Advertisement
ಇಂತಹ ಹತ್ತುಹಲವು ಯಂತ್ರೋಪಕರಣಗಳಿಗೆ ಗುರುವಾರ ಆರಂಭಗೊಂಡ ನಾಲ್ಕು ದಿನಗಳ ಬೆಂಗಳೂರು ಕೃಷಿ ಮೇಳ ವೇದಿಕೆ ಕಲ್ಪಿಸಿದೆ. ಕೃಷಿಯನ್ನು ಕಾಡುತ್ತಿರುವ ಕಾರ್ಮಿಕ ಸಮಸ್ಯೆಗೆ ಮೇಳದಲ್ಲಿ ತಲೆಯೆತ್ತಿರುವ ನೂರಾರು ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಮಳಿಗೆಗಳು ರೈತರಿಗೆ ಪರಿಹಾರಗಳಾಗಿ ಗೋಚರಿಸುತ್ತವೆ. ಹಲವು ಪ್ರಮುಖ ತಂತ್ರಜ್ಞಾನಗಳ ಸಂಕ್ಷಿಪ್ತ ವಿವರ ಹೀಗಿದೆ.
Related Articles
Advertisement
ಧವಸಧಾನ್ಯ ಪ್ರತ್ಯೇಕಿಸುವ ಯಂತ್ರ: ಕಸಕಡ್ಡಿಗಳಿಂದ ಧವಸಧಾನ್ಯಗಳನ್ನು ಯಂತ್ರವೊಂದನ್ನು ಡಾಲ್ಫಿನ್ ಕಂಪೆನಿ ಪ್ರದರ್ಶನಕ್ಕಿಟ್ಟಿದೆ. ಇದರ ಕಾರ್ಯನಿರ್ವಹಣೆಗೆ ವಿದ್ಯುತ್, ಡೀಸೆಲ್ ಸೇರಿದಂತೆ ಯಾವುದೇ ಇಂಧನದ ಅವಶ್ಯಕತೆ ಇಲ್ಲ.
ಸುಮಾರು 10 ಅಡಿ ಎತ್ತರದಿಂದ ರಾಗಿ, ಜೋಳ ಸೇರಿದಂತೆ ಯಾವುದೇ ಪ್ರಕಾರದ ಧವಸಧಾನ್ಯಗಳನ್ನು ಸುರಿದರೆ ಸಾಕು, ಜೊಳ್ಳು, ಕಸಕಡ್ಡಿ ಮತ್ತು ಕಾಳುಗಳನ್ನು ಪ್ರತ್ಯೇಕಗೊಳಿಸುತ್ತದೆ. ಗಂಟೆಗೆ 2 ಕ್ವಿಂಟಲ್ ಕಾಳುಗಳನ್ನು ಇದು ಪ್ರತ್ಯೇಕಸುವ ಸಾಮರ್ಥ್ಯ ಹೊಂದಿದೆ. ಆದರೆ, ಗೋಧಿ ಮತ್ತಿತರ ಉದ್ದದ ಧವಸಧಾನ್ಯಗಳನ್ನು ಇದು ಪ್ರತ್ಯೇಕಿಸುವುದಿಲ್ಲ. ಈ ಯಂತ್ರದ ಬೆಲೆ 10 ಸಾವಿರ ರೂ. ಆಗಿದೆ.
ದನಗಳಿಗೂ ಮ್ಯಾಟ್!: ದನಗಳಿಗಾಗಿಯೇ ಹಾಸಿಗೆ ರೂಪದ ಮ್ಯಾಟ್‌ವೊಂದನ್ನು ಸುಚೇತ್ ಅಗ್ರೋ ಕಂಪೆನಿ ಪರಿಚಯಿಸಿದೆ. ಈ ಮ್ಯಾಟ್ ಹಸುಗಳ ಪಾದಗಳ ರಕ್ಷಣೆ ಮಾಡುತ್ತದೆ. ಅಷ್ಟೇ ಅಲ್ಲ, ಮೃದುವಾಗಿರುವುದರಿಂದ ಇದರ ಮೇಲೆ ಹಸುಗಳು ಮಲಗಲು ಹಿತವಾಗಿರುತ್ತದೆ. ಈ ಮ್ಯಾಟ್ ಗಾತ್ರ 6×4 ಅಡಿ.
