ಯಾತನೆಯೇ ಸಂಭ್ರಮವಾಗಿ ಬಿತ್ತರಗೊಳ್ಳುವ ಪ್ರಕ್ರಿಯೆ ಇಡೀ ನಾಟಕದಲ್ಲಿ ನಡೆಯುತ್ತದೆ. ಇನ್ನೊಂದು
ಮಗ್ಗುಳಲ್ಲಿ ನೋಡಿದಾಗ ಬದುಕಿನ ಸಂಭ್ರಮದೊಳಗೆ ಯಾತನೆ ಮರೆಯಲ್ಲಿ ನಿಂತು ಕಣ್ಣೀರು ಹಾಕುವಂತೆ ಭಾಸವಾಗುತ್ತದೆ. ನಾಟಕ ಆರಂಭಗೊಳ್ಳುವುದು ವಿಮಾನ ನಿಲ್ದಾಣದ ಒಳ ಲಾಂಜ್‌ನಿಂದ . ಇಡೀ ವಿಮಾನ ನಿಲ್ದಾಣದ ಒಳಾಂಗಣದ ನಿತ್ಯದ ಚಟುವಟಿಕೆಯನ್ನು ಅದ್ಭುತ ಅನ್ನುವ ರೀತಿಯಲ್ಲಿ ದೃಶ್ಯ ಸಂಯೋಜನೆ ಮಾಡಲಾಗಿತ್ತು.
ಕೆಂಡೋನಿಯನ್ಸ್ ನಾಟಕದ ಮುಖ್ಯ ಭಾಗವೇ ಸರ್ಕಸ್ . ಹಾಗಂತ ಇದು ಸರ್ಕಸ್‌ನ ಕಲಾವಿದರ ಅಥವಾ ಕಾರ್ಮಿಕರ ಕಷ್ಟ ಕಾರ್ಪಣ್ಯದ ಬಗ್ಗೆ ಮಾತನಾಡುವ ನಾಟಕವಲ್ಲ. ಬಣ್ಣದ ಕನಸನ್ನು ನಂಬಿ ಭ್ರಮೆಗೆ ಬಿದ್ದು, ಬಿಸಿಲ್ಗುದುರೆಯನ್ನೇರುವವರ ಬದುಕು ಮೂರಾಬಟ್ಟೆಯಾಗುವುದನ್ನು ನಾಟಕದೊಳಗೆ ಬರುವ ಸರ್ಕಸ್ ಸಂಕೇತಿಸುತ್ತದೆ.
ಪಾದುವ ರಂಗ ಅಧ್ಯಯನ ಕೇಂದ್ರದ ರಂಗ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ನಾಟಕ ಕೆಂಡೋನಿಯನ್ಸ್. ಒಮ್ಮೆಗೆ ಈ ಕೆಂಡೋನಿಯನ್ಸ್ ಒಂದು ವಿಚಿತ್ರ ಹೆಸರಿನಂತೆ ಕಾಣುತ್ತಾ , ಏನಿದರ ಅರ್ಥ ಎಂದು ತಲೆ ಕೆರೆದುಕೊಳ್ಳುವಂತೆ ಮಾಡುತ್ತದೆ. ನಾಟಕ ಮುಗಿದಾಗಲೇ ಕೆಂಡೋನಿಯನ್ಸ್ ಅರ್ಥವಾಗುವುದು .
