ಸಿಂದಗಿ: ಪಟ್ಟಣದ ಸ್ವತ್ಛತೆ ಕಾಪಾಡುವುದು ಪುರಸಭೆಯ ಮುಖ್ಯ ಉದ್ದೇಶವಾಗಿದ್ದು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಹೇಳಿದರು. ಪಟ್ಟಣದ ವಾರ್ಡ್ ನಂ. 17 ಮತ್ತು 18ರ ಮಧ್ಯದಲ್ಲಿರುವ ದೊಡ್ಡ ಚರಂಡಿ ಸ್ವಚ್ಛ ಮಾಡುವ ಕಾರ್ಯ ವೀಕ್ಷಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿರುವ ಚರಂಡಿಗಳಲ್ಲಿ ಸಾರ್ವಜನಿಕರು ತ್ಯಾಜ್ಯ ವಸ್ತುಗಳನ್ನು ಹಾಕಬಾರದು.
ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಪುರಸಭೆ ವಾಹನಗಳ ಸದುಪಯೋಗ ಮಾಡಿಕೊಳ್ಳಬೇಕು. ಪರಿಸರ ಸ್ವಚ್ಚವಾಗಿ ಇಟ್ಟುಕೊಳ್ಳೋಣ. ಕೊರೊನಾದಂತ ರೋಗಗಳು ಬರದಂತೆ ನೋಡಿಕೊಳ್ಳೋಣ ಎಂದು ಹೇಳಿದರು. ಪಟ್ಟಣದಲ್ಲಿ ಕೊರೊನಾ ಹಾವಳಿ ತಡೆಯುವ ನಿಟ್ಟಿನಲ್ಲಿ ಪುರಸಭೆ ಆಡಳಿತ ಮಂಡಳಿ ವಾರ್ಡ್‌ಗಳಲ್ಲಿ ಸ್ಯಾನಿಟೈಸ್ ಮಾಡಲಾಗಿದೆ. ಈಗ ಚರಂಡಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದೆ. ಕೊರೊನಾ ಸೋಂಕಿನಿಂದ ಮುಕ್ತರಾಗಲು ಸಾರ್ವಜನಿಕರು ಮಾಸ್ಕ್ ಹಾಕಿಕೊಂಡು ಸಂಚಾರ ಮಾಡಬೇಕು. ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು.
ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗಳಿಗೆ ಹೋಂ ಐಸೋಲೇಷನ್ ಮಾಡಿಕೊಳ್ಳುವಂತೆ ಅಥವಾ ಸಮೀಪದ ಆರೋಗ್ಯ ಕೇಂದ್ರಕ್ಕೆ ಹೋಗಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವಂತೆ ಸಲಹೆ ನೀಡುವ ಮೂಲಕ ಸೋಂಕು ನಿಯಂತ್ರಣ ಮಾಡಲಾಗುತ್ತಿದೆ. ಅಲ್ಲದೆ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡಿಸುವ ಕಾರ್ಯ ಮಾಡುತ್ತಿರುವುದು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಮನೆ ಸುತ್ತ ಮುತ್ತ ತಗ್ಗು ಪ್ರದೇಶಗಳಿದ್ದರೆ ಅಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಎಳೆ ನೀರಿನ ಚಿಪ್ಪು, ಟೈರ್ ಮುಂತಾದ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಪರಿಸರ ಸ್ವತ್ಛವಾಗಿಟ್ಟುಕೊಂಡು ಸೊಳ್ಳೆಗಳಿಂದ ಬರುವ ಮಲೇರಿಯಾ, ಆನೆಕಾಲು ರೋಗ, ಡೆಂಘೀ, ಚಿಕೂನ್ ಗುನ್ಯಾ, ಮೆದುಳು ಜ್ವರ ರೋಗಗಳಿಂದ ಮುಕ್ತರಾಗಬೇಕು ಎಂದರು. ಈ ವೇಳೆ ಸದಸ್ಯರಾದ ರಾಜಣ್ಣ ನಾರಾಯಣಕರ, ಸಂದೀಪ ಚೌರ ಇದ್ದರು.