ಮುಂದಿನ ಎರಡು ವರ್ಷಗಳಲ್ಲಿ ಆಕಳು ಗಂಜಲಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಈಗ ಸಾಮಾನ್ಯವಾಗಿ ಗಂಜಲು ಕಾಂಕ್ರೀಟ್ ಮೇಲೆ ಬಿದ್ದಾಗ, ಶೇ. 40ರಷ್ಟು ಇಂಗುತ್ತದೆ. ಶೇ. 60ರಷ್ಟು ಸಂಗ್ರಹಿಸಲಾಗುತ್ತಿದೆ. ಮ್ಯಾಟ್‌ನಿಂದ ಶೇ. 100ರಷ್ಟು ಗಂಜಲನ್ನು ಸಂಗ್ರಹಿಸಬಹುದು. ಇದರ ಬೆಲೆ 3 ಸಾವಿರ ರೂ. ಎಂದು ಆ ಕಂಪೆನಿಯ ಚೇತನ್ ಮಾಹಿತಿ ನೀಡಿದರು.
ದಿನದ ಕೆಲಸ ತಾಸಿನಲ್ಲಿ ಫಿನಿಷ್: ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಒಂದು ಸಾವಿರ ತೆಂಗಿನಕಾಯಿಗಳನ್ನು ಸುಲಿಯಬಹುದು. ಆದರೆ, ಈ ಕೆಲಸವನ್ನು ಕೇವಲ ಒಂದು ತಾಸಿನಲ್ಲಿ ಮಾಡಿಮುಗಿಸುವ ಸ್ವಯಂಚಾಲಿತ ಕಾಯಿಸುಲಿಯುವ ಯಂತ್ರ ಮೇಳದಲ್ಲಿ ಕಾಣಬಹುದು. ಮರಗದಹಳ್ಳಿ ಅಗ್ರೋ ಫಾಮ್ಸ್ì ಇದನ್ನು ಪರಿಚಯಿಸಿದೆ.
ಗಂಟೆಗೆ 1,000ರಿಂದ 1,500 ಕಾಯಿಗಳನ್ನು ಇದು ಸುಲಿಯುತ್ತದೆ. ಇದರೊಂದಿಗೆ ಕಾಯಿಸುಲಿಯುವ ವೆಚ್ಚ ಅಧಕ್ಕರ್ಧ ಇಳಿಕೆಯಾಗಲಿದೆ. ಒಂದು ಕಾಯಿ ಸುಲಿಯಲು ಈಗ 40 ಪೈಸೆ ಆಗುತ್ತಿದೆ. ಈ ಯಂತ್ರದಿಂದ 17 ಪೈಸೆ ಆಗುತ್ತದೆ. 7.5 ಎಚ್‌ಪಿ ಮೋಟಾರು ಸಾಮರ್ಥ್ಯ ಹೊಂದಿದೆ. ಸಾವಿರ ಕಾಯಿ ಸುಲಿದರೆ, ಅದರಲ್ಲಿ 20ರಿಂದ 30 ಕಾಯಿಗಳು ಮಾತ್ರ ಹಾಳಾಗಬಹುದು. ಈ ಯಂತ್ರದ ಬೆಲೆ 4.5 ಲಕ್ಷ ರೂ. ಡೀಸೆಲ್ ಚಾಲಿತ ಯಂತ್ರ ಇದಾಗಿದೆ.
ಮೋಟೊಕಾರ್ಟ್: ದೈತ್ಯಾಕಾರದ ಟ್ರ್ಯಾಕ್ಟರ್‌ಗಳನ್ನು ನೀಡು ಕಂಡಿದ್ದೀರಿ. ಆದರೆ, ಕಾಲ್ನಡಿಯಲ್ಲಿ ತೆಗೆದುಕೊಂಡು ಹೋಗುವ ಮೋಟಾರು ಚಾಲಿತ ಟ್ರ್ಯಾಕ್ಟರ್ ಬಂದಿದೆ. ಅದರ ಹೆಸರು “ಮೋಟೊಕಾರ್ಟ್’. ಸಣ್ಣ ಹಿಡುವಳಿದಾರರಿಗೆ ಇದು ಹೇಳಿಮಾಡಿಸಿದ್ದಾಗಿದೆ. ಸುಲಭ, ಸರಳ ಮತ್ತು ಕನಿಷ್ಠ ನಿರ್ವಹಣೆ.
