Advertisement

ಹಳ್ಳಿಯ ಆಟ ಅಂತಾರಾಷ್ಟ್ರೀಯ ಮಟ್ಟಕ್ಕೆ

11:54 AM Jan 13, 2017 | |

ದಾವಣಗೆರೆ: ಹಳ್ಳಿಗಾಡಿಗೆ ಸೀಮಿತವಾಗಿದ್ದ ಕಬಡ್ಡಿ ಆಟ ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಗುರುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಸೃಷ್ಠಿ ಕಬಡ್ಡಿ ಅಕಾಡೆಮಿ ಆಯೋಜಿಸಿರುವ ಜಿಲ್ಲಾಮಟ್ಟದ ಕಬಡ್ಡಿ ಪೀಮಿಯರ್‌ ಲೀಗ್‌ ಗೆ ಚಾಲನೆ ನೀಡಿ, ಮಾತನಾಡಿದರು.

Advertisement

ಮೊದಲು ಕಬಡ್ಡಿಯನ್ನು ಕೇವಲ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಆಡಲಾಗುತ್ತಿತ್ತು. ಕ್ರಮೇಣ ನಗರಮಟ್ಟಕ್ಕೆ ಪರಿಚಯಿಸಲಾಯಿತು. ಇದೀಗ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಈ ಗ್ರಾಮೀಣ ಸೊಗಡಿನ ಕ್ರೀಡೆ ಅಡಿ ಇಟ್ಟಿರುವುದು ಶ್ಲಾಘನೀಯ ಎಂದರು. ದಾವಣಗೆರೆಯಲ್ಲೂ ಕಬಡ್ಡಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.

ಅನೇಕರು ಈ ಕ್ರೀಡೆಯ ಬೆಳವಣಿಗೆಗೆ ಸಹಕರಿದ್ದಾರೆ. ಅದರಲ್ಲೂ ದಿವಂಗತ ಎಸ್‌.ಎಸ್‌. ಮಂಜುನಾಥ್‌ ಕಬಡ್ಡಿ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಸ್ಮರಣಾರ್ಥ ಹಮ್ಮಿಕೊಂಡಿರುವ ಪಂದ್ಯಾವಳಿಯಲ್ಲಿ 8 ತಂಡಗಳು ಪಾಲ್ಗೊಳ್ಳಲಿವೆ. ಈ ಪಂದ್ಯಾವಳಿ ಕಬಡ್ಡಿ ಪ್ರಿಯರಿಗೆ ರಂಜನೆ ನೀಡಲಿದೆ ಎಂದು ಅವರು ತಿಳಿಸಿದರು. 

ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಸೋತ ತಂಡಗಳು ಸೋಲನ್ನು ಬೇಸರವಿಲ್ಲದೆ ಸೀÌಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಜೊತೆಗೆ ಮುಂದೆ ಗೆಲ್ಲುವ ಕುರಿತು ಚಿಂತಿಸಬೇಕು. ಗೆದ್ದವರು ಬೀಗದೆ ಮತ್ತಷ್ಟು ಉತ್ತಮ ಸಾಧನೆ ಮಾಡಲು ಉತ್ಸುಕರಾಗಬೇಕು. ಆಗಲೇ ಕ್ರೀಡೆಗೆ ಇನ್ನಷ್ಟು ಮೆರಗು ಬರುವುದು ಎಂದು ಅವರು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಮೇಯರ್‌ ರೇಖಾ ನಾಗರಾಜ್‌ ಮಾತನಾಡಿ, ಇಂದು ಕ್ರಿಕೆಟ್‌ಗೆಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಅದರಲ್ಲೂ  ಕಬಡ್ಡಿಗೆ ಜನಪ್ರಿಯತೆ ಇದ್ದರೂ ಸಹ ಪ್ರೋತ್ಸಾಹಸಿಗುತ್ತಿಲ್ಲ. ನಾನು ಸ್ವತಃ ಕಬಡ್ಡಿ ಪಟುವಾಗಿ ರಾಷ್ಟ್ರಮಟ್ಟದಲ್ಲಿ ಆಡಿದ್ದೇನೆ. ನನ್ನ ಅಣ್ಣ, ತಂದೆ ಸಹ ಉತ್ತಮ ಆಟಗಾರರಾಗಿದ್ದರು.

