್ಷಕ್ಕೆ ಹೊಸ ಮೆರಗು-ಸೊಬಗು ಬರುತ್ತಿದೆ ಎಂದರು.

ಶ್ರೀಗಳು ಜಗ್ಗಲಗಿ ಹಬ್ಬದಲ್ಲಿ ಪಾಲ್ಗೊಂಡಿದ್ದ ವಿವಿಧ ತಂಡಗಳ ಕಲಾವಿದರನ್ನು ಸನ್ಮಾನಿಸಿದರು. ಮಾಜಿ ಶಾಸಕ ಅಶೋಕ ಕಾಟವೆ, ಬಿಜೆಪಿ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ, ಮಹೇಂದ್ರ ಸಿಂಘಿ, ರಮೇಶ ಪಾಟೀಲ, ದತ್ತಮೂರ್ತಿ ಕುಲಕರ್ಣಿ, ಶಿವಾನಂದ ಮುತ್ತಣ್ಣವರ, ವೀರೇಶ ಸಂಗಳದ ಮೊದಲಾದವರಿದ್ದರು. ಸತೀಶ ಶೇಜವಾಡಕರ ಪ್ರಾಸ್ತಾವಿಕ ಮಾತನಾಡಿದರು. ಜಗದೀಶ ಬುಳ್ಳಾನವರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next