ಬೆಂಗಳೂರು: 17ನೇ ಸೀಸನ್ ನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಯಲ್ ಆಗಿ ಆಡುವುದನ್ನೇ ಮರೆತಿದೆ. ಸೋಮವಾರ ರಾತ್ರಿ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಸೋಲನುಭವಿಸಿದೆ. ಆಡಿದ ಏಳು ಪಂದ್ಯಗಳಲ್ಲಿ ಆರನ್ನು ಸೋತಿರುವ ಫಾಫ್ ಪಡೆಯು ನಿರ್ಗಮನದ ಬಾಗಿಲಲ್ಲಿ ಬಂದು ನಿಂತಿದೆ.
ಟ್ರಾವಿಸ್ ಹೆಡ್ ಶತಕ, ಕ್ಲಾಸನ್ ಅಬ್ಬರದ ಬ್ಯಾಟಿಂಗ್ ನಿಂದ ಹೈದರಾಬಾದ್ ತಂಡವು ದಾಖಲೆಯ ಮೊತ್ತ ಕಲೆ ಹಾಕಿತ್ತು. ಕೇವಲ ಮೂರು ವಿಕೆಟ್ ನಷ್ಟಕ್ಕೆ ಹೈದರಾಬಾದ್ 287 ರನ್ ಪೇರಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ರನ್. ಹಿಗ್ಗಾಮುಗ್ಗಾ ದಂಡಿಸಿಕೊಂಡ ಆರ್ ಸಿಬಿ ಬೌಲರ್ಸ್ ಮತ್ತೆ ಹಳೆಯ ಚಾಳಿ ಮುಂದುವರಿಸಿದರು.
ನಾಯಕ ಫಾಫ್ ಪ್ಲೆಸಿಸ್ ಮತ್ತು ಕೀಪರ್ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಅಬ್ಬರದಿಂದ ಆರ್ ಸಿಬಿಯು ಉತ್ತಮ ರನ್ ಕಲೆಹಾಕಿತು. ಆದರೆ ಕೊನೆಗೆ 25 ರನ್ ಅಂತರದಿಂದ ಸೋಲು ಕಂಡಿತು.
ಆರ್ ಸಿಬಿ ಪ್ರದರ್ಶನದಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಖ್ಯಾತ ಟೆನ್ನಿಸ್ ತಾರೆ ಮಹೇಶ್ ಭೂಪತಿ ಅವರು ತಮ್ಮ ಕೋಪ ತೋಡಿಕೊಂಡಿದ್ದು, ಆರ್ ಸಿಬಿ ತಂಡವನ್ನು ಬೇರೆ ಮಾಲೀಕರಿಗೆ ಮಾರಾಟ ಮಾಡಿ ಎಂದಿದ್ದಾರೆ.
“ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರರ ಸಲುವಾಗಿ ಬಿಸಿಸಿಐ ಇತರ ತಂಡಗಳು ಮಾಡಿದ ರೀತಿಯಲ್ಲಿ ಕ್ರೀಡಾ ಫ್ರಾಂಚೈಸ್ ಅನ್ನು ನಿರ್ಮಿಸಲು ಕಾಳಜಿ ವಹಿಸುವ ಹೊಸ ಮಾಲೀಕರಿಗೆ ಆರ್ ಸಿಬಿಯನ್ನು ಮಾರಾಟ ಮಾಡಬೇಕಾದ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ” ಎಂದು ಭೂಪತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ‘ದುರಂತ” ಎಂದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ.
ಈ ಬಾರಿಯ ವನಿತಾ ಪ್ರೀಮಿಯರ್ ಲೀಗ್ ನಲ್ಲಿ ಆರ್ ಸಿಬಿ ತಂಡ ಗೆಲುವು ಸಾಧಿಸಿದ ಬಳಿಕ ಪುರುಷರ ತಂಡದ ಮೇಲೆ ನಿರೀಕ್ಷೆ ಹೆಚ್ಚಿತ್ತು. ಆದರೆ ಪುರುಷರ ತಂಡವು ನಿರಾಶಾದಾಯಕ ಪ್ರದರ್ಶನ ನೀಡುತ್ತಿದೆ.