ಮಲಯಾಳದ ಪ್ರಸಿದ್ಧ ನಿರ್ದೇಶಕ ಅರುಣ್ ಲಾಲ್ ಅವರು ಈ ನಾಟಕವನ್ನು ಬರೆದು ನಿರ್ದೇಶಿಸಿದ್ದಾರೆ. ವಿದ್ಯಾರ್ಥಿಗಳು ವೃತ್ತಿಪರ , ಹವ್ಯಾಸಿ ಕಲಾವಿದರಿಗೆ ಸರಿ ತೂಗುವ ಮಟ್ಟಿಗೆ ನಟನೆಯಲ್ಲಿ ಕಡಿಮೆ ಇಲ್ಲದಂತೆ ನಟಿಸಿದ್ದಾರೆ. ಅತ್ಯುತ್ತಮವಾದ ಬೆಳಕಿನ ಸಂಯೋಜನೆ ಇತ್ತು. ಮಧ್ಯೆ ಮಧ್ಯೆ ಬರುವ ಹಾಡುಗಳು ನಾಟಕಕ್ಕೆ ಒಂದು ಸಂಭ್ರಮವನ್ನು ತಂದು ಕೊಡುತ್ತದೆ.
ಯಾತನೆಯೇ ಸಂಭ್ರಮವಾಗಿ ಬಿತ್ತರಗೊಳ್ಳುವ ಪ್ರಕ್ರಿಯೆ ಇಡೀ ನಾಟಕದಲ್ಲಿ ನಡೆಯುತ್ತದೆ. ಇನ್ನೊಂದು ಮಗ್ಗುಳಲ್ಲಿ ನೋಡಿದಾಗ ಬದುಕಿನ ಸಂಭ್ರಮದೊಳಗೆ ಯಾತನೆ ಮರೆಯಲ್ಲಿ ನಿಂತು ಕಣ್ಣೀರು ಹಾಕುವಂತೆ ಭಾಸವಾಗುತ್ತದೆ.
ನಾಟಕ ಆರಂಭಗೊಳ್ಳುವುದು ವಿಮಾನ ನಿಲ್ದಾಣದ ಒಳ ಲಾಂಜ್‌ನಿಂದ . ಇಡೀ ವಿಮಾನ ನಿಲ್ದಾಣದ ಒಳಾಂಗಣದ ನಿತ್ಯದ ಚಟುವಟಿಕೆಯನ್ನು ಅದ್ಭುತ ಅನ್ನುವ ರೀತಿಯಲ್ಲಿ ದೃಶ್ಯ ಸಂಯೋಜನೆ ಮಾಡಲಾಗಿತ್ತು. ಅಲ್ಲೇ ಕಾಣಿಸಿಕೊಳ್ಳುವಾತ ದಾಮು. ಊರಿನಲ್ಲಿ ಟೀ ಸ್ಟಾಲ್ ನಡೆಸಿಕೊಂಡಿದ್ದ ದಾಮು ಏಜೆಂಟರ ಆಮಿಷಕ್ಕೆ ಒಳಗಾಗಿ ವಿದೇಶಿ ಉದ್ಯೋಗದ ಭ್ರಮೆಗೆ ಸಿಲುಕಿ ಕೆಂಡೋನಿಯಕ್ಕೆ ವಿಮಾನ ಹತ್ತಿದವ. ಆಧುನಿಕತೆಯ ಭರಾಟೆಯ ವಿಮಾನ ನಿಲ್ದಾಣದೊಳಗಡೆ ಪೆಚ್ಚುಪೆಚ್ಚಾಗಿ ದಾಮು ಎಲ್ಲಾ ಹಳ್ಳಿಗರ ಪ್ರತಿನಿಧಿಯಂತೆ ಕಾಣುತ್ತಾನೆ.
ನೂರಾರು ಕನಸು ಹೊತ್ತು ಕೆಂಡೋನಿಯಾ ತಲುಪುವ ದಾಮು , ಅಲ್ಲಿ ಸರ್ಕಸ್ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ನಕಲಿ ವೀಸಾದಲ್ಲಿ ಬಂದು ವಿದೇಶ ತಲುಪಿದೆ ಅನ್ನುವ ಸತ್ಯ ಗೊತ್ತಾದಾಗ ತನ್ನ ಟೀ ಸ್ಟಾಲ್ ಕಣ್ಣೆದುರು ಬರುತ್ತದೆ. ದಿನ ನಿತ್ಯ ಟೀ ಕುಡಿಯಲು ಬಂದವನೇ ನಕಲಿ ವೀಸಾ ಮೂಲಕ ವಿದೇಶಕ್ಕೆ ಕಳುಹಿಸಿದ ಅಪ್ರಿಯ ಸತ್ಯವನ್ನು ಒಪ್ಪುವಷ್ಟರಲ್ಲೇ , ಸುತ್ತಮುತ್ತಲೆಲ್ಲಾ ಊರಿನವರೇ ಕಾಣಿಸಿಕೊಳ್ಳುತ್ತಾರೆ. ಎಲ್ಲರದ್ದೂ ತನ್ನದೇ ಸ್ಥಿತಿ, ದಾಮು ವಸ್ತುಶಃ ಬಿಂಗ್ರಿಯಾಗುತ್ತಾನೆ.ಫ್ಲ್ಯಾಶ್‌ಬ್ಯಾಕ್‌ನಲ್ಲಿ ಬರುವ ತನ್ನ ಊರು , ಮನೆ, ಟೀ ಸ್ಟಾಲ್, ಪತ್ನಿ , ತಂದೆಯ ನೆನಪು ದಾಮುವನ್ನು ಪರಿತಪಿಸುವಂತೆ ಮಾಡುತ್ತದೆ.
ವೆರಿ ಸ್ಟ್ರಿಕ್ಟ್ , ನೋ ಇಮೋಷನ್ಸ್ ಅನ್ನುವ ಮಾತುಗಳು ಅಷ್ಟರಲ್ಲಿಯೇ ದಾಮುಗೆ ಭಾವನೆ ಇಲ್ಲದ, ತುಂಬಾ ಕಟ್ಟುನಿಟ್ಟಿನ ಲೋಕವನ್ನು ತೋರಿಸುತ್ತದೆ. ಈಗ ಸರ್ಕಸ್‌ನಲ್ಲಿ ದಾಮು ಮಂಗನ ಪಾತ್ರಧಾರಿ , ಹೌದು ಅದೇನು ಪಾತ್ರವಲ್ಲ , ಅದೊಂದು ಉದ್ಯೋಗ . ಮಂಗನಿಂದ ಮಾನವ ಬದಲಿಗೆ ನೀನು ಮಾನವನಿಂದ ಮಂಗ ಎಂದು ಹೇಳಲಾಗುತ್ತದೆ. ದಾಮುಗೆ ತಾನು ಕೆಂಡೋನಿಯಾಕ್ಕೆ ಬಂದು ಮಂಗ ಆದೆ ಎಂದು ಅರ್ಥವಾಗುವಷ್ಟರಲ್ಲಿ ಆತ ನಕಲಿ ವೀಸಾದ ಜಾಲದಲ್ಲಿ ಟ್ರ್ಯಾಪ್ ಆಗಿರುತ್ತಾನೆ. ಹಸಿವಿನೊಂದಿಗೆ ಹೋರಾಟವೇ ದಿನದ ಬದುಕಾಗುತ್ತದೆ.
ದಾಮುವಿಗೆ ಊರಿನ ನೆನಪು ಕಾಡುತ್ತದೆ, ಊರಿನ ಹಬ್ಬಗಳು, ಜಾತ್ರೆಗಳು ಮತ್ತೆ ಮತ್ತೆ ನೆನಪಾಗುತ್ತದೆ. ಇವೆಲ್ಲವೂ ಅತ್ಯುತ್ತಮ ದೃಶ್ಯ ರೂಪಕಗಳಾಗಿ ಬರುವ ಮೂಲಕ ವೇದಿಕೆಯಲ್ಲಿ ಸಂಭ್ರಮ ಮನೆ ಮಾಡುತ್ತದೆ. ಪ್ರೇಕ್ಷಕನಿಗೂ ಸ್ಥಳೀಯ ಅಸ್ಮಿತೆಯ ರಂಗು ರಂಗಿನ ಹಬ್ಬ ಕಣ್ಮನ ಸೆಳೆಯುತ್ತದೆ.
