Advertisement
ಕನ್ನಡ ನುಡಿ ಕುಣಿದಾಡುವ ಮಹಾ ಆಲಯವಾಗಿ ಪರಿವರ್ತನೆಯಾಗಲಿರುವ ಮೂಡಬಿದಿರೆಯ ಆಳ್ವಾಸ್ ಪರಿಸರ ಕನ್ನಡಾಂಬೆಯ ಭವ್ಯ ದರ್ಶನಕ್ಕೆ ವೇದಿಕೆ ಒದಗಿಸಿದೆ. ಸಾಹಿತ್ಯ-ಸಾಂಸ್ಕೃತಿಕ-ಕೃಷಿ- ಉದ್ಯೋಗ-ಮನೋರಂಜನ ಕಾರ್ಯ ಕಲಾಪಗಳ ಮುಖೇನ ಇಡೀ ಮೂಡಬಿದಿರೆ ಸಾಹಿತ್ಯ ಲೋಕವೊಂದನ್ನು ಕರುನಾಡಿಗೆ ಪರಿಚಯಿಸಲಿದೆ. ಹಳದಿ ಹಾಗೂ ಕೆಂಪು ಬಣ್ಣದ ಕನ್ನಡ ಬಾವುಟಗಳು ಮೂಡಬಿದಿರೆಯ ಅಷ್ಟೂ ವಠಾರದಲ್ಲಿ ಸ್ವತ್ಛಂದವಾಗಿ ಹಾರಾಡುವ ಮೂಲಕ ನುಡಿಸಿರಿಗೆ ಹುರುಪು ದೊರೆತಂತಾಗಿದೆ.
Related Articles
ಗೇರುಕಟ್ಟೆ ಗಂಗಯ್ಯ ಶೆಟ್ಟಿ ವೇದಿಕೆ, ಕುವೆಂಪು ಸಭಾಂಗಣ, ಡಾ| ಶಿವರಾಮ ಕಾರಂತ ಸಭಾಂಗಣ, ಪಳಕಳ ಸೀತಾರಾಮ ಭಟ್ಟ ವೇದಿಕೆ, ಡಾ| ವಿ.ಎಸ್.ಆಚಾರ್ಯ ಸಭಾ ಭವನದ ಹರೀಶ್ ಆರ್. ಭಟ್ ವೇದಿಕೆಗಳಲ್ಲಿ ಬೆಳಗ್ಗಿನಿಂದ ರಾತ್ರಿ 10ರ ವರೆಗೆ ಹಾಗೂ ಉಳಿದ 7 ವೇದಿಕೆಗಳಲ್ಲಿ ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ .
Advertisement
ಕನ್ನಡದ ಜತೆಗೆ ತುಳುನಾಡ ಐಸಿರಿ!ಆಳ್ವಾಸ್ ನುಡಿಸಿರಿ ನಡೆಯುವ ಮೂರು ದಿನಗಳವರೆಗೆ ಸಂಜೆ 6 ಗಂಟೆಯಿಂದ ತುಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುವುದು ವಿಶೇಷ. ತುಳು ಸಾಧಕರು, ತುಳು-ಕನ್ನಡ ಸಾಹಿತಿಗಳಾದ ನಾಡೋಜ ಕಯ್ನಾರ ಕಿಂಞಣ್ಣ ರೈ ಅವರ ಹೆಸರಿನ ವೇದಿಕೆಯಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಡಿ.1ರಂದು ಸಂಜೆ 5.30ಕ್ಕೆ ತುಳು ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಉದ್ಘಾಟಿಸಲಿದ್ದು, ಪ್ರೊ| ಬಿ.ಎ.ವಿವೇಕ್ ರೈ ಅಧ್ಯಕ್ಷತೆ ವಹಿಸುವರು. ಕಂಬಳದ ಕೋಣವಿದೆ
