Advertisement

ದಯವಿಟ್ಟು ಪರಿಗಣಿಸಿ

01:05 PM Oct 27, 2017 | |

ಒಂದು ಕಾಲದಲ್ಲಿ ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಹೆಚ್ಚಾಗಿ ಚರ್ಚೆಯಾಗುತ್ತಿದ್ದ ವಿಷಯಗಳೆಂದರೆ, ಅದು ಪೈರಸಿ ಹಾಗೂ
ಪರಭಾಷಾ ಚಿತ್ರಗಳ ಹಾವಳಿ. ಅದರಲ್ಲೂ ಹಾಡುಗಳ ಬಿಡುಗಡೆ ಸಮಾರಂಭ ಬಂದರಂತೂ ಅಲ್ಲಿ ಪೈರಸಿ ಎನ್ನುವ ಪದ ಬಳಸದೆ ಮುಗಿಯುತ್ತಲೇ ಇರಲಿಲ್ಲ. ಈಗ ಕನ್ನಡ ಚಿತ್ರರಂಗದ ಸಮಸ್ಯೆಗಳಲ್ಲೇ ಅತ್ಯಂತ ಚರ್ಚೆಯಾಗುತ್ತಿರುವುದೆಂದರೆ ಅದು ಮಲ್ಟಿಪ್ಲೆಕ್ಸ್‌ ಸಮಸ್ಯೆ ಎಂದರೆ ತಪ್ಪಿಲ್ಲ.

Advertisement

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಪ್ರಾಮುಖ್ಯತೆ ಕಡಿಮೆ, ಪ್ರಮೋಷನ್‌ಗೆ ಅವಕಾಶವಿಲ್ಲ, ದರ ವಿಪರೀತ ಜಾಸ್ತಿ … ಹೀಗೆ ಹಲವು ದೂರುಗಳು ಕೇಳಿ ಬರುತ್ತಲೇ ಇವೆ. ಬಹುಶಃ ಮಲ್ಟಿಪ್ಲೆಕ್ಸ್‌ ಬಗ್ಗೆ ಚಿತ್ರರಂಗದವರು ಖುಷಿಯಾಗಿರುವುದು ಒಂದೇ ವಿಚಾರದಲ್ಲಿ. ಅದು
ಶೇಖಡಾವಾರು ಹಂಚಿಕೆಯ ವಿಷಯ. ಬೇರೆ ಚಿತ್ರಮಂದಿರಗಳಂತೆ ಮಲ್ಟಿಪ್ಲೆಕ್ಸ್‌ ಗಳಿಗೆ ಬಾಡಿಗೆ ಕಟ್ಟುವಷ್ಟು ಇಲ್ಲ. ಚಿತ್ರ ಪ್ರದರ್ಶನದಿಂದ ಏನು ಬರುತ್ತದೋ, ಅದರಲ್ಲಿ ಶೇಖಡಾವಾರು ಹಂಚಿಕೊಳ್ಳಬಹುದು. ಕಡಿಮೆ ದುಡ್ಡು ಬಂದರೂ, ಅದರಲ್ಲಿ ನಿರ್ಮಾಪಕರಿಗೆ ಒಂದು ಪಾಲು ಇರುತ್ತದೆ ಎಂಬ ಕಾರಣವೊಂದು ಬಿಟ್ಟರೆ, ಮಿಕ್ಕಂತೆ ಮಲ್ಟಿಪ್ಲೆಕ್ಸ್‌ಗಳಿಂದ ಸಮಸ್ಯೆಗಳೇ ಹೆಚ್ಚು ಎಂಬ ನಂಬಿಕೆ ಚಿತ್ರರಂಗದ ವಲಯದಲ್ಲಿ ಇದೆ. 

ಪ್ರಮುಖವಾಗಿ ಕನ್ನಡ ಚಿತ್ರಗಳಿಗೆ ಪ್ರೈಮ್‌ಟೈಮ್‌ನಲ್ಲಿ ಪ್ರದರ್ಶನ ಮಾಡುವ ಅವಕಾಶ ಸಿಗುತ್ತಿಲ್ಲ ಎಂಬ ದೊಡ್ಡ ಕೂಗು ಚಿತ್ರರಂಗದಿಂದ ಕೇಳಿ ಬಂದಿತ್ತು. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು, ಸರಕಾರಕ್ಕೆ ಮನವಿಯನ್ನೂ ಸಲ್ಲಿಸಿತ್ತು.  ಈ ಮನವಿಯನ್ನು ಪುರಸ್ಕರಿಸಿದ ಸರ್ಕಾರವು, ಪ್ರತಿ ಮಲ್ಟಿಪ್ಲೆಕ್ಸ್‌ ನಲ್ಲೂ ಕನ್ನಡ ಚಿತ್ರವನ್ನು ಪ್ರೈಮ್‌ಟೈಮ್‌ನಲ್ಲಿ ಕಡ್ಡಾಯವಾಗಿ ಪ್ರದರ್ಶಿಸಲೇಬೇಕು ಎಂಬ ಆದೇಶ ಹೊರಡಿಸಿತ್ತು. 