ಪತ್ನಿ, ಮಕ್ಕಳ ಭೇಟಿಯೆಂಬ ಹಗಲು ಕನಸು ಕಾಣುವ ದಾಮುವಿಗೆ ಮನೆ , ಮಡದಿ ಮಕ್ಕಳ ನೆನಪು ಅದಾಗೆಲ್ಲಾ ಇನ್ನೂ ಊರಿಗೆ ಹೋಗುವುದು ಕನಸಷ್ಟೇ ಎಂಬ ನೋವು ಎದೆಯನ್ನು ಚುಚ್ಚುತ್ತದೆ.
ಸರ್ಕಸ್‌ನಲ್ಲಿ ದಾಮುವಿನ ಮಂಗನಾಟ , ಮಂಗನ ಪಾಡಾಗುತ್ತದೆ , ಸಿಂಹದ ಬಾಯಿಗೆ ಬೀಳುವ ಮಂಗನಾಗಿ ನಟಿಸಬೇಕಾಗುತ್ತದೆ. ಅದು ನಟನೆಯಲ್ಲ ಜೀವವನ್ನು ಕೈಯಲ್ಲಿ ಹಿಡಿದು ಓಡುವ ಓಟ. ಸಿಂಹದ ಗೂಡಿನ ಬಾಗಿಲು ತೆರೆದಾಗ ದಿಕ್ಕಾಪಾಲಾಗಿ ಓಡುವ ದಾಮು ಕೊನೆಗೆ ಸಿಂಹದ ಕಾಲಬುಡಕ್ಕೆ ಬಂದು ಬೀಳುತ್ತಾನೆ. ಇನ್ನೇನೂ ಜೀವ ಹರಣವಾಯಿತು ಅನ್ನುವಾಗಲೇ ಸಿಂಹದ ಮುಖವಾಡದಿಂದ ಮನುಷ್ಯ ಹೊರ ಬರುತ್ತಾನೆ , ಸಿಂಹದೊಳಗಿನ ಮನುಷ್ಯ , ಅರೇ…ಆತನೂ ದಾಮುವಿನ ಊರಿನವನೇ ಆಗಿದ್ದ, ಇನ್ನೂ ಸರ್ಕಸ್‌ನ ಕರಡಿ, ರಿಂಗ್ ಮಾಸ್ಟರ್ ಎಲ್ಲರೂ ದಾಮುವಿನ ಊರಿನವರೇ . ಇಲ್ಲಿ ಎಲ್ಲವೂ ಡೂಪ್ಲಿಕೇಟ್ , ಯಾವುದೂ ಒರಿಜಿನಲ್ ಇಲ್ಲ ಅನ್ನುವ ಎಲ್ಲರ ಮಾತು , ಇಡೀ ಕಥನದ ತಿರುಳನ್ನು ಧ್ವನಿಸುತ್ತದೆ.
ವೈಭವದ ಕಲರ್‌ಫುಲ್ ಸರ್ಕಸ್ ಇಡೀ ನಾಟಕಕ್ಕೆ ಸಂಭ್ರಮವನ್ನು ತಂದುಕೊಟ್ಟದ್ದು ನಿಜ. ನೋವಿನ , ಯಾತನೆಯ ನೆರಳಲ್ಲೂ ಇಡೀ ನಾಟಕ ಸಂಭ್ರಮದ ಸಾಗರವಾಗಿ ಹರಿಯುತ್ತದೆ.
