Advertisement
ವೇಸ್ಟ್ ಮ್ಯಾನೇಜ್‌ಮೆಂಟ್ ಅನ್ನೋದು ನಮ್ಮದೊಂದೇ ಅಲ್ಲ, ಎಲ್ಲಾ ಮಹಾನಗರಗಳ ದೊಡ್ಡ ಸಮಸ್ಯೆ. ಒಂದು ಕಡೆಯಿಂದ ಎತ್ತಿಕೊಂಡು ಇನ್ನೊಂದು ಕಡೆ ಹಾಕುವುದರಿಂದ ತ್ಯಾಜ್ಯ ವಿಲೇವಾರಿಯೇನೋ ಆಗುತ್ತೆ ಆದರೆ ಕಸದ ಸಮಸ್ಯೆಗೆ ಸಿಕ್ಕಂತಾಗುವುದಿಲ್ಲ ಎನ್ನುವುದು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಸಂಗತಿ. ತ್ಯಾಜ್ಯದ ಉತ್ಪಾದಕರು ನಾವೇ ಆಗಿರುವುದರಿಂದ, ತ್ಯಾಜ್ಯ ಸಮಸ್ಯೆಯ ಪರಿಹಾರ ಕೂಡಾ ನಮ್ಮಲ್ಲೇ ಇದೆ. “ಪ್ಲೇಟ್ ಬ್ಯಾಂಕ್’ಗಳು ಇದಕ್ಕೊಂದು ಉದಾಹರಣೆ!
Related Articles
Advertisement
1. ಕೆ.ಆರ್.ಪುರಂ ರೈಸಿಂಗ್ ಪ್ಲೇಟ್ ಬ್ಯಾಂಕ್: ಸಾರ್ವಜನಿಕ ಸಮಸ್ಯೆಗಳನ್ನು ಪ್ರತಿಭಟನೆ ನ‚ಡೆಸುವ ಮೂಲಕ ಅಹವಾಲು ಸಲ್ಲಿಸುವ ಮೂಲಕ, ಸಂಬಂಧ ಪಟ್ಟವರಿಗೆ ದೂರು ನೀಡುವುದರ ಮೂಲಕ ವ್ಯವಸ್ಥೆಗೆ ಚುರುಕು ನೀಡುವ ಕೆಲಸದಲ್ಲಿ ತೊಡಗಿರು ಸಂಘಗಳಲ್ಲಿ ಒಂದು ಕೆ.ಆರ್.ಪುರಂ ರೈಸಿಂಗ್. ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ಸಂಘ, ಸ್ಥಳೀಯ ಕಾರ್ಪೊರೇಟರ್ ಪೂರ್ಣಿಮಾ ಶ್ರೀನಿವಾಸ್ ಅವರ ಸಹಾಯದಿಂದ ಪ್ಲೇಟ್ ಬ್ಯಾಂಕನ್ನು ಪ್ರಾರಂಭಿಸಿತು. ಈಗ ಇವರ ಸಂಗ್ರಹದಲ್ಲಿ ತಲಾ 150 ತಟ್ಟೆ, ಲೋಟ, ಸ್ಪೂನು ಸೇರಿದಂತೆ ಹಲವಾರು ಪಾತ್ರೆಗಳಿವೆ.