ಈ ಆದೇಶದ ನಂತರ ಕನ್ನಡ ಚಿತ್ರರಂಗದ ಪರಿಸ್ಥಿತಿ ಬದಲಾಗಬಹುದು, ಕನ್ನಡ ಚಿತ್ರಗಳಿಗೆ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರೈಮ್‌ ಟೈಮ್‌ನಲ್ಲಿ (ಅಂದರೆ ಮಧ್ಯಾಹ್ನದಿಂದ ಸಂಜೆಯವರೆಗೂ) ಚಿತ್ರ ಪ್ರದರ್ಶಿಸುವ ಅವಕಾಶ ಸಿಗುತ್ತದೆ ಎಂಬ ನಂಬಿಕೆ ಸುಳ್ಳಾಗಿದೆ.
ಪ್ರಮುಖವಾಗಿ ಕನ್ನಡ ಚಿತ್ರಗಳ ಪ್ರದರ್ಶನದ ಸಮಯವೇ ಸರಿ ಇಲ್ಲ ಎಂಬುದು ಹಲವರು ಆರೋಪ. ಸಿಂಗಲ್‌ ಚಿತ್ರಮಂದಿರಗಳ ನಾಲ್ಕು ಶೋಗಳಿಗೂ ನಿರ್ಧಿಷ್ಟ ಸಮಯವಿದೆ. ಆದರೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ನಿರ್ಧಿಷ್ಟವಾದ ಸಮಯವಿಲ್ಲ. ಎರಡೂವರೆ, ಮೂರೂವರೆ ಹೀಗೆ ಎಷ್ಟೆಷ್ಟು ಹೊತ್ತಿಗೋ ಪ್ರದರ್ಶನ ವ್ಯವಸ್ಥೆ ಮಾಡಲಾಗುತ್ತಿದೆ. ಎಷ್ಟೋ ಬಾರಿ ಪ್ರದರ್ಶನದ ಸಮಯವೇ ಪ್ರೇಕ್ಷಕರಿಗೆ ಗೊತ್ತಿರುವುದಿಲ್ಲ. ಇನ್ನು, ಮುಖ್ಯವಾದ ಸಮಯವನ್ನೆಲ್ಲಾ ಪರಭಾಷಾ ಚಿತ್ರಗಳಿಗೆ ಕೊಟ್ಟು, ಕನ್ನಡ ಚಿತ್ರಗಳಿಗೆ ಬೇಡದ ಸಮಯವನ್ನು ಕೊಡಲಾಗುತ್ತದೆ ಎಂಬ ಆರೋಪವಿದೆ. ಪ್ರೇಕ್ಷಕರಿಗೆ ಊಟ ಮಾಡಿ ಬರಬೇಕೋ ಅಥವಾ ಸಿನಿಮಾ ನೋಡಿ ಊಟ ಮಾಡಬೇಕೋ ಎನ್ನುವಂತಹ ಗೊಂದಲಗಳಿಂದ ಮಲ್ಟಿಪ್ಲೆಕ್ಸ್‌ಗಳಿಗೆ ಜನ ಹೋಗುವುದಕ್ಕೆ ಯೋಚಿಸುವಂತಾಗಿದೆ ಎಂಬ ಮಾತಿದೆ. ಇನ್ನು ಜನ ಕಡಿಮೆ ಆದಾಗ, ಪ್ರೇಕ್ಷಕರ ಕೊರತೆಯ ನೆಪ ಹೇಳಿ ಪ್ರದರ್ಶನವನ್ನು ರದ್ದು ಮಾಡುವ ಅಥವಾ ಯಾವ್ಯಾವುದೋ ಸಮಯದಲ್ಲಿ ಪ್ರದರ್ಶನ ಏರ್ಪಡಿಸುವುದೂ ಇದೆ.