ಈ ಬಾರಿ ಕೃಷಿ ಸಿರಿಯನ್ನು ವಿನೂತನ ರೀತಿಯಲ್ಲಿ ಸಂಘಟಿಸಲಾಗಿದೆ. ಶುಕ್ರವಾರ ಜಾನುವಾರುಗಳ ಪ್ರದರ್ಶನ ಆಯೋಜಿಸಲಾಗಿದೆ. ಸಂಜೆ 4.30ರಿಂದ 6ರವರೆಗೆ ಓಟದ ಕೋಣಗಳ ಸೌಂದರ್ಯದ ಸ್ಪರ್ಧೆಯಿದೆ. ವಿಜೇತ ಕೋಣಗಳಿಗೆ ನಗದು ಬಹುಮಾನವಿದೆ. ಕೋಣ ಓಡಿಸುವವರ ದೇಹ ಸೌಂದರ್ಯ ಸ್ಪರ್ಧೆಯೂ ಈ ಬಾರಿ ನಡೆಯಲಿರುವುದು ವಿಶೇಷ. ಜತೆಗೆ ಬೆಕ್ಕುಗಳ ಪ್ರದರ್ಶನ, ಬೆಕ್ಕುಗಳ ಸೌಂದರ್ಯ ಪ್ರದರ್ಶನ, ಶ್ವಾನ-ಶ್ವಾನ ಮರಿ-ಶ್ವಾನ ಪ್ರಾಮಾಣಿಕತೆ ಹಾಗೂ ಶ್ವಾನ ಸೌಂದರ್ಯ ಪ್ರದರ್ಶನವಿದೆ. 600ಕ್ಕೂ ಮಿಕ್ಕಿ ಬೃಹತ್ ಮತ್ಸ್ಯಗಳ ಪ್ರದರ್ಶನವಿದೆ. 500ಕ್ಕೂ ಮಿಕ್ಕಿ ಸಮುದ್ರ ಚಿಪ್ಪುಗಳ ಪ್ರದರ್ಶನ, ವಿದೇಶಿ ಪಕ್ಷಿಗಳು ಇಲ್ಲಿರಲಿವೆ. 38,200 ಪ್ರತಿನಿಧಿಗಳು
ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತರು 100 ರೂ. ಪಾವತಿಸಿ ಪ್ರತಿನಿಧಿಗಳಾಗಲು ಅವಕಾಶವಿದೆ. ಇವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಗಳನ್ನು ಮಾಡಲಾಗಿದೆ. ಈಗಾಗಲೇ 100 ರೂ.ಪಾವತಿಸಿ ಒಟ್ಟು 38,200ಕ್ಕೂ ಅಧಿಕ ಜನರು ನೋಂದಣಿ ಮಾಡಿದ್ದಾರೆ. ಆಳ್ವಾಸ್‌ನ ಬಹುತೇಕ ಹಾಸ್ಟೆಲ್ ಗಳಲ್ಲಿ ಮತ್ತು ಇತರ ವಸತಿ ಕೇಂದ್ರಗಳಲ್ಲಿ ದೂರದೂರಿನಿಂದ ಬಂದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಭರ್ಜರಿ ಭೋಜನ
