Advertisement

ತರಬೇತಿ ಪುನರಾರಂಭಕ್ಕೆ ಆಟಗಾರರ ವಿರೋಧ

02:05 AM May 21, 2020 | Sriram |

ಹೊಸದಿಲ್ಲಿ: ಕೇಂದ್ರ ಸರಕಾರ ಘೋಷಿಸಿದ ನಾಲ್ಕನೇ ಹಂತದ ಲಾಕ್‌ಡೌನ್‌ ಮಾರ್ಗಸೂಚಿಯಲ್ಲಿ ಕ್ರೀಡಾ ಸಂಕೀರ್ಣಗಳಲ್ಲಿ ತರಬೇತಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತ ಟೇಬಲ್‌ ಟೆನಿಸ್‌ ಫೆಡರೇಶನ್‌, ತರಬೇತಿ ಶಿಬಿರಕ್ಕೆ ಹಾಜರಾಗಲು ದೇಶದ ಅಗ್ರ 16 ಆಟಗಾರರಿಗೆ ಸಮ್ಮತಿ ಕೇಳಿ ಪತ್ರ ಬರೆದಿದೆ. ಆದರೆ ಆಟಗಾರರು ಈ ಪತ್ರಕ್ಕೆ ಒಪ್ಪಿಗೆ ಸೂಚಿಸಲಿಲ್ಲ.

Advertisement

ಅಗ್ರಮಾನ್ಯ ಆಟಗಾರರಾದ ಶರತ್‌ ಕಮಲ್‌, ಜಿ. ಸತ್ಯನ್‌ ಸಹಿತ ಪ್ರಮುಖ ಆಟಗಾರರು ಕೋವಿಡ್‌-19 ಸೋಂಕು ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಪ್ರಯಾಣ ಮಾಡುವುದು ಸರಿಯಾದ ನಿರ್ಧಾರವಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆಟಗಾರರಿಗೆ ಎನ್‌ಐಎಸ್‌ ಪಟಿಯಾಲ, ಸೋನೆಪತ್‌ ಮತ್ತು ಕೋಲ್ಕತಾದಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ.

ಮಾಸಾಂತ್ಯದಲ್ಲಿ ಶಿಬಿರ ಆರಂಭಿಸಲಾಗತ್ತದೆ. ಆಟಗಾರರು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಫೆಡರೇಶನ್‌ ಹೇಳಿದೆ. ಆದರೆ ಇದು ದುಡುಕಿನ ನಿರ್ಧಾರ ಎಂಬಂತೆ ಕಾಣುತ್ತಿದೆ. ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಕೆಲವೆಡೆ ಪ್ರಯಾಣ ನಿರ್ಬಂಧವೂ ಇದೆ. ಈ ಎಲ್ಲ ಸಂಕಷ್ಟದ ನಡುವೆ ಈ ತೀರ್ಮಾನ ಸರಿಯಲ್ಲ. ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುವವರೆಗೆ ತರಬೇತಿಗೆ ಕಾಯವುದು ಉತ್ತಮ ಎಂದು ಶರತ್‌ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಟೇಬಲ್‌ ಟೆನಿಸ್‌ ಫೆಡರೇಶನ್‌ ತನ್ನೆಲ್ಲ ಚಟುವಟಿಕೆಗಳನ್ನು ಜೂನ್‌ ಅಂತ್ಯದವರೆಗೆ ಸ್ಥಗಿತಗೊಳಿಸಿದೆ. ಸದ್ಯದಲ್ಲಿ ಯಾವುದೇ ಪ್ರಮುಖ ಪೂರ್ವನಿರ್ಧರಿತ ಟೂರ್ನಿಗಳಿಲ್ಲ. ಎಲ್ಲ ಆಟಗಾರರು ಒಟ್ಟಿಗೆ ಸೇರಿದರೆ ಒಳ್ಳೆಯದು. ಆದರೆ ಸದ್ಯಕ್ಕಂತೂ ಸಾಧ್ಯವಿಲ್ಲ ಎಂದವರು ತಿಳಿಸಿದ್ದಾರೆ.

ತರಬೇತಿ ಶಿಬಿರಕ್ಕೆ ಲಭ್ಯತೆ ಕುರಿತು ತಿಳಿಸುವಂತೆ ಟಿಟಿಎಫ್ಐ ಮಹಾ ಕಾರ್ಯದರ್ಶಿ ಎಂ.ಪಿ.ಸಿಂಗ್‌ ಅವರು ಆಟಗಾರರಿಗೆ ಪತ್ರ ಬರೆದಿದ್ದಾರೆ. ಫೆಡರೇಶನ್‌ ಮುಂದಿನ ವಾರ ಶಿಬಿರ ಆರಂಭಿಸುವ ಇರಾದೆ ಹೊಂದಿದೆ ಎಂದು ಪತ್ರದಲ್ಲಿ ಬರೆಯಲಾಗಿತ್ತು.

Advertisement

ಪ್ರಯಾಣ ಸುರಕ್ಷಿತವಲ್ಲ
ಪ್ರಸಕ್ತ ಪರಿಸ್ಥಿತಿಯಲ್ಲಿ ತವರಿನಲ್ಲೇ ಅಭ್ಯಾಸ ನಡೆಸಲು ಬಯಸುವುದಾಗಿ ಹೇಳಿರುವ ಇನ್ನೋರ್ವ ಆಟಗಾರ ಸತ್ಯನ್‌ ಕೂಡ ಈ ಶಿಬಿರದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಪ್ರಯಾಣ ಬೆಳೆಸುವುದು ಸುರಕ್ಷಿತವಲ್ಲ. ತವರಾದ ಚೆನ್ನೈನಲ್ಲಿ ರಾಮನ್‌ ತರಬೇತಿ ಕೇಂದ್ರದಲ್ಲಿ ಕೋಚ್‌ ರಾಮನ್‌ ಅವರಿಂದ ತರಬೇತಿ ಪಡೆಯುವುದಕ್ಕೆ ಆದ್ಯತೆ ನೀಡುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next