ಅದರಿಂದ ಕನ್ನಡ ಚಿತ್ರಗಳಿಗೆ ದೊಡ್ಡ ಮಟ್ಟದಲ್ಲಿ ಪೆಟ್ಟು ಬೀಳುತ್ತಿದೆ. ಒಂದು ಕಡೆ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಕಡಿಮೆಯಾಗಿ, ಇನ್ನೊಂದು ಕಡೆ ಮಲ್ಟಿಪ್ಲೆಕ್ಸ್‌ಗಳಲ್ಲೂ ಪ್ರದರ್ಶನ ವಂಚಿತರಾಗುತ್ತಿರುವುದರಿಂದ ಹಲವು ನಿರ್ಮಾಪಕರು, ನಿರ್ದೇಶಕರು ಒದ್ದಾಡುವಂತಾಗಿದೆ. ಇದಕ್ಕೆ ಉದಾಹರಣೆ, ಇತ್ತೀಚೆಗೆ ಬಿಡುಗಡೆಯಾದ “ದಯವಿಟ್ಟು ಗಮನಿಸಿ’ ಚಿತ್ರದ ಸಮಸ್ಯೆಯೂ 
ಇದೇ ಆಗಿದೆ. ಈ ಚಿತ್ರದ ಬಗ್ಗೆ ಒಳ್ಳೆಯ ಮೆಚ್ಚುಗೆ ಸಿಕ್ಕರೂ, ಸರಿಯಾದ ವೇಳೆಗೆ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಟ್ಟಿಲ್ಲ ಎಂಬುದು ದೊಡ್ಡ ಆರೋಪ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ ಎಂಬ ಸುದ್ದಿ ಬಿಟ್ಟರೆ, ಅಲ್ಲಿಗೆ ಸಿನಿಮಾ ನೋಡಲು ಹೋಗುವ ಪ್ರೇಕ್ಷಕರಿಗೆ ನಿರಾಸೆ. ಕಾರಣ, ನಿಗದಿತ ಸಮಯಕ್ಕೆ ಈ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಟ್ಟಿಲ್ಲ. ಕೊಟ್ಟರೂ, ಅದು ರಾತ್ರಿ ವೇಳೆ. ಸಿನಿಮಾ ನೋಡಲು ಹೋಗುವ ಮಂದಿ, ವೀಕ್ಷಿಸಿ ಹೊರಬರುವ ಹೊತ್ತಿಗೆ ಮಧ್ಯೆರಾತ್ರಿಯಾಗಿರುತ್ತೆ. ಕುಟುಂಬ ಸಮೇತ ಹೋಗುವವರಿಗೆ ಅದು ಸರಿಯಾದ ಸಮಯವಲ್ಲ ಎಂಬುದು ಚಿತ್ರತಂಡದ ಆರೋಪ. “ದೂರದ ಅಮೇರಿಕಾ. ಸಿಂಗಾಪುರ್‌, ಗಲ್ಫ್ ರಾಷ್ಟ್ರಗಳಲ್ಲಿ ಮುಂಗಡ ಬುಕ್ಕಿಂಗ್‌ ಆಗುತ್ತಿರುವ ಸಂದರ್ಭದಲ್ಲಿ, ಇಲ್ಲೇಕೆ ಒಳ್ಳೆಯ ಚಿತ್ರಕ್ಕೆ ವೇಳೆಗನುಸಾರ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡುತ್ತಿಲ್ಲ. ಈ ಪ್ರಶ್ನೆ ಇಟ್ಟುಕೊಂಡು ಮಲ್ಟಿಪ್ಲೆಕ್ಸ್‌ ಬಳಿ ಹೋದರೆ, ಸಿಗುವ ಉತ್ತರ, ಥಿಯೇಟರ್‌ನಲ್ಲಿ μಲ್ಲಿಂಗ್‌ ಇಲ್ಲ ಎಂದು. ಯಾವುದೋ ಸಮಯಕ್ಕೆ ಪ್ರದರ್ಶನ ವ್ಯವಸ್ಥೆಗೆ ಅವಕಾಶ ಕೊಟ್ಟರೆ, ಜನರ ಬರೋದಾದರೂ ಹೇಗೆ? ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುವುದಿಲ್ಲ ಎಂಬ ಮಾತುಗಳ ನಡುವೆ, ಇಂತಹ ಪ್ರಯತ್ನಗಳು ನಡೆದರೆ, ಅವುಗಳಿಗೆ ಸರಿಯಾದ ಪ್ರೋತ್ಸಾಹವೇ ಸಿಗುತ್ತಿಲ್ಲ. ಹೀಗಾದರೆ, ಉತ್ಸಾಹಿ ನಿರ್ಮಾಪಕ, ನಿರ್ದೇಶಕರು ಹೊಸ ಪ್ರಯೋಗಕ್ಕೆ ಮುಂದಾಗುವುದಾದರೂ ಹೇಗೆ?’ ಎಂದು ಪ್ರಶ್ನಿಸುತ್ತಾರೆ ರೋಹಿತ್‌ ಪದಕಿ.

Advertisement

ಭುವನ್‌

Advertisement

Udayavani is now on Telegram. Click here to join our channel and stay updated with the latest news.

Next