ನಾಟಕ ಪೂರ್ತಿ ರಟ್ಟಿನ ಪೆಟ್ಟಿಗೆಗಳನ್ನೇ ರಂಗ ಸಜ್ಜಿಕೆಗೆ ಬಳಸಿಕೊಂಡದ್ದು ಅಧುºತವಾಗಿತ್ತು. ಇಡೀ ನಾಟಕವನ್ನು ರಟ್ಟಿನ ಪೆಟ್ಟಿಗಳ ಸಾಲಿನಲ್ಲಿ ಮೂರು ನಾಲ್ಕು ದೃಶ್ಯಗಳಿಗೂ ಜೋಡಿಕೆಯಾಗುವಂತೆ ಬಳಸಿಕೊಂಡದ್ದು , ಮತ್ತೆ ಸರ್ಕಸ್ಸಿನ ಒಳಾಂಗಣಕ್ಕೆ , ವಿಮಾನ ನಿಲ್ದಾಣದ ಒಳಾಂಗಣಕ್ಕೆ ವೇದಿಕೆಯನ್ನು ಬಳಸಿಕೊಂಡದ್ದು, ಪೋಟೋ ಫ್ರೆàಮ್‌ನಲ್ಲಿ ಪಾತ್ರಧಾರಿಯನ್ನು ಬಳಸಿಕೊಂಡದ್ದು ಅದ್ಭುತ ತಂತ್ರಗಾರಿಕೆಯೇ ಸರಿ .
ನಾಟಕ ಆರಂಭಗೊಳ್ಳುವಾಗ ಕೇಳಲಾಗುವ ನೀನೆಲ್ಲಿಗೆ ಹೋಗುವೆ ಅನ್ನುವ ಪ್ರಶ್ನೆಗೆ ನಾಟಕ ಮುಕ್ತಾಯದಲ್ಲಿ ಬರುವ ಮುಖವಾಡ ಕಳಚಿ ನಾನು ನಾನೇ ಆಗಬೇಕು, ನಾನು ನನ್ನಲ್ಲಿಗೆ ವಾಪಸು ಹೋಗಬೇಕು ಎಂಬ ಹಪಾಹಪಿ ಇಡೀ ನಾಟಕ ಧ್ವನಿಸುವ ಕಥಾವಸ್ತು . ದಾಮುವಿನ ಪಾತ್ರ ಮಾಡಿದ ಕ್ಲಾನೆನ್ ಫೆರ್ನಾಂಡಿಸ್ ನಟನೆ ಅದ್ಭುತವಾಗಿತ್ತು. ಎಲ್ಲಾ ನಟರ ನಟನೆ ತುಂಬಾ ಚೆನ್ನಾಗಿ ಲವಲವಿಕೆಯಿಂದ ಕೂಡಿತ್ತು. ಬೆಳಕಿನ ಸಂಯೋಜನೆ , ಸಂಗೀತ ಚೆನ್ನಾಗಿತ್ತು.
ಬದುಕನ್ನೇ ಅಲ್ಲಾಡಿಸಿ ಬಿಡುವ ಯಾತನೆಯನ್ನು ಒಂದು ಸಂಭ್ರಮದ ಸ್ವರೂಪದಲ್ಲಿ , ಅಥವಾ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಎಂಬ ಸ್ವರೂಪದಲ್ಲಿ ಪ್ರಸ್ತುತಪಡಿಸಿದ್ದು ಈ ನಾಟಕದ ಹೆಚ್ಚುಗಾರಿಕೆ. ಕನ್ನಡ ನೆಲದಲ್ಲಿ ಅರುಣ್‌ಲಾಲ್ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ನಿಸಾಸಮ್ ಕ್ರಿಸ್ಟೋಪರ್ ಅವರ ಸೃಜನಶೀಲ ಕಾರ್ಯ ಸಂಯೋಜನೆ , ಫಾದರ್ ಆಲ್ವಿನ್ ಸೆರಾವೋ ಅವರ ನಿರ್ಮಾಣ ಸಾಹಸಕ್ಕೆ ಯಶ ಸಿಕ್ಕಿದೆ.
ತಾರಾನಾಥ್ ಗಟ್ಟಿ ಕಾಪಿಕಾಡ್