Advertisement

ಎಲ್ಲರಿಗೂ ಅನುಭವಕ್ಕೆ ಬಂದಂತೆ ಕಬಡ್ಡಿಗೆ ಅಷ್ಟೊಂದು ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಅವರು ಹೇಳಿದರು. ಹಿಂದೆಲ್ಲಾ ಮೈದಾನದಲ್ಲಿ ಆಟವಾಡುತ್ತಿದ್ದರೆ ಎಲ್ಲಾ ಕ್ರೀಡೆಗಳ ಪಟುಗಳು ಕಾಣುತ್ತಿದ್ದರು. ಒಂದು ಕಡೆ ಕಬಡ್ಡಿ, ಇನ್ನೊಂದು ಕಡೆ ವಾಲಿಬಾಲ್‌, ಫುಟ್‌ಬಾಲ್‌ ಹೀಗೆ ತರೇಹವಾರಿ ಕ್ರೀಡೆಗಳನ್ನು ಆಡಲಾಗುತ್ತಿತ್ತು.

ಆದರೆ, ಇಂದು ಎಲ್ಲವೂ ಬದಲಾಗಿ ಹೋಗಿದೆ. ಎಲ್ಲಿ ನೋಡಿದರೂ ಕ್ರಿಕೆಟ್‌ ಆಟ ಮಾತ್ರ ಕಾಣಸಿಗುತ್ತದೆ. ಸಣ್ಣ ಮೈದಾನ, ದೊಡ್ಡ ಮೈದಾನ ಎನ್ನದೇ ಕ್ರಿಕೆಟಿಗರೇ ಇಡೀ ಮೈದಾನ ಆವರಿಸುತ್ತಿದ್ದಾರೆ.ಇದು ಬೇಸರದ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ಸೃಷ್ಟಿ ಅಕಾಡೆಮಿ ಕಬಡ್ಡಿ ಆಟ ಬೆಳೆಸಲು ತನ್ನದೇ ಕೊಡುಗೆ ನೀಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

ಕೆಪಿಎಲ್‌ ಸಂಘಟನಾ ಸಮಿತಿಯ ಅಧ್ಯಕ್ಷ ಎಂ. ದೊಡ್ಡಪ್ಪ, ಪಾಲಿಕೆ ಸದಸ್ಯರಾದ ದಿನೇಶ್‌ ಕೆ. ಶೆಟ್ಟಿ, ಶೋಭ ಪಲ್ಲಾಗಟ್ಟೆ, ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ, ಮುಖಂಡರಾದ ಎ. ನಾಗರಾಜ, ಕೊಂಡಜ್ಜಿ ಜಯಪ್ರಕಾಶ್‌, ಬಿ. ಶಿವಕುಮಾರ್‌, ಸಂಕೋಳ್‌ ಚಂದ್ರಶೇಖರ್‌, ಸಿಪಿಐಗಳಾದ ಸಂಗನಾಳ್‌, ಜಿ.ಬಿ.ಉಮೇಶ್‌ ಇತರರು ವೇದಿಕೆಯಲ್ಲಿದ್ದರು. ಕೆಎಸ್‌ಐಸಿ ಮಾಜಿ ಅಧ್ಯಕ್ಷ  ಡಿ. ಬಸವರಾಜ ಪ್ರಾಸ್ತಾವಿಕ ನುಡಿಗಳನ್ನಾಡಿದರು.  

Advertisement

Udayavani is now on Telegram. Click here to join our channel and stay updated with the latest news.

Next