ಇಲ್ಲಿಯವರೆಗೆ ಒಂದು ಕೇಂದ್ರದಲ್ಲಿ ಮಾತ್ರ ಊಟದ ವ್ಯವಸ್ಥೆ ನಿರ್ವಹಿಸುತ್ತಿದ್ದರೆ, ಈ ಬಾರಿ ಕೃಷಿ ಸಿರಿ ಆಯೋಜಿಸಲಾಗಿರುವ ಸ್ಥಳವೂ ಸಹಿತ ಎರಡು ಕಡೆಗಳಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 100 ಮಂದಿ ಬಾಣಸಿಗರು ಇದನ್ನು ನಿರ್ವಹಿಸುವರು. ಹೆಚ್ಚಾ ಕಡಿಮೆ 100 ಕಡೆಗಳಲ್ಲಿ ಊಟದ ಕೌಂಟರ್ ಇರಲಿದೆ. ‘ನುಡಿ’ಯು ‘ಸಿರಿ’ಯಾಗುವ ಬಗೆ
ಆಳ್ವಾಸ್ ಸಾಹಿತ್ಯ ಸಮ್ಮೇಳನವು ಸಾಹಿತ್ಯ ದುಂದುಭಿಯನ್ನು ಮೊಳಗಿಸಿದರೆ, ಇನ್ನೊಂದೆಡೆ ವಿವಿಧ ಸಿರಿಗಳ ಮುಖೇನ ನುಡಿಸಿರಿಯು ವಿವಿಧತೆಯಿಂದ ಕಂಗೊಳಿಸಲಿದೆ. ರಾಜ್ಯದ 30 ಚಿತ್ರ ಕಲಾವಿದರಿಂದ ಆಳ್ವಾಸ್ ಚಿತ್ರಸಿರಿ, ದೇಶದ 2000ಕ್ಕೂ ಮಿಕ್ಕಿ ಛಾಯಾಗ್ರಾಹಕರಿಂದ ಛಾಯಾಚಿತ್ರ ಪ್ರದರ್ಶನದ “ಆಳ್ವಾಸ್ ಛಾಯಾಚಿತ್ರ ಸಿರಿ’, ಚುಕ್ಕಿ ಚಿತ್ರ ಕಲಾವಿದರ ಚುಕ್ಕಿ ಚಿತ್ರಗಳ ರಚನೆ ಹಾಗೂ ಪ್ರದರ್ಶನದ ಆಳ್ವಾಸ್ ಚುಕ್ಕಿ ಚಿತ್ರಸಿರಿ, ಗಾಳಿಪಟೋತ್ಸವದ ‘ಆಳ್ವಾಸ್ ಗಾಳಿಪಟ ಸಿರಿ, ಎಸೆಸೆಲ್ಸಿವರೆಗೆ ಕನ್ನಡ ಮಾಧ್ಯಮಗಳಲ್ಲಿ ಕಲಿತವರಿಗೆ ಮೊದಲ ದಿನ ಉದ್ಯೋಗಾವಕಾಶ ನೀಡುವ ‘ಆಳ್ವಾಸ್ ಉದ್ಯೋಗ ಸಿರಿ’, ಕನ್ನಡ ನಾಟಕಗಳ ಪ್ರದರ್ಶನ ‘ಆಳ್ವಾಸ್ ರಂಗ ಸಿರಿ’, ಕನ್ನಡ ಚಲನಚಿತ್ರ ಪ್ರದರ್ಶನದ ‘ಆಳ್ವಾಸ್ ಸಿನಿ ಸಿರಿ’, ರಾಜ್ಯದ 30 ವ್ಯಂಗ್ಯಚಿತ್ರ ಕಲಾವಿದರಿಂದ ವ್ಯಂಗ್ಯಚಿತ್ರ ರಚನೆ ಹಾಗೂ ಪ್ರದರ್ಶನದ “ಆಳ್ವಾಸ್ ವ್ಯಂಗ್ಯಚಿತ್ರ ಸಿರಿ’, ಗೂಡುದೀಪಗಳ ಪ್ರದರ್ಶನದ ‘ಆಳ್ವಾಸ್ ಗೂಡುದೀಪ ಸಿರಿ’, ಯಕ್ಷಗಾನ ಪ್ರದರ್ಶನದ “ಆಳ್ವಾಸ್ ಯಕ್ಷಸಿರಿ’, ವಿವಿಧ ವಿಜ್ಞಾನ ಮಾದರಿಗಳ ಪ್ರಾತ್ಯಕ್ಷಿಕೆಯ ‘ಆಳ್ವಾಸ್ ವಿಜ್ಞಾನ ಸಿರಿ’ ಗಳು ಈ ಬಾರಿ ಮೇಳೈಸಲಿರುವುದು ವಿಶೇಷ. ದಿನೇಶ್ ಇರಾ