ಈ ವರ್ಷ ಇವುಗಳನ್ನು ಸಾವಿರಕ್ಕೆ ಏರಿಸುವ ಯೋಜನೆ ಇದೆ ಎನ್ನುತ್ತಾರೆ ಉದಯವಾಣಿ ಜೊತೆ ಮಾತಾಡಿದ ಕೆ.ಆರ್.ಪುರಂ ರೈಸಿಂಗ್ ಸಂಘದ ಉಪಾಧ್ಯಕ್ಷ ನವೀನ್ ಅವರು. ಇದು ಲಾಭರಹಿತ ಉದ್ದೇಶದಿಂದ ಹುಟ್ಟಿಕೊಂಡ ಪ್ಲೇಟ್ ಬ್ಯಾಂಕ್ ಆಗಿರುವುದರಿಂದ ಉಚಿತವಾಗಿ ಯಾರು ಬೇಕಾದರೂ ಇವುಗಳನ್ನು ಬಳಸಿ ಹಿಂದಿರುಗಿಸಬಹುದು. ಹಿಂದಿರುಗಿಸುವಾಗ ಅವುಗಳನ್ನು ತೊಳೆದು ಕೊಡಬೇಕು ಎಂಬುದೊಂದೇ ನಿಯಮ. ಸ್ವಚ್ಚತೆಗೆ ಮೊದಲ ಆದ್ಯತೆ. ಬೆಂಗಳೂರು ನಗರದಲ್ಲಿ ವಾಸವಿರುವ ಯಾರು ಬೇಕಾದರೂ ಈ ಪ್ಲೇಟ್ ಬ್ಯಾಂಕನ್ನು ಬಳಸಬಹುದು. ಸಂಪರ್ಕ ಸಂಖ್ಯೆ: 8880884999 2. ಸ್ಪಿಲ್ ಸೇವರ್: ಐಟಿ ಕ್ಷೇತ್ರದಲ್ಲಿ ದುಡಿಯುತ್ತಿದ್ದ ಇಬ್ಬರು ಹೆಣ್ಣುಮಕ್ಕಳು ಶುರುಮಾಡಿದ ಪ್ಲೇಟ್ ಬ್ಯಾಂಕ್ ಇದು. ಪೂಜಾ ಈಗ ಐಟಿ ಕ್ಷೇತ್ರದಲ್ಲಿಲ್ಲ, ಪೂರ್ಣಪ್ರಮಾಣದಲ್ಲಿ ಸಂಸ್ಥೆಯ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ. ಶಾಲಿನಿ ಅವರು ಉದ್ಯೋಗದಲ್ಲಿದ್ದುಕೊಂಡೇ ಗೆಳತಿ ಪೂಜಾ ಅವರಿಗೆ ಸಹಕರಿಸುತ್ತಿದ್ದಾರೆ. “ಕಾರ್ಪೊರೇಟ್ ಮೀಟಿಂಗ್ ಮತ್ತು ಸಣ್ಣಪುಟ್ಟ ಪಾರ್ಟಿಗಳು ಮತ್ತು ಕೆಲ ಕೇಟರಿಂಗ್ ಸಂಸ್ಥೆಯವರೂ, ನಾವು ಒಳ್ಳೆಯ ಉದ್ದೇಶಕ್ಕೆ ಕೆಲಸ ಮಾಡುತ್ತಿರುವುದರಿಂದ ನಮ್ಮ ಪ್ಲೇಟು ಮತ್ತಿತರ ಪಾತ್ರೆಗಳನ್ನು ಕೊಂಡೊಯ್ಯುತ್ತಾರೆ. ಈಗೀಗ ಬಹಳಷ್ಟು ಜನರು ಸ್ವಯಂಪ್ರೇರಿತರಾಗಿ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ನಮ್ಮಂತೆಯೇ ಇನ್ನಷ್ಟು ಜನರು ಸ್ಪಿಲ್ ಸೇವರ್ ಥರದ ಪ್ಲೇಟ್ ಬ್ಯಾಂಕ್‌ಗಳನ್ನು ತೆರೆಯಬೇಕು. ಆಗ ನಮ್ಮ ನಗರದ ತ್ಯಾಜ್ಯ ಸಮಸ್ಯೆ ಖಂಡಿತ ನಿಯಂತ್ರಣಕ್ಕೆ ಬರುತ್ತೆ’ ಅನ್ನೋದು ಪೂಜಾ ಅವರ ಅಭಿಪ್ರಾಯ. ಇವರು ತಮ್ಮ ಸೇವೆಗೆ ಪ್ರತಿ ವ್ಯಕ್ತಿಗೆ 25 ರಂತೆ ಶುಲ್ಕ ವಿಧಿಸುತ್ತಾರೆ. ಒಂದು ಸೆಟ್ ಎಂದರೆ ಪ್ಲೇಟ್, ಲೋಟ, ಚಮಚ ಇತ್ಯಾದಿ ಪಾತ್ರೆಗಳು ಒಳಗೊಳ್ಳುತ್ತವೆ. ಒಂದು ವಿಶೇಷವೆಂದರೆ ಇಲ್ಲಿ ಪಾತ್ರೆಗಳನ್ನು ಸಂಸ್ಥೆಯವರೇ ತೊಳೆಯುತ್ತಾರೆ. ಗಿರಾಕಿಗಳು ತಾವೇ ತೊಳೆದು ಕೊಡುತ್ತೇವೆಂದರೆ ಶುಲ್ಕದಲ್ಲಿ ವಿನಾಯಿತಿ ಇದೆ. ಫೋನ್ ಮೂಲಕ ಆರ್ಡರ್ ಕೊಟ್ಟರೆ ಮನೆ ಬಾಗಿಲಿಗೇ ಪ್ಲೇಟುಗಳು ಸರಬರಾಜಾಗುವುದು.
