ರಾಮಾಯಣದಲ್ಲಿ ಸೀತೆಯನ್ನು ಕಾಪಾಡಲು ಬೆಟ್ಟ ಹಾರಿ ಹನುಮಂತ ಶ್ರೀರಾಮನ ಸಂದೇಶ ನೀಡಿ ಧೈರ್ಯವಾಗಿರುವಂತೆ ಹೇಳಿದ. ಆದರೆ ಇಲ್ಲಿ ಪರಿಸ್ಥಿತಿ ತುಂಬ ಭಿನ್ನ. ಇಲ್ಲಿನ ದೃಶ್ಯ ನೋಡಿದರೆ ನಿಮ್ಮ ಕಂಗಳಲಿ ನೀರು ಬರದೆ ಇರದು. ಮುನಿದುಕೊಂಡ ತುಂಗಭದ್ರೆಯ ರುದ್ರ ನರ್ತನಕ್ಕೆ ನಲುಗಿ ಹೋಗಿದ್ದೇವೆ. ಅಸಹಾಯಕರಾಗಿದ್ದೇವೆ. ನಮ್ಮ ಪರಿಸ್ಥಿತಿಯನ್ನು ತೋರಿಸಲು ಪಾಪಾ.. ಆ ರಾಚಯ್ಯನೇ ಬರಬೇಕಾಯಿತು. ನಮಗೀಗ ರಾಮನಾಮ ಜಪ ಮಾಡದೆ ಬೇರೆ ವಿಧಿಯಲ್ಲ.
Advertisement
ಹೌದು, ಇಂಥ ಪರಿಸ್ಥಿತಿ ವಿಶ್ವಪ್ರಸಿದ್ಧ ಹಂಪಿ ನದಿ ಪಾತ್ರದಲ್ಲಿ ಕಳೆದೆರಡು ದಿನಗಳಿಂದ ಕಂಡು ಬರುತ್ತಿದೆ. ಈ ಕುರಿತು ನಮ್ಮ ಅಹವಾಲು ಹೇಳಿಕೊಳ್ಳಲೇಬೇಕಾಗಿದೆ. ನಾಳೆಯ ಉಳುವೆಗೆ ನಾವು ಅನಾಥರಾಗದೇ ಜೀವಿಸಬೇಕಿದೆ. ಅಂಗೈ ಅಗಲ ತುಂಬ, ತನ್ನ ಕಬಂಧ ಬಾಹುಗಳು ಮೈಕೊರೆಯುವ ಚಳಿಗೆ ಸೋತು ಹೋಗುತ್ತಿವೆ. ಮೈಮರೆತರೆ ಮಡಿಲಿನಲ್ಲಿ ಮುಂಜಾನೆಯ ಕನಸು ಕಾಣುತ್ತಿರುವ ಹಸುಗೂಸುಗಳು ನೆಮ್ಮದಿಯ ನಿದ್ರೆಗೆ ಜಾರುವುದಿಲ್ಲ. ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವ ಸ್ನೇಹಿತ, ಆತ್ಮೀಯ ಎಲ್ಲರೂ ಒಬ್ಬರಿಗೊಬ್ಬರು ಧೈರ್ಯ ತಂದುಕೊಡುತ್ತಿದ್ದೇವೆ. ಯಾಕೋ ಏನೋ ಈ ಬಾರಿ ತುಂಗಭದ್ರೆ ತುಸು ಹೆಚ್ಚೇ ಮುನಿಸಿಕೊಂಡಿದ್ದಾಳೆ.
Related Articles
Advertisement
ಎತ್ತಲೂ ಹೋಗದ ಪರಿಸ್ಥಿತಿ. ತಿನ್ನಲು ನಮಗೇನೂ ಸಿಗುತ್ತಿಲ್ಲ. ಮಾರುದ್ದ ಈಜಾಡಲು ನಮಗಾಗುವುದಿಲ್ಲ. ಅಲ್ಲಿಯ ಬೋರ್ಗರತೆ ದನಿ ಕೇಳಿಯೇ ಭಯಗೊಂಡಿದ್ದೇವೆ. ಕಳೆದೊಂದು ದಶಕದಿಂದೇಚೆಗೆ ಇಂಥ ಪರಿಸ್ಥಿತಿಯಿದ್ದರೂ ನಮ್ಮನ್ನು ಚಿತ್ರಿಸುವವರು ಕಡಿಮೆಯಿದ್ದರು. ಆದರೆ ಇಂದು ನಮ್ಮವರನ್ನು ನಮಗೆ ತಿಳಿಯದಂತೆ ಸೆರೆ ಹಿಡಿದಿದ್ದಾರೆ.
ಇಂದು ಸಂಜೆಯ ಹೊತ್ತಿಗೆ ಬದುಕಿನ ಭರವಸೆ ಕ್ಷೀಣಿಸುತ್ತಿದೆ. ಒಬ್ಬರಿಗೊಬ್ಬರು ಧೈರ್ಯ ತಂದುಕೊಳ್ಳುತ್ತಿದ್ದೇವೆ. ಆತ್ಮಸ್ಥೈರ್ಯ ಕುಸಿಯುತ್ತಿದೆ. ಆದರೆ ಸೋಲು ಒಪ್ಪಿಕೊಳ್ಳುತ್ತಿಲ್ಲ. ಇನ್ನೇನು ಮಾಡೋದು? ನಾಳೆಯ ಒಂದೊಳ್ಳೆ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಸಾಧ್ಯವಾದರೆ ನಮ್ಮನ್ನು ಕಾಪಾಡಿ. ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಿ ಬಿಡಿ. ನಾವು ಬದುಕಬೇಕಿದೆ. ಬದುಕಲು ಅವಕಾಶ ಮಾಡಿಕೊಡಿ! ನಮಗೂ ಬದುಕುವ ಹಕ್ಕಿದೆ. ಹೀಗೆಂದು ನಮಗೆ ಕೇಳಲೂ ಹಕ್ಕಿಲ್ಲವೇ? ಹೌದು ನಾವು ಮೂಕರು. ಆದರೆ ಮನಸು…. ಮೂಕಲ್ಲ. ಸಹಾಯ ಮಾಡಿ.