ಕೇವಲ 2.5 ಅಡಿ ಜಾಗದಲ್ಲೂ ಅನಾಯಾಸವಾಗಿ ಈ ಮೋಟೊಕಾರ್ಟ್ ನುಸುಳಿಕೊಂಡು ಹೋಗುತ್ತದೆ. 125ರಿಂದ 160 ಕೆ.ಜಿ. ಸಾಮರ್ಥ್ಯದ ಉತ್ಪನ್ನಗಳನ್ನು ಇದರಲ್ಲಿಟ್ಟು ಸಾಗಿಸಬಹುದು. ಇದನ್ನು ಎಳೆದುಕೊಂಡು ಹೋಗಬೇಕಿಲ್ಲ. ಮೋಟಾರು ಚಾಲಿತ ಆಗಿದ್ದು, ಗಂಟೆಗೆ 0.5 ಕಿ.ಮೀ. ಇದರ ವೇಗ!
ಮಧುವನ ಹಳ್ಳಿ: ದಿ ಆರ್ಟ್ ಆಫ್ ಲಿವಿಂಗ್ ಗ್ರಾಮೀಣ ಸೊಗಡಿನ ಅನುಭವ ನೀಡುವ ಮಧುವನ ಎಂಬ ಹಳ್ಳಿಯನ್ನು ನಿರ್ಮಿಸಿದೆ. ಇದರಲ್ಲಿ ನೀರಿನ ಕೆಂದಾವರೆಯ ಕೊಳ, ನಾಗರಕಲ್ಲಿನ ಕಟ್ಟೆಯ ಬನ್ನಿಮರ, ಚಿನ್ನಿ-ದಾಂಡು, ಬುಗುರಿ, ಮರಕೊತಿ, ಲಗೋರಿ ಆಟಗಳು,
ದನಕರುಗಳ ಗಂಟೆ ನಾದ, ಹಳ್ಳಿಯ ಮುದ್ದೆಯೂಟ, ಕುಂಬಾರ ಮಡಿಕೆ ತಯಾರಿಕೆ, ಕಮ್ಮಾರರ ಕುಲುಮೆ ಊದುವುದು ಸೇರಿದಂತೆ ಅಪ್ಪಟ ಹಳ್ಳಿಯ ಬದುಕು ಈ ಮಧುವನದಲ್ಲಿ ಕಾಣಬಹುದು. ಇದು ಡಿಸೆಂಬರ್‌ನಲ್ಲಿ ಆರಂಭಗೊಳ್ಳಲಿದೆ. ಇದರ ಸಂಕ್ಷಿಪ್ತ ಪರಿಚಯ ಮೇಳದಲ್ಲಿ ಸಿಗಲಿದೆ.
ಕ್ಯಾಮೆರಾ ಕಣ್ಣಲ್ಲಿ ಕೊಳವೆಬಾವಿ ಚಿತ್ರಣ: ಅಂತರ್ಜಲ ಮಟ್ಟ ಎಷ್ಟಿದೆ ಎಂಬುದನ್ನು ತಿಳಿಯಬೇಕೆ? ಕೊಳವೆಬಾವಿ ಒಣಗಿದೆಯೇ? ಮರಳುಮಿಶ್ರಿತ ನೀರು ಬರುತ್ತಿದೆಯೇ? ಕೊಳವೆಬಾವಿಯಲ್ಲಿ ಪಂಪ್‌ಸೆಟ್ ಕೆಟ್ಟುನಿಂತಿದೆಯೇ? ಇದೆಲ್ಲವನ್ನೂ ಕ್ಯಾಮೆರಾ ಸಹಾಯದಿಂದ ಕೊಳವೆಬಾವಿಯಯನ್ನು ಸ್ಕ್ಯಾನ್‌ಮಾಡಿ, ಟಿವಿಯಲ್ಲಿ ತೋರಿಸಿ ಸಿಡಿ ಮಾಡಿಕೊಡಲಿದೆ ಕರಗಮ್ಮದೇವಿ ಬೋರ್‌ವೆಲ್ ಸ್ಕ್ಯಾನಿಂಗ್.
ಅತಿ ಚಿಕ್ಕಗಾತ್ರದ ಪೈಪ್‌ನ ಮುಂಭಾಗಕ್ಕೆ ಕ್ಯಾಮೆರಾ ಅಳವಡಿಸಲಾಗಿರುತ್ತದೆ. ಅದನ್ನು ಕೊಳವೆಬಾವಿಯಲ್ಲಿ ಬಿಡಲಾಗುತ್ತದೆ. ಅದರ ಸಹಾಯದಿಂದ ಕೊಳವೆಬಾವಿಯ ಸಮಗ್ರ ಚಿತ್ರಣ ನಿಮ್ಮ ಮುಂದಿಡಲಾಗುತ್ತದೆ.