ಫೇಸ್‌ಬುಕ್ ಪೇಜ್(ಫೇಸ್‌ಬುಕ್ ಸಿಂಬಲ್ ಹಾಕಿ): www.facebook.com/SpillSavers 3. ಅದಮ್ಯ ಚೇತನ: ತೇಜಸ್ವಿನಿ ಅನಂತಕುಮಾರ್ ಅವರ ನೇತೃತ್ವದ ಸ್ವಸಹಾಯ ಸಂಘ “ಅದಮ್ಯ ಚೇತನ’ ಕೂಡಾ ಪ್ಲೇಟ್ ಬ್ಯಾಂಕನ್ನು ನಡೆಸುತ್ತಿದೆ. ಇವರ ಸಂಗ್ರಹದಲ್ಲಿ ಸುಮಾರು 10,000 ಸ್ಟೀಲ್ ತಟ್ಟೆಗಳು, ಚಮಚಗಳು ಮತ್ತು ಲೋಟಗಳಿವೆ. ನಗರದಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳಿಗೆ ಇಲ್ಲಿಂದ ಪಾತ್ರೆಗಳನ್ನು ಯಾರು ಬೇಕಾದರೂ ಪಡೆಯಬಹುದಾಗಿದೆ. ಯಾವುದೇ ಶುಲ್ಕವನ್ನು ನೀಡಬೇಕಿಲ್ಲ. ಬಸವನಗುಡಿಯ ಆಸುಪಾಸಿನಲ್ಲಿರುವ ಜನರು, ಬರ್ತ್‌ಡೇ ಪಾರ್ಟಿ, ಪೂಜೆ, ಹೀಗೆ ಮನೆಯಲ್ಲಿ ಯಾವ ಕಾರ್ಯಕ್ರಮಗಳಿದ್ದರೂ ಇಲ್ಲಿಂದ ಪಾತ್ರೆಗಳನ್ನು ಪಡೆದುಕೊಳ್ಳುತ್ತಾರೆ. ಸಂಸದ ಅನಂತಕುಮಾರ್ ಅವರ ಪತ್ನಿಯಾಗಿರುವ ತೇಜಸ್ವಿನಿಯವರು ಭವಿಷ್ಯದಲ್ಲಿ ತಮ್ಮ ಪ್ಲೇಟ್ ಬ್ಯಾಂಕ್‌ಅನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದ್ದಾರೆ.
ಸಂಪರ್ಕ: 080-26620404 4. ರೆಂಟ್ ಎ ಕಟ್ಲರಿ: ಮನೆಯಲ್ಲಿ ಪರಿಸರಸ್ನೇಹಿ ವಸ್ತುಗಳನ್ನೇ ಬಳಸುತ್ತಿದ್ದರು ಲಕ್ಷಿ. ಎಷ್ಟರಮಟ್ಟಿಗೆ ಅವರು ಪ್ಲಾಸ್ಟಿಕ್‌ನಿಂದ ದೂರವಿದ್ದರು ಎಂದರೆ, ತಾವೆಲ್ಲೇ ಹೋದರೂ ಒಂದು ಸ್ಟೀಲ್ ತಟ್ಟೆ, ಸ್ಪೂನ್, ಲೋಟ ಇವು ಮೂರನ್ನು ಕೊಂಡೊಯ್ಯುತ್ತಿದ್ದರು. ಎಲ್ಲಾದರೂ ಕಾಫಿ ಕುಡಿಯಬೇಕಾಗಿ ಬಂದರೆ, ಹೋಟೆಲ್‌ನಲ್ಲಿ ತಿಂಡಿ ತಿನ್ನಬೇಕಾಗಿ ಬಂದರೆ ಅಲ್ಲಿನ ಪ್ಲಾಸ್ಟಿಕ್ ಲೋಟ ಅಥವಾ ತಟ್ಟೆಯಲ್ಲಿ ತಿನ್ನುವುದರ ಬದಲಾಗಿ ತಮ್ಮದೇ ತಟ್ಟೆಯನ್ನು ಬಳಸುತ್ತಿದ್ದಾರೆ. ಅವರು ತಮ್ಮ ಸ್ನೇಹಿತೆ ರಿಶಿತಾ ಅವರೊಂದಿಗೆ ಸೇರಿ ಶುರು ಮಾಡಿದ ಪ್ಲೇಟ್ ಬ್ಯಾಂಕ್ “ರೆಂಟ್ ಎ ಕಟ್ಲರಿ’. ಸದ್ಯಕ್ಕೆ ಈ ಸಂಸ್ಥೆ ವೈಟ್‌ಫೀಲ್ಡ್ ಮತ್ತು ಸರ್ಜಾಪುರದ ಕಾರ್ಯವಾಪ್ತಿಯಲ್ಲಿ ಮಾತ್ರ ಕಾರ್ಯಾಚರಿಸುತ್ತಿದೆ. ಅದರೆ ಇವೆರಡು ಪ್ರದೇಶಗಳ ಗಿರಾಕಿಗಳಿಗೆ ಮಾತ್ರ ಹೋಂ ಡೆಲಿವರಿ ಸೌಲಭ್ಯವಿದೆ. “ಬೇರೆ ಪ್ರದೇಶದ ಜನರು ನಮ್ಮಲ್ಲಿಗೇ ಬಂದು ಕೊಂಡೊಯ್ದ ಉದಾಹರಣೆಗಳು ಬಹಳಷ್ಟಿವೆ. ನಾಗರಿಕರಲ್ಲಿ ಪರಿಸರ ಕಾಳಜಿ ಜಾಗೃತವಾಗುತ್ತಿದೆ ಎನ್ನುವುದು ಇದರಿಂದ ತಿಳಿಯಬಹುದು’ ಎನ್ನುತ್ತಾರೆ ಲಕ್ಷಿ. ಅಂದ ಹಾಗೆ ಪಾತ್ರೆಗಳನ್ನು ತೊಳೆಯಲು ವಿಶೇಷ ವ್ಯವಸ್ಥೆಯನ್ನು ಇಲ್ಲಿ ಅವರು ಮಾಡಿಕೊಂಡಿದ್ದಾರೆ. ತಾವೇ ತಯಾರಿಸಿದ ನಿಂಬೆಯ ಲಿಕ್ವಿಡ್‌ನಿಂದ ಪಾತ್ರೆಗಳನ್ನು ತೊಳೆಯಲಾಗುತ್ತೆ. ನಂತರ ಅವುಗಳನ್ನು ನೀರು ಉಳಿಯದಂತೆ ಸಂಗ್ರಹಿಸಲಾಗುತ್ತೆ. ಸ್ಟೀಲ್ ತಟ್ಟೆ, ಬೌಲ್, ಸ್ಪೂನ್ ಇವು ಮೂರರ ಒಂದು ಸೆಟ್‌ಗೆ ದಿನಕ್ಕೆ 15 ರೂ. ಶುಲ್ಕ ನಿಗದಿ ಪಡಿಸಿದ್ದಾರೆ.
ಫೇಸ್‌ಬುಕ್ ಪೇಜ್(ಫೇಸ್‌ಬುಕ್ ಸಿಂಬಲ್ ಹಾಕಿ): www.facebook.com/rentacutlery/ 5. ರೆಂಟ್ ಆನ್ ಗೋ: ಇದು ಆನ್‌ಲೈನ್ ಪ್ಲೇಟ್ ಬ್ಯಾಂಕ್. ಇಲ್ಲಿ ನೀಡಲಾಗಿರುವ ಜಾಲತಾಣಕ್ಕೆ ಭೇಟಿ ನೀಡಿದರೆ ಅವರ ಬಳಿ ಸದ್ಯ ಲಭ್ಯ ಇರುವ ಪಾತ್ರೆಗಳ ಮಾಹಿತಿ ಮತ್ತು ಅದರ ಶುಲ್ಕವನ್ನು ತಿಳಿದುಕೊಳ್ಳಬಹುದು. ಒಂದು ಶರತ್ತೆಂದರೆ ಪಾತ್ರೆಗಳನ್ನು ಪಡೆಯುವ ಮುನ್ನ ಅಡ್ವಾನ್ಸ್ ಮೊತ್ತವನ್ನು ಪಾವತಿಸಬೇಕು. ಅವರ ಬಳಿ ಇರುವ ಸಂಗ್ರಹ ಸೀಮಿತವಾದರೂ ಗಿರಾಕಿಗಳ ಅಗತ್ಯಕ್ಕೆ ಹೊಂದಿದರೆ ಬಾಡಿಗೆಗೆ ಪಡೆಯಬಹುದು.
ವೆಬ್‌ಸೈಟ್: goo.gl/SyunwY * ಹರ್ಷವರ್ಧನ್ ಸುಳ್ಯ